ಸ್ವಾತಂತ್ರ್ಯಕ್ಕಾಗಿ ಹೋರಾಟದ ಕಿಚ್ಚು ಹಚ್ಚಿದ ಕೀರ್ತಿ ಸೇವಾದಳಕ್ಕೆ ಸಲ್ಲಬೇಕು: ಮಾಜಿ ಶಾಸಕ ಶಂಕರ್

Update: 2018-03-13 16:05 GMT

ಚಿಕ್ಕಮಗಳೂರು, ಮಾ.13 ದೇಶದ ಸಾಮಾನ್ಯ ಜನರಲ್ಲಿ ದೇಶಭಕ್ತಿ ಮತ್ತು ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿಸಿದ್ದು ಭಾರತ ಸೇವಾದಳ ಎಂದು ಮಾಜಿ ಶಾಸಕ ಐ.ಬಿ.ಶಂಕರ್ ಹೇಳಿದರು.

ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ನಗರದ ಆಜಾದ್ ಪಾರ್ಕ್ ಸರಕಾರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಏರ್ಪಡಿಸಿದ್ದ ಭಾರತ ಸೇವಾದಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಗ್ರಾಮೀಣ ಪ್ರದೇಶಗಳ ಜನರಲ್ಲಿ ಸ್ವಾತಂತ್ರ್ಯದ ಬಗ್ಗೆ ಒಂದು ರೀತಿಯ ನಿರಾಸಕ್ತಿ ಇತ್ತು. ಅವರಲ್ಲಿ ದೇಶ ಭಕ್ತಿಯನ್ನು ತುಂಬಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿ ಅವರನ್ನು ಜಾಗೃತಗೊಳಿಸುವ ಉದ್ದೇಶದಿಂದ 1921ರಲ್ಲಿ ನಾ.ಸು.ಹರ್ಡಿಕರ್ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಾಯಕರಿಂದ ಭಾರತ ಸೇವಾದಳ ಸ್ಥಾಪಿತವಾಯಿತು. ನಂತರ ಭಾರತ ಸೇವಾದಳದಿಂದ ಪ್ರತೀ ಹಳ್ಳಿ ಹಳ್ಳಿಗಳಲ್ಲೂ ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಗ್ರಾಮೀಣರಲ್ಲಿ ದೇಶಭಕ್ತಿ, ಸ್ವಾತಂತ್ರ್ಯದ ಕಿಚ್ಚು ಮತ್ತು ಶಿಸ್ತನ್ನು ಮೂಡಿಸಲಾಯಿತು.

ಸ್ವಾತಂತ್ರ್ಯಾ ನಂತರ ಕೆಲವು ಕಾರಣಗಳಿಂದಾಗಿ ಕರ್ನಾಟಕವನ್ನು ಹೊರತುಪಡಿಸಿ ಬೇರೆ ಯಾವ ರಾಜ್ಯಗಳಲ್ಲೂ ಭಾರತ ಸೇವಾದಳ ಬೆಳೆಯಲಿಲ್ಲ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಿಂದಾಗಿ ಸೇವಾದಳ ಬೆಳೆಯಿತು. ನಂತರದ ಬದಲಾದ ಸನ್ನಿವೇಶದಲ್ಲಿ ಹಲವು ಏಳು ಬೀಳುಗಳ ನಡುವೆ ಭಾರತ ಸೇವಾದಳವನ್ನು ಕಷ್ಟಪಟ್ಟು ಉಳಿಸಿಕೊಂಡು ಬರಲಾಗಿದೆ ಎಂದ ಅವರು, ಇನ್ನು ಮುಂದೆ ಸಾರ್ವಜನಿಕರೇ ಅದನ್ನು ಉಳಿಸಿ ಬೆಳೆಸಬೇಕು. ಸೇವಾದಳಕ್ಕೆ ಸೇರದಿದ್ದರೂ ಪರವಾಗಿಲ್ಲ ಆದರೆ ಕನಿಷ್ಠ ಅದರ ಕಾರ್ಯಕ್ರಮಗಳನ್ನಾದರೂ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್, ಭಾರತ ಸೇವಾದಳದ ದಿನಾಚರಣೆಯನ್ನು ಐದು ದಿನಗಳ ಕಾಲ ಆಚರಿಸಲಿದ್ದು, ಪ್ರತಿದಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಮತ್ತು ಪರೀಕ್ಷೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಸೇವಾದಳಕ್ಕೆ ಉತ್ತಮ ಸೇವೆ ಸಲ್ಲಿಸಿದ ಬಸ್ಗಲ್ ಪ್ರೌಢಶಾಲೆಯ ದೈಹಿಕ ಶಿಕ್ಷಕ ಎಂ.ಕುಮಾರ್, ನಗರದ ಉರ್ದು ಶಾಲೆಯ ಶಿಕ್ಷಕಿ ರಾಜೇಶ್ವರಿ, ಕಣತಿ ಶಾಲೆಯ ರಾಧಾಮಣಿ ಮತ್ತು ಮರ್ಲೆ ಶಾಲೆಯ ಶಿಕ್ಷಕಿ ಸುಭದ್ರಮ್ಮ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಜಗಧೀಶಾಚಾರ್, ದೈಹಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಗೋವಿಂದೇಗೌಡ ಶಿಕ್ಷಕಿಯರಾದ ನಾಗವೇಣಿ, ಜಯಂತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News