​ಮನಮೋಹನ್ ಅವರನ್ನು ಸೋನಿಯಾ ಪ್ರಧಾನಿ ಮಾಡಿದ್ದೇಕೆ ಗೊತ್ತೇ?

Update: 2018-03-10 03:59 GMT

ಹೊಸದಿಲ್ಲಿ, ಮಾ.10: ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ನೇತೃತ್ವದಲ್ಲಿ ಯುಪಿಎಗೆ 2004ರ ಚುನಾವಣೆಯಲ್ಲಿ ಬಹುಮತ ಬಂದಿದ್ದರೂ ಸ್ವತಃ ಸೋನಿಯಾ ಪ್ರಧಾನಿಯಾಗದೇ, ಮನಮೋಹನ ಸಿಂಗ್ ಅವರನ್ನು ಪ್ರಧಾನಿ ಮಾಡಿದ ಬಗ್ಗೆ ಚರ್ಚೆಗಳು ಕೇಳಿ ಬರುತ್ತಿದ್ದವು. ಆದರೆ ಈ ಪ್ರಶ್ನೆಗೆ ಸೋನಿಯಾ ಗಾಂಧಿ ಸ್ವತಃ ಉತ್ತರಿಸಿದ್ದಾರೆ. "ನನ್ನ ಇತಿಮಿತಿಗಳ ಅರಿವು ನನಗಿತ್ತು. ಮನಮೋಹನ್ ಸಿಂಗ್ ನನಗಿಂತ ಉತ್ತಮ ಪ್ರಧಾನಿಯಾಗಬಲ್ಲರು ಎನ್ನುವುದು ನನಗೆ ತಿಳಿದಿತ್ತು" ಎಂದು ಸೋನಿಯಾ ಬಹಿರಂಗಪಡಿಸಿದ್ದಾರೆ.

ಇಂಡಿಯಾ ಟುಡೇ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಷಯ ಬಹಿರಂಗಡಿಸಿದರು. ಪಕ್ಷ ಬಯಸಿದರೆ 2019ರ ಚುನಾವಣೆಯಲ್ಲಿ ರಾಯಬರೇಲಿ ಕ್ಷೇತ್ರದಿಂದಲೇ ಕಣಕ್ಕೆ ಇಳಿಯುವುದಾಗಿ ಅವರು ಸ್ಪಷ್ಟಪಡಿಸಿದರು. 71 ವರ್ಷಗಳ ಸೋನಿಯಾ 19 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದು, ಕಳೆದ ವರ್ಷ ಪಕ್ಷದ ಆಂತರಿಕ ಚುನಾವಣೆ ಬಳಿಕ ರಾಹುಲ್‌ಗಾಂಧಿಗೆ ಅಧಿಕಾರ ಹಸ್ತಾಂತರಿಸಿದ್ದರು.

ಕಾಂಗ್ರೆಸ್ ಅಧ್ಯಕ್ಷೆ ಪದವಿಯಿಂದ ಇಳಿದ ಬಳಿಕ ಇದೇ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ಯುಪಿಎ ಅಧ್ಯಕ್ಷೆ, ತಮ್ಮ ಮಕ್ಕಳು, ತಮ್ಮ ಇತಿಮಿತಿಗಳು, ಭಾರತದಲ್ಲಿ ಪ್ರಜಾಪ್ರಭುತ್ವದ ಪಾತ್ರ ಮತ್ತಿತರ ವಿಷಯಗಳ ಬಗ್ಗೆ ಮಾತನಾಡಿದರು. ಈಗಲೂ ಮಗನಿಗೆ ಸಲಹೆ ನೀಡುತ್ತಿದ್ದೀರಾ ಎಂಬ ಪ್ರಶ್ನೆಗೆ, "ಆತನ ಜವಾಬ್ದಾರಿಗಳ ಅರಿವು ಆತನಿಗೆ ಇದೆ. ನನ್ನ ಅಗತ್ಯ ಆತನಿಗಿದ್ದರೆ ನಾನಿದ್ದೇನೆ. ಆದರೆ ನಾನಾಗಿಯೇ ಸಲಹೆ ನೀಡಲು ಹೋಗುವುದಿಲ್ಲ. ಹಿರಿಯ ಮುಖಂಡರ ಜತೆ, ಹೊಸಮುಖಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಪಕ್ಷಕ್ಕೆ ಪುನಶ್ಚೇತನ ನೀಡಲು ಪ್ರಯತ್ನಿಸುತ್ತಿದ್ದಾನೆ" ಎಂದು ಉತ್ತರಿಸಿದರು.

ತಳಹಂತದ ಕಾರ್ಯಕರ್ತರ ಜತೆ ಸಂಬಂಧ ಬೆಳೆಸಲು ಪಕ್ಷ ಹೊಸ ಕಾರ್ಯತಂತ್ರವನ್ನು ರೂಪಿಸುವ ಅಗತ್ಯವಿದೆ ಎಂದೂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News