ಲಿಂಗಾಯತ ಸ್ವತಂತ್ರ ಧರ್ಮ ವಿಚಾರದ ಬಗ್ಗೆ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ: ಸಿದ್ದರಾಮಯ್ಯ

Update: 2018-03-13 12:02 GMT

ದಾವಣಗೆರೆ,ಮಾ.13: ಲಿಂಗಾಯತ ಸ್ವತಂತ್ರ ಧರ್ಮ ವಿಚಾರ ಕುರಿತುಂತೆ ಮಾ. 14 ರಂದು ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಂತರ ಕೇಂದ್ರಕ್ಕೆ ಶಿಪಾರಸ್ಸು ಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನ ಮಾನ ಕುರಿತಂತೆ ನ್ಯಾ.ನಾಗಮೋಹನ್ ಸಮಿತಿ ನೀಡಿರುವ ವರದಿ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಈ ವಿಚಾರದಲ್ಲಿ ಸಂಪುಟ ಸಚಿವರಲ್ಲಿ ಎರಡು ಬಣವಿಲ್ಲ. ಎಲ್ಲರೂ ಒಂದಾಗಿದ್ದೇವೆ ಎಂದರು.

ಲಿಂಗಾಯತ ಅಲ್ಪಸಂಖ್ಯಾತ ವಿರೋಧಿಸಿ ವೀರಶೈವ ಲಿಂಗಾಯತ ಧರ್ಮದವರು ಹೋರಾಟ ಮಾಡುತ್ತಿದ್ದಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು,  'ಭಿನ್ನಾಭಿಪ್ರಾಯ ಇರಲೇಬೇಕು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಎಲ್ಲರ ಹಕ್ಕು' ಎಂದು ಹೇಳಿದರು. 

ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, 'ಇದು ಆಡಳಿತಾತ್ಮಕ ವಿಚಾರ. ಇಂತಹ ವಿಚಾರದ ಬಗ್ಗೆ ಹಾದಿ ಬೀದಿಯಲ್ಲಿ ಹೇಳಲು ಆಗುವುದಿಲ್ಲ. ಇದರ ಬಗ್ಗೆ ಸಂಬಂಧಿಸಿದವರ ಜೊತೆ ಚರ್ಚೆ ಮಾಡಲಾಗುವುದು' ಎಂದು ಹೇಳಿದರು. 

ರಾಜ್ಯ ಸಭೆಯ ಮೂರನೇ ಸ್ಥಾನವನ್ನು ನಾವೇ ಗೆಲ್ಲಲಿದ್ದು, ಈ ಬಗ್ಗೆ ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ. ಟಿಕೆಟ್ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ  ಸಭೆಯಿದ್ದು, ರಾಷ್ಟ್ರೀಯ ಸ್ಕ್ರೀನಿಂಗ್ ಕಮಿಟಿ ಸಭೆ ಮುಗಿದ ಮೇಲೆ ಕೈ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು. 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅದ್ಯಕ್ಷ ಅಮಿತ್ ಕರ್ನಾಟಕವನ್ನು ನೂರು ಸಲ ಸುತ್ತಾಡಿದ್ದರೂ ಇದರ ಬಗ್ಗೆ ನಮಗೆ ಯಾವುದೇ ಭಯವಿಲ್ಲ. ಕಾಂಗ್ರೆಸ್ ಪಕ್ಷ ಏನು ಎಂಬುದು ನಾಡಿನ ಜನರಿಗೆ ಗೊತ್ತಿದೆ. ಇಲ್ಲಿ ಇವರ ಆಟ ನಡೆಯಲ್ಲ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News