ಯಡಿಯೂರಪ್ಪ ಕಾಂಗ್ರೆಸ್ ಗೆ ಬರುತ್ತೇನೆಂದರೂ ಸೇರಿಸಿಕೊಳ್ಳುವುದಿಲ್ಲ: ಸಿದ್ದರಾಮಯ್ಯ

Update: 2018-03-13 15:01 GMT

ದಾವಣಗೆರೆ,ಮಾ.13: ಇತ್ತೀಚೆಗೆ ಶಾಮನೂರು ಶಿವಶಂಕರಪ್ಪ, ಯಡಿಯೂರಪ್ಪ ಜೊತೆಗೆ ಊಟ ಮಾಡಿದ್ದಕ್ಕೆ ಅಪಾರ್ಥ ಕಲ್ಪಿಸಲಾಗಿದೆ. ಶಾಮನೂರು ಶಿವಶಂಕರಪ್ಪ ಹುಟ್ಟು ಕಾಂಗ್ರೆಸ್ಸಿಗ. ಅವರೆಂದಿಗೂ ಕಾಂಗ್ರೆಸ್ ತೊರೆಯುವುದಿಲ್ಲ. ಯಡಿಯೂರಪ್ಪ ಬೇಕಾದ್ರೆ ಕಾಂಗ್ರೆಸ್ ಬರಲಿ ಎಂದು ಸೌಜನ್ಯಕ್ಕೆ ಹೇಳಿದ್ದಾರೆ. ಆದರೆ ಯಡಿಯೂರಪ್ಪ ಕಾಂಗ್ರೆಸ್ ಬರುತ್ತೇನೆಂದರೂ ನಾವು ಸೇರಿಸಿಕೊಳ್ಳುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಮಂಗಳವಾರ ಸುಮಾರು 2500 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ, ಚಾಲನೆ ನೀಡಿ ಮಾತನಾಡಿದ ಅವರು, ಕೋಮುವಾದದ ಪರವಿರುವ, ಬೆಂಬಲಿಸುವ ಹಾಗೂ ಆರೆಸ್ಸೆಸ್ಸ್ ತರಬೇತಿ ಪಡೆದ ಯಾರನ್ನೂ ಕಾಂಗ್ರೆಸ್ ಒಳಗೆ ಬಿಟ್ಟುಕೊಳ್ಳುವುದಿಲ್ಲ. ನಮ್ಮ ಹೋರಾಟವೇ ಈ ಕೋಮುವಾದಿಗಳ ವಿರುದ್ಧ ಎಂದು ಅವರು ತಿಳಿಸಿದರು.

ಬಿಜೆಪಿಗೆ ಅಧಿಕಾರ ನೀಡಿದರೆ, ಭ್ರಷ್ಟ ವ್ಯವಸ್ಥೆಗೆ ಆಹ್ವಾನ ನೀಡಿದಂತೆ. ತಮ್ಮ ಅಧಿಕಾರವಧಿಯಲ್ಲಿ ಸೀರೆ, ಸೈಕಲ್ ವಿತರಿಸಿದ್ದು ಬಿಟ್ಟರೆ ಉಳಿದದ್ದೆಲ್ಲಾ ಭ್ರಷ್ಟಾಚಾರವೇ ಆಗಿತ್ತು. ಇಂತಹ ಪಕ್ಷ ಅಧಿಕಾರಕ್ಕೆ ಬಂದರೆ ಭ್ರಷ್ಟ ಪಕ್ಷ ಅಧಿಕಾರಕ್ಕೆ ಬಂದಂತಾಗುತ್ತದೆ. ಬಿಜೆಪಿಯಲ್ಲಿ ಭ್ರಷ್ಟಾಚಾರ ಮತ್ತಿತರ ಕಾರಣಗಳಿಗೆ ಜೈಲು ಕಂಡು ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂತಹವರನ್ನು ಪಕ್ಕದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಉತ್ತಮ ಸರ್ಕಾರ, ಆಡಳಿತ ನಮ್ಮದು ಎಂದು ಬೀಗುತ್ತಾರೆ ಎಂದು ಟೀಕಿಸಿದರು.

