ನಮ್ಮ ಸಾರಿಗೆ ವ್ಯವಸ್ಥೆ ಇಡೀ ದೇಶದಲ್ಲಿಯೇ ಅತ್ಯುತ್ತಮ ಸಾರಿಗೆ: ಸಚಿವ ರೇವಣ್ಣ

Update: 2018-03-13 14:47 GMT

ಬಳ್ಳಾರಿ, ಮಾ. 13: ಕರ್ನಾಟಕ ಸಾರಿಗೆ ವ್ಯವಸ್ಥೆಯೂ ಇಡೀ ದೇಶದಲ್ಲಿಯೇ ಅತ್ಯುತ್ತಮ ಸಾರಿಗೆ ವ್ಯವಸ್ಥೆಯಾಗಿದ್ದು, ಇದುವರೆಗೆ 210ಕ್ಕೂ ಹೆಚ್ಚು ಪ್ರಶಸ್ತಿಗಳು ಸಾರಿಗೆ ಇಲಾಖೆಗೆ ದೊರೆತಿವೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಇಂದಿಲ್ಲಿ ತಿಳಿಸಿದ್ದಾರೆ.

ಮಂಗಳವಾರ ನಗರದ ನೂತನ ಆಧುನಿಕ ನಗರ ಸಾರಿಗೆ ಬಸ್ ನಿಲ್ದಾಣದ ಲೋಕಾರ್ಪಣೆ ಮತ್ತು ಕೇಂದ್ರೀಯ ಬಸ್ ನಿಲ್ದಾಣದ (ನಲ್ಲಚೇರವು) ಉನ್ನತೀಕರಣದ ಕಾಮಗಾರಿ ಹಾಗೂ ನೂತನ ಬಸ್ ಘಟಕ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕು ವರ್ಷಗಳಿಂದ ಅನೇಕ ಸವಲತ್ತುಗಳನ್ನು ಸಾರಿಗೆ ಇಲಾಖೆಗೆ ಕಲ್ಪಿಸಿದ್ದಾರೆಂದು ಹೇಳಿದ ಅವರು, ಅತ್ಯುತ್ತಮ ಸಾರಿಗೆ ವ್ಯವಸ್ಥೆ ಎಂದು ನಮ್ಮ ಸಾರಿಗೆ ವ್ಯವಸ್ಥೆ ಹೆಸರು ಗಳಿಸಿರುವುದಕ್ಕೆ ನಮ್ಮ ಸಿಬ್ಬಂದಿ, ಕಾರ್ಮಿಕರು ಕಾರಣರಾಗಿದ್ದು, ಅವರನ್ನು ಅಭಿನಂದಿಸುವೆ ಎಂದು ಹೇಳಿದರು.

ಮೂವತ್ತು ವರ್ಷಗಳ ಹಿಂದೆ ರಾಜ್ಯದ ನಮ್ಮ ಕೆಂಪು ಬಸ್‌ಗಳು ಕಂಡರೇ ಜನ ಭಯಪಡುತ್ತಿದ್ದರು. ಈಗ ಆ ಸ್ಥಿತಿ ಇಲ್ಲ. ಇಡೀ ದೇಶದಲ್ಲಿ ಅತ್ಯುತ್ತಮ ಗುಣಮಟ್ಟದ ಯಾವುದೇ ಬಸ್ ಬಂದರೂ ಮೊದಲಿಗೆ ನಮ್ಮ ರಾಜ್ಯ ಸಾರಿಗೆಗೆ ಬರುತ್ತಿದೆ ಎಂದು ವಿವರಿಸಿದ ಅವರು, ಬಸ್‌ಗಳಲ್ಲಿ ಶೌಚಾಲಯ ಸೌಲಭ್ಯ ಒಳಗೊಂಡ ಫ್ಲೈ ಬಸ್‌ಗಳನ್ನು ಆರಂಭಿಸಲಾಗುತ್ತಿದೆ ಎಂದರು.

ಬಳ್ಳಾರಿ ನಗರ ಬಸ್ ನಿಲ್ದಾಣದ ಮುಂದೆ ಖಾಸಗಿ ಬಸ್‌ಗಳ ಹಾವಳಿ ಜಾಸ್ತಿಯಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಕೂಡಲೇ ಕ್ರಮಕೈಗೊಳ್ಳುವಂತೆ ಆರ್‌ಟಿಒಗೆ ಸೂಚನೆ ನೀಡಲಾಗಿದೆ ಎಂದ ಅವರು, ಎಲ್ಲ ಸೌಕರ್ಯಗಳನ್ನು ಒಳಗೊಂಡ ಬಳ್ಳಾರಿ ನಗರ ಬಸ್ ನಿಲ್ದಾಣ ರಾಜ್ಯದ ಅತ್ಯುತ್ತಮ ಬಸ್ ನಿಲ್ದಾಣಗಳಲ್ಲಿ ಒಂದಾಗಿದೆ. ರಾಜ್ಯದ ಎಲ್ಲ ನಗರ-ಪಟ್ಟಣಗಳಲ್ಲಿ ಸಕಲ ಸೌಲಭ್ಯ ಒಳಗೊಂಡ ಬಸ್ ನಿಲ್ದಾಣಗಳನ್ನು ನಿರ್ಮಿಸುವುದಕ್ಕೆ ಸರಕಾರ ಸಿದ್ಧ ಎಂದರು.

ರಾಜ್ಯದಲ್ಲಿನ 20 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ನಮ್ಮ ಸರಕಾರ ಜಾರಿಗೆ ತಂದಿದ್ದು, ಈ ಮೂಲಕ ವಿದ್ಯಾರ್ಥಿಗಳ ಓದುವ ಕನಸಿಗೆ ಬೆಂಬಲವಾಗಿ ನಿಂತಿದೆ ಎಂದು ರೇವಣ್ಣ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ನಗರ ಶಾಸಕ ಅನಿಲ್ ಲಾಡ್ ಅಧ್ಯಕ್ಷತೆ ವಹಿಸಿದ್ದು, ಈ ವೇಳೆ ಡಾ.ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್.ವೈ.ಗೋಪಾಲಕೃಷ್ಣ, ಮೇಲ್ಮನೆ ಸದಸ್ಯ ಕೆ.ಸಿ. ಕೊಂಡಯ್ಯ, ಮೇಯರ್ ಜಿ.ವೆಂಕಟರಮಣ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎ.ಮಾನಯ್ಯ, ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ.ಎನ್. ಗಿರಿಮಲ್ಲಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News