ಪ್ರಜಾಪ್ರಭುತ್ವದ ಉಳಿವಿಗೆ ವಿಮರ್ಶೆ ಅನಿವಾರ್ಯ: ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ

Update: 2018-03-13 16:50 GMT

ತುಮಕೂರು,ಮಾ.13: ವಿಮರ್ಶೆ ಸಾಹಿತ್ಯಕ್ಕಷ್ಟೇ ಅಲ್ಲದೇ ಇಡೀ ಸಮಾಜಕ್ಕೆ ಅಗತ್ಯವಿರುವ ಪರಿಕಲ್ಪನೆ. ಅದು ಪ್ರಜಾಪ್ರಭುತ್ವದ ಮೂಲತತ್ತ್ವ. ಪ್ರಜಾಪ್ರಭುತ್ವದ ಉಳಿವಿಗೆ ವಿಮರ್ಶೆ ಅನಿವಾರ್ಯ ಎಂದು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ವಿಭಾಗವು ಮಂಗಳವಾರ ಹಮ್ಮಿಕೊಂಡಿದ್ದ ‘ಕನ್ನಡ ವಿಮರ್ಶೆ: ಮರುನೋಟ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಆರೋಗ್ಯಕರ ವಿಮರ್ಶೆಯನ್ನು ಸ್ವೀಕರಿಸುವ ಪ್ರವೃತ್ತಿ ಕಡಿಮೆಯಾಗಿರುವುದುಆತಂಕಕಾರಿ ಎಂದರು.

ರಾಜಕೀಯ ಮತ್ತು ಧರ್ಮ,ಇವು ವಿಮರ್ಶೆಯನ್ನು ಒಪ್ಪದ ಕ್ಷೇತ್ರಗಳು. ಇದರೊಳಗಿರುವವರು ಎಲ್ಲರೂ ತಮಗೆ ಅಧೀನರಾಗಿರಬೇಕು ಎಂದು ಬಯಸುತ್ತಾರೆ. ಸಮಾಜ ವಿಮರ್ಶಾ ಪ್ರಜ್ಞೆ ಕಳಕೊಂಡರೆ ಒಂದು ನಾಗರಿಕತೆಯೇ ಹೇಗೆ ನಾಶವಾಗುತ್ತದೆ ಎಂಬ ಬಗ್ಗೆ ಇತಿಹಾಸದಲ್ಲಿ ಹೇರಳ ಉದಾಹರಣೆಗಳಿವೆ. ವಿಶ್ವವಿದ್ಯಾನಿಲಯಗಳ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಹಿಂದೆ ಸಂಪನ್ಮೂಲದ ಕೊರತೆ ನಡುವೆಯೂ ವಿವಿಗಳಲ್ಲಿ ವಿದ್ವತ್ತು ಇತ್ತು. ಇಂದು ಸಂಪನ್ಮೂಲ ಹೇರಳವಾಗಿದೆ, ಆದರೆ ಅಧ್ಯಯನ ಕೇಂದ್ರಗಳಲ್ಲಿ ಅಧ್ಯಯನವೇ ಮರೆಯಾಗುತ್ತಿದೆ ಎಂದರು.

ಭಾರತೀಯರದ್ದು ಮೀಮಾಂಸೆಗೆ ಒಲಿದ ಮನಸ್ಸು. ಪಾಶ್ಚಾತ್ಯ ವಿಮರ್ಶೆಗೆ ಶತಮಾನಗಳ ಇತಿಹಾಸವಿದೆ. ನಮ್ಮಲ್ಲಿ ಆಧುನಿಕ ಸಾಹಿತ್ಯದ ಸ್ಪರ್ಶ ದೊರೆತ ಮೇಲೆ ವಿಮರ್ಶಾ ಸಾಹಿತ್ಯ ಬೆಳೆಯಿತು. ವಿಮರ್ಶೆ ಬಗ್ಗೆ ಸಾಕಷ್ಟು ಅಧ್ಯಯನಗಳು ಈಗಲೂ ನಡೆಯುತ್ತಿಲ್ಲ. ಕನ್ನಡದ ವಿಮರ್ಶಾ ಚರಿತ್ರೆ ಬರೆಯುವ ಅಗತ್ಯವಿದೆ. ಸಾಹಿತ್ಯ ಕ್ಷೇತ್ರದಲ್ಲಿ ಕೆಲವರನ್ನು ಮಾತ್ರ ಗುರುತಿಸಿ ದೊಡ್ಡ ಸಾಹಿತಿಗಳೆಂದು ಗುರುತಿಸುವ ಪ್ರವೃತ್ತಿ ಇದೆ. ಅನೇಕ ಶ್ರೇಷ್ಠ ಸಾಹಿತಿಗಳಿದ್ದರೂ ಆಡಳಿತಕ್ಕೆ ಹತ್ತಿರವಾದವರು, ಉನ್ನತ ಹುದ್ದೆಗಳಲ್ಲಿರುವವರು ಮಾತ್ರ ವಿಮರ್ಶಕರ ದೃಷ್ಟಿಗೆ ಬೀಳುವಂತೆ ವ್ಯವಸ್ಥಿತ ಪ್ರಯತ್ನ ಮಾಡಲಾಗುತ್ತದೆ. ಹೀಗೆ ನಿರ್ಲಕ್ಷ್ಯಕ್ಕೆ ಒಳಗಾದವರಲ್ಲಿ ಸೇಡಿಯಾಪು ಕೃಷ್ಣಭಟ್ಟ ಒಬ್ಬರು ಎಂದು ವಿಶ್ಲೇಷಿಸಿದರು.

ವಿಚಾರ ಸಂಕಿರಣ ಉದ್ಘಾಟಿಸಿದ ಕುಲಪತಿ ಪ್ರೊ.ಜಯಶೀಲ, ಆರೋಗ್ಯಕರ ಟೀಕೆ ಎಲ್ಲಾ ಕಾಲದಲ್ಲೂ ಇರಬೇಕು. ಸಾಹಿತ್ಯವೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಟೀಕೆಯನ್ನು ಸಹಿಸದ ಮನಸ್ಥಿತಿ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಕೆ. ರಾಮಚಂದ್ರಪ್ಪ ವಿಮರ್ಶೆ ಓದುಗರು ಮತ್ತು ಸಾಹಿತ್ಯದ ನಡುವಿನ ಪ್ರಮುಖ ಕೊಂಡಿ. ವಿಮರ್ಶೆ ಬಗೆಗಿನ ವಿಚಾರ ಸಂಕಿರಣ ಮಹತ್ವದ ಮೈಲಿಗಲ್ಲು ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಬಿ. ಕರಿಯಣ್ಣ, ಡಾ.ಶಿವಣ್ಣ ಎಸ್.ಬೆಳವಾಡಿ, ಡಾ. ಎಚ್. ಆರ್. ರೇಣುಕ, ಸಿಬಂತಿ ಪದ್ಮನಾಭ,ಡಾ. ಎಚ್. ದಂಡಪ್ಪ, ಡಾ. ಎ. ರಘುರಾಂ, ಡಾ. ಎನ್. ಸುರೇಶ್ ನಾಗಲಮಡಿಕೆ, ಡಾ. ಆರ್. ತಾರಿಣಿ ಶುಭದಾಯಿನಿ ವಿಶೇಷ ಉಪನ್ಯಾಸ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News