ಕನಿಷ್ಠ ಬ್ಯಾಲೆನ್ಸ್ ಖಾತೆಗಳ ಮೇಲಿನ ದಂಡ ಕಡಿತಗೊಳಿಸಿದ ಎಸ್‌ಬಿಐ

Update: 2018-03-13 08:22 GMT

 ಮುಂಬೈ, ಮಾ.13: ಸಾರ್ವಜನಿಕ ವಲಯದ ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಕನಿಷ್ಠ ಬ್ಯಾಲೆನ್ಸ್ ಮೇಲಿನ ದಂಡವನ್ನು ಕಡಿತಗೊಳಿಸುವುದಾಗಿ ಮಂಗಳವಾರ ಘೋಷಣೆ ಮಾಡಿದೆ.

ಉಳಿತಾಯ ಖಾತೆಗಳಲ್ಲಿ ತಿಂಗಳಿಗೆ ಸರಾಸರಿ ಕನಿಷ್ಠ ಬ್ಯಾಲೆನ್ಸ್(ಎಎಂಬಿ)ಕಾಯ್ದುಕೊಳ್ಳದಿರುವುದಕ್ಕೆ ದಂಡದ ಮಿತಿಯನ್ನು 70 ಶೇ.ಗಿಂತಲೂ ಕಡಿಮೆ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ನಿರ್ಧರಿಸಿದೆ. ಈ ಹೆಜ್ಜೆಯು ದೇಶದ 25 ಕೋಟಿ ಬ್ಯಾಂಕ್ ಖಾತೆದಾರರಿಗೆ ಲಾಭವಾಗಲಿದೆ.

ಎಸ್‌ಬಿಐನ ಪರಿಷ್ಕೃತ ಶುಲ್ಕ ಎ.1 ರಿಂದ ಜಾರಿಗೆ ಬರಲಿದೆ.

ಮೆಟ್ರೊ ಹಾಗೂ ನಗರ ಪ್ರದೇಶಗಳಲ್ಲಿ ತಿಂಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರ ಖಾತೆಗಳ ಮೇಲೆ ಈಗಿರುವ ಪ್ರತಿ ತಿಂಗಳು ಗರಿಷ್ಠ 50 ರೂ.(ಜಿಎಸ್‌ಟಿ ಸಹಿತ)ಬದಲಿಗೆ ಪ್ರತಿ ತಿಂಗಳು 15 ರೂ.ಗೆ(ಜಿಎಸ್‌ಟಿ ಸಹಿತ)ಕಡಿತಗೊಳಿಸಲಾಗಿದೆ.

 ಅರೆ-ನಗರ ಹಾಗೂ ಗ್ರಾಮೀಣ ಕೇಂದ್ರಗಳಲ್ಲಿ ಈಗಿನ 40 ರೂ.ನಿಂದ ಅನುಕ್ರಮವಾಗಿ 12 ರೂ. ಹಾಗೂ 10 ರೂ.ಗೆ (ಜಿಎಸ್‌ಟಿ ಸಹಿತ)ಕಡಿತಗೊಳಿಸಲಾಗಿದೆ ಎಂದು ಎಸ್‌ಬಿಐ ಮಾಹಿತಿ ನೀಡಿದೆ.

 ಬ್ಯಾಂಕ್‌ಗಳು ಗ್ರಾಹಕರ ಮೇಲಿನ ದಂಡಗಳ ಮೂಲಕ ಹೆಚ್ಚು ಲಾಭ ಗಳಿಸುತ್ತಿದೆ ಎಂಬ ಅಂಶ ಬೆಳಕಿಗೆ ಬಂದ ಬಳಿಕ ಬ್ಯಾಂಕ್ ಸಾಕಷ್ಟು ಟೀಕೆ ಎದುರಿಸಿತ್ತು. ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಬ್ಯಾಂಕ್ ಗ್ರಾಹಕರ ಖಾತೆಯು ಖಾಯಂ ಉಳಿತಾಯ ಖಾತೆಯಾಗಿ ತಪ್ಪಾಗಿ ವರ್ಗೀಕೃತಗೊಂಡ ಕಾರಣ ಹೆಚ್ಚಿನ ದಂಡ ತೆರಬೇಕಾಗುತ್ತಿತ್ತು.

ಗ್ರಾಹಕರು ತಮ್ಮ ಖಾಯಂ ಉಳಿತಾಯ ಖಾತೆಯನ್ನು ಮೂಲ (ಬೇಸಿಕ್)ಉಳಿತಾಯ ಖಾತೆಯಾಗಿ ಪರಿವರ್ತಿಸಿದರೆ ಹೆಚ್ಚಿನ ದಂಡದಿಂದ ಪಾರಾಗಬಹುದು ಎಂದು ಎಸ್‌ಬಿಐ ತಿಳಿಸಿದೆ.

ಎಸ್‌ಬಿಐನ 41 ಕೋಟಿ ಉಳಿತಾಯ ಖಾತೆಗಳ ಪೈಕಿ 16 ಕೋಟಿ ಖಾತೆ ಪ್ರಧಾನಮಂತ್ರಿ ಜನ್ ಧನ್ ಯೋಜನೆ ಅಥವಾ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ಸ್ ಆಗಿರುತ್ತದೆ. ಈ ಎರಡು ಖಾತೆಗಳಿಗೆ ಕನಿಷ್ಠ ಮೊತ್ತ ಇರಬೇಕಾದ ಅಗತ್ಯವಿಲ್ಲ. ಖಾಯಂ ಉಳಿತಾಯ ಬ್ಯಾಂಕ್ ಖಾತೆಯನ್ನು ಮೂಲ ಉಳಿತಾಯ ಬ್ಯಾಂಕ್ ಖಾತೆಯಾಗಿ ಪರಿವರ್ತನೆ ಮಾಡಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ಬ್ಯಾಂಕ್ ನೀಡಿದ್ದು ಇದಕ್ಕೆ ಯಾವುದೇ ಶುಲ್ಕವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News