ಪ್ರತ್ಯೇಕತಾವಾದಿಗಳ ಜೊತೆ ಕೈ ಜೋಡಿಸಿದ ಬಿಜೆಪಿ ದೇಶದ ಜನರಿಗೆ ಉತ್ತರಿಸಲಿ: ಸಚಿವ ಯು.ಟಿ ಖಾದರ್

Update: 2018-03-13 13:18 GMT

ಶಿವಮೊಗ್ಗ,ಮಾ.13: ಕಾಶ್ಮೀರ, ನಾಗಾಲ್ಯಾಂಡ್, ತ್ರಿಪುರ ಗಳಲ್ಲಿ ಪ್ರತ್ಯೇಕತಾವಾದಿಗಳೊಂದಿಗೆ ಅಧಿಕಾರಕ್ಕಾಗಿ ಕೈ ಜೋಡಿಸಿರುವ ಬಿಜೆಪಿಗೆ ಕಾಂಗ್ರೆಸ್ ಅನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ ಖಾದರ್ ಅವರು ತಿರುಗೇಟು ನೀಡಿದ್ದಾರೆ.

ಯುಟಿ ಖಾದರ್, ರಮಾನಾಥ ರೈ ಅವರು ಭಯೋತ್ಪಾದಕರಿದ್ದಂತೆ ಎಂದು ಹೇಳಿದ್ದ ಬಿಜೆಪಿ ಪದಾಧಿಕಾರಿ ರವಿಕುಮಾರ್ ಅವರ ಹೇಳಿಕೆಗೆ ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಯು.ಟಿ ಖಾದರ್, ತಮ್ಮನ್ನು ಬಿಜೆಪಿಯವರು ಭಯೋತ್ಪಾದಕರು ಎಂದು ಕರೆದ ಮಾತ್ರಕ್ಕೆ ನಾನು ಭಯೋತ್ಪಾದಕನಾಗಲಾರೆ. ಅದೇ ರೀತಿ ನನ್ನನ್ನು ದೇವರು ಎಂದು ಕರೆದರೂ ದೇವರಾಗಲಾರೆ. ರಾಜ್ಯದ ಜನತೆಗೆ ಎಲ್ಲಾ ಗೊತ್ತಿದೆ. ನಮಗೆ ಬಿಜೆಪಿಯವರ ಸರ್ಟಿಫಿಕೇಟ್ ಬೇಡ. ಭಯೋತ್ಪಾದಕರನ್ನು ವಿಮಾನದಲ್ಲಿ ಅಪಘಾನಿಸ್ತಾನಕ್ಕೆ ಕರೆದೊಯ್ದು ಬಿಟ್ಟು ಬಂದವರು ಯಾರು ಎಂಬುದಕ್ಕೆ ಮೊದಲು ಬಿಜೆಪಿ ಮುಖಂಡರು ಉತ್ತರ ಕೊಡಲಿ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಪಿಡಿಪಿಯೊಂದಿಗೆ ಕೈ ಜೋಡಿಸಿ ಅಧಿಕಾರ ಹಂಚಿಕೊಂಡಿರುವುದು ಏಕೆ ಎಂಬುದರ ಬಗ್ಗೆ ಜನರಿಗೆ ಉತ್ತರ ಕೊಡಲಿ. ತ್ರಿಪುರ, ನಾಗಾಲ್ಯಾಂಡ್ ಗಳಲ್ಲಿ ಪ್ರತ್ಯೇಕತಾವಾದಿಗಳೊಂದಿಗೆ ಅಧಿಕಾರಕ್ಕಾಗಿ ಕೈ ಜೋಡಿಸಿರುವ ಬಿಜೆಪಿ ಗೆ ತಮ್ಮನ್ನು ಭಯೋತ್ಪಾದಕರು ಎಂದು ಕರೆಯುವ ಯಾವುದೇ ಹಕ್ಕು ಇಲ್ಲ. ಅಧಿಕಾರಕ್ಕಾಗಿ ಬಿಜೆಪಿಯವರು ಯಾರ ಜೊತೆಯಾದರೂ ಕೈ ಜೋಡಿಸುತ್ತಾರೆ. ಏನು ಬೇಕಾದರೂ ಹೇಳುತ್ತಾರೆ ಎಂದು ತಿರುಗೇಟು ನೀಡಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರ ಯೋಜನೆಗಳೊಂದಿಗೆ ಕೆಲಸ ಮಾಡುತ್ತಿದೆ. ಬಿಜೆಪಿಯವರಲ್ಲಿ ಚರ್ಚೆ ಮಾಡಲು ವಿಷಯಗಳಿಲ್ಲ. ಸರ್ಕಾರದ ಕೊಟ್ಟ ಜನಪರ ಯೋಜನೆಗಳು, ಆಡಳಿತವನ್ನು ಟೀಕಿಸಲು ಏನೂ ಇಲ್ಲ. ಜನರನ್ನು ಒಡೆದು ಆಳುವ, ಆ ಮೂಲಕ ಮತಗಳನ್ನು ಸಂಗ್ರಹಿಸುವ ಮಾರಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಕರಾವಳಿಯಲ್ಲಿ ಕಾಂಗ್ರೆಸ್ ಗೆ ಉತ್ತಮ ವಾತಾವರಣವಿದೆ. ಕೋಮುವಾದಿಗಳ ಕೋಮುಗಲಭೆ ಸೃಷ್ಟಿಸುವ ಎಲ್ಲಾ ಸಂಚುಗಳು ವಿಫಲವಾಗಿವೆ. ಅವರು ಸಮಸ್ಯೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿಲ್ಲ. ಶವದ ಮೇಲೆ ರಾಜಕಾರಣ ಮಾಡುವ ಪ್ರಯತ್ನ ಫಲ ಕೊಡುತ್ತಿಲ್ಲ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಖಾದರ್ ಹೇಳಿದರು.

