ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹುದ್ದೆಯಿಂದ ರೆಕ್ಸ್ ಟಿಲರ್ ಸನ್ ವಜಾ

Update: 2018-03-13 16:35 GMT

ವಾಶಿಂಗ್ಟನ್, ಮಾ. 13: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ತನ್ನ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್‌ರನ್ನು ವಜಾಗೊಳಿಸಿದ್ದಾರೆ.

ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ)ಯ ನಿರ್ದೇಶಕ ಮೈಕ್ ಪಾಂಪಿಯೊರನ್ನು ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ.

ಅದೇ ವೇಳೆ, ಗಿನಾ ಹ್ಯಾಸ್ಪೆಲ್ ಸಿಐಎಯ ನೂತನ ನಿರ್ದೇಶಕಿಯಾಗಿರುತ್ತಾರೆ.

ಇದು ಟ್ರಂಪ್ ಆಡಳಿತದ ಈವರೆಗಿನ ಅತಿ ದೊಡ್ಡ ಪುನರ್ರಚನೆಯಾಗಿದೆ.

ಟಿಲರ್‌ಸನ್‌ರ ನಿರ್ಗಮನವನ್ನು ಕಳೆದ ವರ್ಷದ ಅಕ್ಟೋಬರ್‌ನಿಂದ ನಿರೀಕ್ಷಿಸಲಾಗುತ್ತಿತ್ತು. ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿವೆ ಎಂಬ ವರದಿಗಳಿದ್ದವು.

‘ಎಕ್ಸಾನ್ ಮೊಬೈಲ್’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಟಿಲರ್‌ಸನ್, ಟ್ರಂಪ್ ಸಂಪುಟ ಸೇರುವುದಕ್ಕಾಗಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಟಿಲರ್‌ಸನ್‌ರ ನಿಲುವುಗಳನ್ನು ಟ್ರಂಪ್ ಹಲವು ಸಂದರ್ಭಗಳಲ್ಲಿ ಸಾರ್ವಜನಿಕವಾಗಿಯೇ ತಳ್ಳಿ ಹಾಕಿದ್ದರು. ಅವರು ಸೋಮವಾರ ರಶ್ಯದ ಬಗ್ಗೆ ನೀಡಿದ ಹೇಳಿಕೆಯು, ಶ್ವೇತಭವನದ ನಿಲುವಿಗೆ ವಿರುದ್ಧವಾಗಿದೆ ಎಂಬುದಾಗಿ ಭಾವಿಸಲಾಗಿದೆ.

ಥ್ಯಾಂಕ್ ಯು ಟಿಲರ್‌ಸನ್...!

‘‘ಸಿಐಎ ನಿರ್ದೇಶಕ ಮೈಕ್ ಪಾಂಪಿಯೊ ನಮ್ಮ ನೂತನ ವಿದೇಶಾಂಗ ಕಾರ್ಯದರ್ಶಿಯಾಗಲಿದ್ದಾರೆ. ಅವರು ಅತ್ಯುತ್ತಮ ಕೆಲಸ ಮಾಡಲಿದ್ದಾರೆ. ನಿಮ್ಮ ಸೇವೆಗೆ ಧನ್ಯವಾದಗಳು, ರೆಕ್ಸ್ ಟಿಲರ್‌ಸನ್! ಗಿನಾ ಹ್ಯಾಸ್ಪೆಲ್ ಸಿಐಎಯ ನೂತನ ನಿರ್ದೇಶಕಿಯಾಗಲಿದ್ದಾರೆ. ಈ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆಯೂ ಅವರಾಗಿದ್ದಾರೆ. ಎಲ್ಲರಿಗೂ ಅಭಿನಂದನೆಗಳು!’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News