ಚಿನ್ನಕ್ಕೆ ಗುರಿ ಇಟ್ಟ ಆಧುನಿಕ ಏಕಲವ್ಯ!

Update: 2018-03-10 05:56 GMT

ಜಮ್ಶೆಡ್‌ಪುರ, ಮಾ.10: ಇದು ಆಧುನಿಕ ಏಕಲವ್ಯನ ಕಥೆ. ಒಂದೇ ಬದಲಾವಣೆ ಎಂದರೆ ಈತ ತನ್ನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಸಮರ್ಪಿಸಿಲ್ಲ. ಆದರೆ ಸ್ವಯಂ ತರಬೇತಿ ಪಡೆದು ಏಷ್ಯಾಕಪ್ ಬಿಲ್ಗಾರಿಕೆ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

ಈತನ ಹೆಸರು ಗೋರ ಹೋ(17). ಈತ ಆಕಾಶ್  ಹಾಗೂ ಗೌರವ್ ಲಂಬೆ ಜತೆಗೂಡಿ ಏಷ್ಯಾ ಕಪ್ ಸ್ಟೇಜ್-1 ಬಿಲ್ಗಾರಿಕೆ ಕೂಟದಲ್ಲಿ ಚಿನ್ನ ಗೆದ್ದಿದ್ದಾರೆ. ಫೈನಲ್‌ನಲ್ಲಿ ಮಂಗೋಲಿಯಾ ಸ್ಪರ್ಧಿಗಳನ್ನು ಮಣಿಸಿ ರಿಕರ್ವ್ ವಿಭಾಗದ ಚಿನ್ನಕ್ಕೆ ಕೊಳರೊಡ್ಡಿದ್ದಾರೆ.

ರಾಜನಗರದ ಬಲಿಜ್‌ಹೂಡಿ ಗ್ರಾಮದ ಬುಡಕಟ್ಟು ಜನಾಂಗದ ಗೋರಾ ಹೋ ಬಿಲ್ಲು- ಬಾಣದ ಕೌಶಲ ಮೆರೆದು ಸುದ್ದಿಯಾಗಿದ್ದಾನೆ. ಸಬ್‌ ಜೂನಿಯರ್ ಮತ್ತು ಜೂನಿಯರ್ ಸ್ಪರ್ಧೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದ ಸಾಧನೆ ಮಾಡಿರುವ ಈ ಅದ್ಭುತ ಪ್ರತಿಭೆ, ಆರು ವರ್ಷಗಳಲ್ಲೇ ಚಿನ್ನದ ಹುಡುಗನಾಗಿ ಮಾರ್ಪಟ್ಟಿದ್ದಾನೆ. ಈತನ ಸಾಧನೆ ನೋಡಿದ ಎಲ್ಲರೂ ಈತನ ಮುಂದಿನ ಹೆಜ್ಜೆ 2020ರ ಟೋಕಿಯೊ ಒಲಿಂಪಿಕ್ಸ್ ಎಂದು ಬಣ್ಣಿಸುತ್ತಿದ್ದಾರೆ.

"ಈ ಬಾಲಕ ಒಲಿಂಪಿಕ್ ಪ್ರತಿಭೆ" ಎಂದು ಡುಗ್ನಿ ಆರ್ಚರಿ ಅಕಾಡಮಿಯ ಕೋಚ್ ಬಿ.ಶ್ರೀನಿವಾಸರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈತನ ಸಹಜ ಪ್ರತಿಭೆಗೆ ಅತ್ಯುತ್ತಮ ವಿದೇಶಿ ಕೋಚ್‌ಗಳ ಮಾರ್ಗದರ್ಶನ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ರಾಜ್ಯ ಸರ್ಕಾರ ಈ ಗೋರಾ ಹೋನ ಪ್ರತಿಭೆಯನ್ನು ಗುರುತಿಸಿ 2.7 ಲಕ್ಷ ರೂಪಾಯಿಯ ವಿಶೇಷ ಬಿಲ್ಲು ನೀಡಿತ್ತು. ಬಡ ರೈತ ಕುಟುಂಬದಿಂದ ಬಂದಿರುವ ಈತನ ತಂದೆ ಖೈರೆಯು ಹೋ, ಪಾರ್ಶ್ವವಾಯುಪೀಡಿತರಾಗಿ ಎರಡು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. 2016ರಲ್ಲಿ ತಾಯಿ ಚಮೇನಿಯನ್ನೂ ಕಳೆದುಕೊಂಡಿದ್ದ. ಮೂವರು ಅಣ್ಣಂದಿರು ಈತನನ್ನು ಬೆಳೆಸುತ್ತಿದ್ದಾರೆ.

"ಪುಟ್ಟ ಹುಡುಗನಾಗಿದ್ದಾಗಲೇ ಬಿಲ್ಗಾರಿಕೆಯಲ್ಲಿ ಅದ್ಭುತ ಪ್ರತಿಭೆಯಾಗಿದ್ದ" ಎಂದು ಗೋರಾ ಹೋ ಅಣ್ಣ ಪ್ರೇಮ್‌ಶಂಕರ್ ಹೇಳುತ್ತಾರೆ. ಸೂಕ್ತ ಮಾರ್ಗದರ್ಶನ ಸಿಕ್ಕರೆ, ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದ ಇನ್ನೂ ಹಲವು ಕೂಟಗಳಲ್ಲಿ ಹೆಮ್ಮೆ ತರುವುದು ಖಚಿತ ಎಂಬ ವಿಶ್ವಾಸ ಅವರದ್ದು.

ಬಾಲ್ಯದಲ್ಲೇ ಅರ್ಜುನ ಬಿಲ್ಗಾರಿಕೆ ಅಕಾಡಮಿಯಲ್ಲಿ ಬಿಲ್ಗಾರಿಕೆ ತರಬೇತಿ ಪಡೆದ ಗೋರಾ ಹೋನ ಪ್ರತಿಭೆಯನ್ನು ಗುರುತಿಸಿದ ರಾವ್, ಈತನನ್ನು ಡುಗ್ನಿ ಅಕಾಡಮಿಗೆ ಕರೆದೊಯ್ದರು. 2014ರಲ್ಲಿ 13 ವರ್ಷದ ಹುಡುಗನಾಗಿದ್ದ ಈಗ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಶಾಲಾ ಕೂಟದಲ್ಲಿ ಚಿನ್ನ ಗೆದ್ದು ಗಮನ ಸೆಳೆದಿದ್ದ. ಜಾರ್ಖಂಡ್ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಅದೇ ವರ್ಷ 10 ಪದಕ ಬಾಚಿದ್ದ. ಈ ಸಾಧನೆಗಾಗಿ ಗೋರಾ ಹೋ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಂದ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ ಪಡೆದಿದ್ದ. ಬ್ಯಾಂಕಾಕ್ ಸಾಧನೆ ಬಳಿಕ ಗೋರಾ ಇದೀಗ ಎಪ್ರಿಲ್ 23ರಿಂದ ಶಾಂಘೈನಲ್ಲಿ ನಡೆಯುವ ವಿಶ್ವಕಪ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದು, ಅದಕ್ಕೆ ಗಮನ ಹರಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News