ದೇಶವಿರೋಧಿ ಶಕ್ತಿಗಳು ನನ್ನ ಪೋಷಕರ ದಾರಿ ತಪ್ಪಿಸಿವೆ: ಹಾದಿಯಾ

Update: 2018-03-13 15:07 GMT

ಕೋಯಿಕ್ಕೋಡ್, ಮಾ.13: ತನ್ನ ತಂದೆ ಹಾಗು ತಾಯಿಯನ್ನು ರಾಷ್ಟ್ರ ವಿರೋಧಿ ಶಕ್ತಿಗಳು ದಾರಿ ತಪ್ಪಿಸಿವೆ ಎಂದು ಹಾದಿಯಾ ಹೇಳಿದ್ದಾರೆ.

ಪತಿ ಶಫಿನ್ ಜಹಾನ್ ರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನನ್ನ ಪೋಷಕರು ನನ್ನೊಂದಿಗೆ ಆತ್ಮೀಯತೆಯಿಂದಿದ್ದರು. ಆದರೆ ಕೆಲವು ದೇಶವಿರೋಧಿ ಶಕ್ತಿಗಳು ಅವರ ದಿಕ್ಕು ತಪ್ಪಿಸಿವೆ. ಏನೇ ಆದರೂ ನನ್ನದು ಮತ್ತು ಅವರದ್ದು ರಕ್ತ ಸಂಬಂಧ. ಎಲ್ಲರಿಗಿಂತ ಹೆಚ್ಚು ನನಗೇ ಅವರ ಬಗ್ಗೆ ತಿಳಿದಿದೆ” ಎಂದು ಹಾದಿಯಾ ಹೇಳಿದರು.

“ಈ ಎಲ್ಲಾ ಘಟನೆಗಳ ನಂತರ ನಮ್ಮೊಂದಿಗೆ ಮಾತನಾಡಲು ನನ್ನ ಪೋಷಕರಿಗೂ ಸಮಯ ಬೇಕಾಗಿದೆ. ಈ ಬಾರಿ ನಾನು ಅವರನ್ನು ಭೇಟಿಯಾಗಲು ಹೋಗುವುದಿಲ್ಲ. ನಾನು ಮುಸ್ಲಿಮ್ ಎಂದು ಒಪ್ಪಿಕೊಳ್ಳಲು ಅವರಿಗೆ ಕೆಲ ಸಮಯ ಬೇಕಾಗಿದೆ” ಎಂದು ಹಾದಿಯಾ ಹೇಳಿದರು.

ವಿವಾಹ ಅನೂರ್ಜಿತಗೊಳಿಸಿ ಕೇರಳ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಕೆಲವು ದಿನಗಳ ಬಳಿಕ ಹಾದಿಯಾ ಕಳೆದ ಎರಡು ವರ್ಷಗಳ ಕಾನೂನು ಹೋರಾಟದ ಸಂದರ್ಭ ಉಂಟಾದ ನಷ್ಟಕ್ಕೆ ಪರಿಹಾರ ನೀಡುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ತಾನು ತನ್ನ ಹೆತ್ತವರಿಂದ ನಷ್ಟ ಪರಿಹಾರ ಕೋರಿದ್ದೇನೆ ಎಂಬ ಬಗ್ಗೆ ಪತ್ರಕರ್ತರಿಗೆ ಸ್ಪಷ್ಟನೆ ನೀಡಿದ ಹಾದಿಯಾ, ‘‘ನಾನು ನನ್ನ ಹೆತ್ತವರಲ್ಲಿ ನಷ್ಟ ಪರಿಹಾರ ಕೋರಿರುವುದಾಗಿ ಕೆಲವು ಮಾದ್ಯಮಗಳು ವರದಿ ಮಾಡಿವೆ. ಇದು ಸಂಪೂರ್ಣ ಸುಳ್ಳು. ನಾನು ರಾಜ್ಯ ಸರಕಾರದಿಂದ ನಷ್ಟ ಪರಿಹಾರ ಕೋರಿದ್ದೇನೆ’’ ಎಂದಿದ್ದಾರೆ. ‘‘ಎರಡು ವರ್ಷ ಆರು ತಿಂಗಳ ಬಳಿಕ ನನ್ನ ಕಾನೂನು ಹೋರಾಟ ಪೂರ್ಣಗೊಂಡಿತು. ನಾನು ನನ್ನ ಹೆತ್ತವರೊಂದಿಗೆ ಕಳೆದ ದಿನಗಳು ಭಯಾನಕ. ನಾನು ಅಕ್ಷರಶಃ ಗೃಹಬಂಧನಕ್ಕೆ ಒಳಗಾಗಿದ್ದೆ. ನಾನು ನನ್ನ ಜೀವನದ ಬಹುಮುಖ್ಯ ಎರಡು ವರ್ಷಗಳನ್ನು ಕಳೆದುಕೊಂಡೆ. ನನ್ನ ಹೆತ್ತವರು ನನಗೆ ಹಾನಿ ಬಯಸುತ್ತಾರೆ ಎಂದು ನಾನು ಭಾವಿಸಲಾರೆ. ಆದರೆ, ಅವರು ಕೆಲವು ದೇಶ ವಿರೋಧಿ ಶಕ್ತಿಯ ಪ್ರಭಾವಕ್ಕೆ ಒಳಗಾಗಿದ್ದಾರೆ.’’ ಎಂದು ಹಾದಿಯಾ ಹೇಳಿದ್ದಾರೆ. ದೇಶ ವಿರೋಧಿ ಶಕ್ತಿ ಬಗ್ಗೆ ವಿವರಿಸದ ಹಾದಿಯಾ, ‘‘ಅವರು ರಾಜಕೀಯ ಲಾಭಕ್ಕಾಗಿ ನನ್ನ ಹೆತ್ತವರನ್ನು ಬಳಸಿಕೊಳ್ಳುತ್ತಿದ್ದಾರೆ.’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News