ಬಳ್ಳಾರಿ: 2.50 ಕೋಟಿ ರೂ.ವೆಚ್ಚದಲ್ಲಿ ತಲೆಎತ್ತಲಿದೆ ನೂತನ ಬಸ್ ನಿಲ್ದಾಣ; ಸಚಿವ ರೇವಣ್ಣ

Update: 2018-03-13 14:44 GMT

ಬಳ್ಳಾರಿ, ಮಾ. 13: ಜಿಲ್ಲೆಯ ಸಿರಗುಪ್ಪ ಕೆಎಸ್ಸಾರ್ಟಿಸಿ ನೂತನ ಬಸ್ ನಿಲ್ದಾಣ ಇನ್ನು 9 ತಿಂಗಳಲ್ಲಿ 2.50 ಕೋಟಿ ರೂ.ವೆಚ್ಚದಲ್ಲಿ ತಲೆ ಎತ್ತಲಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಇಂದಿಲ್ಲಿ ತಿಳಿಸಿದ್ದಾರೆ.

ಮಂಗಳವಾರ ನೂತನ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, 1.09ಎಕರೆ ವಿಸ್ತೀರ್ಣದಲ್ಲಿ ಈ ನೂತನ ಸಿರಗುಪ್ಪ ಬಸ್ ನಿಲ್ದಾಣ ತಲೆಎತ್ತಲಿದ್ದು, 9ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿ ನಿಗದಿಪಡಿಸಿದ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಸೂಚಿಸಿದರು.

ನೂತನ ಬಸ್ ನಿಲ್ದಾಣದಲ್ಲಿ ತಂಪಾದ ಶುದ್ಧೀಕರಿಸಿದ ಕುಡಿಯುವ ನೀರು, ಆಧುನಿಕ ಸುಸಜ್ಜಿತ ಶೌಚಾಲಯ, ವಿಸ್ತಾರವಾದ ಮಹಿಳಾ ನಿರೀಕ್ಷಣಾ ಕೊಠಡಿ, ವಿಸ್ತಾರವಾದ ಉಪಾಹಾರ ಗೃಹ, ಪಾಸ್ ವಿತರಣಾ ಶಾಖೆ, ಸಂಚಾರ ನಿಯಂತ್ರಣಾ ಕೊಠಡಿ, ಪ್ರಯಾಣಿಕರಿಗೆ ಅವಶ್ಯಕವಾದ ಚಿಕ್ಕಮಳಿಗೆಗಳು, ಬೇಕರಿ, ಪೇಪರ್ ಸ್ಟಾಲ್ ಮತ್ತು ಔಷಧಿ ಮಳಿಗೆಗಳು ಒಳಗೊಂಡಿರಲಿವೆ ಎಂದು ಅವರು ವರಿಸಿದರು.

ಈ ಸಂದರ್ಭದಲ್ಲಿ ಶಾಸಕ ಬಿ.ಎಂ.ನಾಗರಾಜ, ಮಾಜಿ ಶಾಸಕ ಚಂದ್ರಶೇಖರಯ್ಯ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ.ಎನ್. ಗಿರಿಮಲ್ಲಪ್ಪ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಉಪಾಧ್ಯಕ್ಷ ಕೆ.ಎಂ.ಹಾಲಪ್ಪ, ನಗರಸಭೆ ಅಧ್ಯಕ್ಷೆ ಪಾರಿಜಾತಮ್ಮ, ಬಳ್ಳಾರಿ ಎನ್‌ಇಕೆಎಸ್‌ಆರ್‌ಟಿಸಿ ಅಧಿಕಾರಿ ಚಂದ್ರಶೇಖರ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News