ಪಬ್ ದಾಳಿ ಪ್ರಕರಣದಲ್ಲಿ ಆರೋಪಿಗಳು ಖುಲಾಸೆಗೊಂಡಿದ್ದು, ಇದು ನ್ಯಾಯಾಲಯದ ತೀರ್ಮಾನ. ಇದರಲ್ಲಿ ಸರ್ಕಾರದ ಪಾತ್ರವಿಲ್ಲ. ಈ ಪ್ರಕರಣದ ಮೇಲ್ಮನವಿ ಸಲ್ಲಿಸುವ ಬಗ್ಗೆ ಸರ್ಕಾರ ಎಲ್ಲಾ ಕಾನೂನು ಸಾಧ್ಯತೆಗಳನ್ನು ಪರಿಶೀಲಿಸಲಿದೆ ಎಂದು ಸಚಿವ ಯು.ಟಿ ಖಾದರ್ ತಿಳಿಸಿದರು.

ರಾಜ್ಯದಲ್ಲಿ ಪ್ರತಿಯೊಬ್ಬ ಅರ್ಹರಿಗೂ ಪಡಿತರ ಚೀಟಿ ಸಿಗುವಂತಾಗಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಮಾನದಂಡಗಳನ್ನು ಸಡಿಲಗೊಳಿಸಲಾಗಿದೆ. ಕೇವಲ ಆಧಾರ್ ಕಾರ್ಡು ಒಂದರ ಆಧಾರದ ಮೇಲೆ ಪಡಿತರ ಕಾರ್ಡುಗಳು ಸಿಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ ೧೦ ದಿನದೊಳಗೆ ಅರ್ಜಿದಾರನ ಮನೆ ವಿಳಾಸಕ್ಕೆ ಕಾರ್ಡು ತಲುಪಲಿದೆ. ಬಯೋಮೆಟ್ರಿಕ್ ವಿಧಾನದಿಂದ ಎಲ್ಲರೂ ಪಡಿತರ ಪಡೆಯಲು ವಿಧಾನ ರೂಪಿಸಲಾಗಿದ್ದು, ಅಲೆಮಾರಿಗಳು, ಕೂಲಿ ಕಾರ್ಮಿಕರು ತಾವು ಕೆಲಸ ಮಾಡುವ ಊರು, ಸ್ಥಳಗಳಲ್ಲೆ ಪಡಿತರ ಪಡೆಯುವಂತ ಪೋರ್ಟಬಿಲಿಟಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಪಡಿತರ ಚೀಟಿ ಹೊಂದಿರುವವರು ರಾಜ್ಯದ ಯಾವುದೇ ಮೂಲೆಯ ಪಡಿತರ ಅಂಗಡಿಯಿಂದ ಪಡಿತರವನ್ನು ಪಡೆಯಬಹುದು. ಈ ಪೋರ್ಟಬಲಿಟಿ ವ್ಯವಸ್ಥೆಯನ್ನು ಈಗ ಜಾರಿಗೊಳಿಸಲಾಗಿದ್ದು, ನಿರ್ಧಿಷ್ಟ ಅಂಗಡಿಯಿಂದಲೇ ಪಡಿತರ ಪಡೆಯಲು ಕಾಯಬೇಕಾಗಿಲ್ಲ. ತಾವು ಎಲ್ಲಿರುತ್ತಿರೋ ಅಲ್ಲಿ ಪಡಿತರ ಪಡೆಯಬಹುದಾಗಿದೆ ಎಂದು ಸಚಿವ ಯು.ಟಿ ಖಾದರ್ ತಿಳಿಸಿದರು.

ಎಪಿಎಲ್, ಬಿಪಿಎಲ್ ಕಾರ್ಡುದಾರರ ನಡುವಿನ ತಾರತಮ್ಯ ನಿವಾರಿಸಲು ಮಾನದಂಡಗಳನ್ನು ಪುನರ್ ರೂಪಿಸಲಾಗಿದ್ದು. 1.20 ಲ.ರೂ. ಆದಾಯ ಹೊಂದಿರುವ, 7 ಎಕರೆ ಜಮೀನು ಹೊಂದಿದ್ದರೆ ಸ್ವಂತ ಕಾರು, ಸರ್ಕಾರಿ ನೌಕರಿ ಇದ್ದರೆ ಅವರು ಎಪಿಎಲ್ ವ್ಯಾಪ್ತಿಯಲ್ಲಿ ಬರುತ್ತಾರೆ. ಜಿಲ್ಲೆಯಲ್ಲಿ 81,330
ಜನರು ಕಾರ್ಡಿಗಾಗಿ ಅರ್ಜಿ ಸಲ್ಲಿಸಿದ್ದು, 53,354 ಜನರಿಗೆ ಕಾರ್ಡುಗಳನ್ನು ವಿತರಿಸಲಾಗಿದೆ. ನಕಲಿ ಕಾರ್ಡುದಾರರ ಪತ್ತೆಗೆ ಹೊಸ ಸಾಪ್ಟ್ ವೇರ್ ವೊಂದನ್ನು ಅಳವಡಿಸಲಾಗುತ್ತಿದ್ದು, ನಕಲಿ ಕಾರ್ಡುದಾರರ ಮತ್ತು ಅಕ್ರಮ ದಾಸ್ತಾನು ಮಾಡುವವರ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ
ನೀಡಲಾಗುವುದು. ನಕಲಿ ಕಾರ್ಡುಗಳ ಬಗ್ಗೆ ಮಾಹಿತಿ ನೀಡುವವರ ಯಾರು ಎಂಬುದು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಶಾಸಕ ಕೆ.ಬಿ ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡರಾದ ನಯಾಜ್ ಆಹಮದ್, ಆಸೀಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News