ಅನ್ನಭಾಗ್ಯ ಯೋಜನೆಯಲ್ಲಿ ನಮ್ಮದೇ ಪಾಲು ಹೆಚ್ಚು ಎಂದು ಕೆಂದ್ರ ಬಿಜೆಪಿ ಕೊಚ್ಚಿಕೊಳ್ಳುತ್ತದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪುಡ್ ಸೆಕ್ಯೂರಿಟಿ ಆಕ್ಟ್ ತಂದದ್ದು ಮನಮೋಹನ್ ಸಿಂಗ್. ಹಾಗಾದರೆ, ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ತಾನ, ಹರಿಯಾಣದಲ್ಲಿ ಯಾಕೆ ಉಚಿತ ಅಕ್ಕಿ ನೀಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ರಾಜ್ಯದ ಜನತೆಗೆ ಉತ್ತರಿಸುತ್ತೇನೆ, ಶಾ ಗಲ್ಲ
ನಮ್ಮ ರಾಜ್ಯದ ಅಭಿವೃದ್ಧಿ, ಅನುದಾನ ಬಳಕೆ, ಯೋಜನೆಗಳ ಲೆಕ್ಕವನ್ನು ಬಿಜೆಪಿಯ ಮೋದಿ, ಅಮಿತ್ ಶಾಗೆ ವಿವರಸಿಬೇಕಿಲ್ಲ. ನಾನ್ಯಾಕೆ ನಿಮಗೆ ಲೆಕ್ಕ ಕೊಡಬೇಕು? ನಮ್ಮನ್ನು ಆರಿಸಿ ತಂದ ರಾಜ್ಯದ ಜನತೆಗೆ ನಾನು ಲೆಕ್ಕವನ್ನು ನೀಡುತ್ತೇನೆ ಎಂದು ಅವರು ಹೇಳಿದರು.

ಎಲ್ಲರ ಜಯಂತಿ ಮಾಡಿದ್ದು ಕಾಂಗ್ರೆಸ್
ಈ ಹಿಂದೆ ಟಿಪ್ಪು ಟೋಪಿ ಧರಿಸಿ ಹಾಡಿ ಹೊಗಳಿ, ಅವರ ಕುರಿತ ಪುಸ್ತಕಕ್ಕೆ ಮುನ್ನುಡಿ ಬರೆದವರೆಲ್ಲಾ ಇಂದು ನಾನು ಟಿಪ್ಪು ಜಯಂತಿ ಆಚರಿಸಿದರೆ ವಿರೋಧಿಸುತ್ತಾರೆ. ಇಂತಹವರಿಂದ ನಾನು ಪಾಠ ಕಲಿಯಬೇಕಿಲ್ಲ. ಸರ್ವರ ಜಯಂತಿಯನ್ನು ಆರಂಭಿಸಿದ್ದು ನಾನೇ ಎಂಬುದನ್ನು ಬಿಜೆಪಿಗರು ಮೊದಲು ಅರಿಯಲಿ ಎಂದು ಅವರು ತಿಳಿಸಿದರು.

ಮೋದಿ ಮಹಾನ್ ಸುಳ್ಳುಗಾರ
ನನ್ನ ರಾಜಕೀಯ ಇತಿಹಾಸದಲ್ಲಿ ಮೋದಿಯಂತಹ ಮಹಾನ್ ಸುಳ್ಳುಗಾರನನ್ನು ನೋಡಿಯೇ ಇಲ್ಲ. ಕೇವಲ ಜಾತಿ, ಧರ್ಮವೇ ಇವರ ರಾಜಕೀಯ ಅಜೆಂಡಾ. ಹಿಂದುತ್ವವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಾರೆ. ಸ್ವಧರ್ಮ ನಿಷ್ಟೆ, ಪರಧರ್ಮ ಸಹಿಷ್ಣುತೆ ಇರಬೇಕು. ಒಂದು ವೇಳೆ ಪರಧರ್ಮ ಅಸಹಿಷ್ಣುತೆ ಇದ್ದರೆ ಅದು ದೇಶಕ್ಕೆ ಮಾರಕ ಎಂದರು. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎಂಟೂ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಿಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ದಾವಣಗೆರೆ ನಗರ ಮತ್ತು ತಾಲೂಕು ಈ ಹಿಂದೆಂದೂ ಕಂಡರಿಯದ ಅಭಿವೃದ್ದಿ ಹೊಂದಿದೆ. ಕಳೆದ 5 ವರ್ಷಗಳಲ್ಲಿ ದಾವಣಗೆರೆ ನಗರದ ಚಿತ್ರಣವೇ ಬದಲಾಗಿದೆ. ಅಷ್ಟೇ ಅಲ್ಲದೆ ದಾವಣಗೆರೆ ತಾಲೂಕಿನ ಗ್ರಾಮಾಂತರ ಪ್ರದೇಶಗಳು ತೀವ್ರಗತಿಯಲ್ಲಿ ಪ್ರಗತಿ ಪಥದಲ್ಲಿ ಸಾಗಿದೆ. ಸ್ಮಾರ್ಟ್‍ಸಿಟಿಯ ಯಾವುದೇ ಹಣ ಬಳಸದೇ ನಾವು ರಾಜ್ಯ ಸರ್ಕಾರದ ಅನುದಾನದಲ್ಲಿ ಈಗಾಗಲೇ ಸಿಟಿಯನ್ನು ಸ್ಮಾರ್ಟ್ ಮಾಡಿದ್ದೇವೆ. ಆದರೆ, ವಿರೋಧಿಗಳು ಸುಮ್ಮನೆ ವ್ಯಂಗ್ಯವಾಡುತ್ತಾರೆ ಎಂದರು.

ಇಂದು ದಕ್ಷಿಣದಲ್ಲಿ 393 ಕೋಟಿ ಕಾಮಗಾರಿ ಉದ್ಘಾಟನೆ, 672 ಕೋಟಿ ಕಾಮಗಾರಿಗಳ ಶಿಲಾನ್ಯಾಸ, 20 ಕೋಟಿ ವೆಚ್ಚದಲ್ಲಿ ಗಾಜಿನ ಮನೆ, ಎಪಿಎಂಸಿ ಆವರಣದಲ್ಲಿ ಸಮಗ್ರ ಜೈವಿಕ ಕೇಂದ್ರ ಉದ್ಘಾಟನೆ, 10 ಕೋಟಿ ವೆಚ್ಚದಲ್ಲಿ ಜಾನುವಾರು ಸಂತೆ ಮಾರುಕಟ್ಟೆ, 38 ಕೋಟಿ ವೆಚ್ಚದಲ್ಲಿ 41 ಗ್ರಾಮಗಳಿಗೆ ಶುದ್ಧ ಕುಡಿವ ನೀರು ಸೇರಿದಂತೆ ಸಾವಿರಾರು ಕೋಟಿ ರು.ಗಳ ಯೋಜನೆಗಳಿಗೆ ಸಿಎಂ ಅವರು ಚಾಲನೆ ನೀಡಿದ್ದಾರೆ ಎಂದು ಅವರು ವಿವರಿಸಿದರು.

ಅಧ್ಯಕ್ಷತೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಪ ಸದಸ್ಯ ಅಬ್ದುಲ್ ಜಬ್ಬಾರ್, ಶಾಸಕರಾದ ಶಿವಮೂರ್ತಿನಾಯಕ್, ಎಚ್.ಪಿ. ರಾಜೇಶ್, ಮೇಯರ್ ಅನಿತಾಬಾಯಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್, ಕೆ.ಎಸ್. ಬಸವರಾಜ್, ರಾಮಜ್ಜ, ವೀರಭದ್ರಪ್ಪ, ಎ ನಾಗರಾಜ್, ಡಿಸಿ ಡಿ.ಎಸ್. ರಮೇಶ್, ಎಸ್ಪಿ ಭೀಮಾಶಂಕರ ಎಸ್. ಗುಳೇದ, ಸಿಇಓ ಎಸ್. ಅಶ್ವತಿ ಮತ್ತಿತರರಿದ್ದರು. ಗಿರೀಶ್‍ಗೌಡ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News