ಭೀಮಾ ಕೊರೆಗಾಂವ್ ಘಟನೆ ನಂತರದ ಹಿಂಸಾಚಾರ: ಪ್ರಕರಣ ಹಿಂಪಡೆಯಲು ಸರಕಾರ ಚಿಂತನೆ

Update: 2018-03-13 16:50 GMT

 ಮುಂಬೈ, ಮಾ.13: ಜನವರಿಯಲ್ಲಿ ನಡೆದ ಭೀಮಾ ಕೊರೆಗಾಂವ್ ಘಟನೆಯ ನಂತರ ನಡೆದ ಹಿಂಸಾಚಾರದಲ್ಲಿ ಮುಂಬೈ ಸೇರಿದಂತೆ ರಾಜ್ಯಾದ್ಯಂತ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಮತ್ತು ಘಟನೆಯಲ್ಲಿ ಉಂಟಾಗಿರುವ ಆಸ್ತಿಗಳ ನಾಶಕ್ಕೆ ಪರಿಹಾರ ಒದಗಿಸಲು ಮಹಾರಾಷ್ಟ್ರ ಸರಕಾರ ಚಿಂತನೆ ನಡೆಸಿದೆ. ರಾಜ್ಯ ಸರಕಾರವು ಭೀಮಾ ಕೊರೆಗಾಂವ್ ಘಟನೆಯಲ್ಲಿ ದಾಖಲಾಗಿರುವ ದೂರುಗಳನ್ನು ವಾಪಸ್ ಪಡೆದುಕೊಳ್ಳಲು ಯೋಚಿಸಿದೆ. ಆದರೆ ಪರಿಸ್ಥಿತಿಯ ದುರುಪಯೋಗಪಡಿಸಿಕೊಂಡು ಹಿಂಸಾಚಾರದಲ್ಲಿ ತೊಡಗಿದ್ದ ಅಪರಾಧಿ ಹಿನ್ನೆಲೆಯ ವ್ಯಕ್ತಿಗಳು ಮಾತ್ರ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ.

ಬಿಜೆಪಿ ನೇತೃತ್ವದ ರಾಜ್ಯ ಸರಕಾರ ದಲಿತ ಯುವಕರ ವಿರುದ್ಧ ಅನಗತ್ಯ ದೂರುಗಳನ್ನು ದಾಖಲಿಸಿ ಬಂಧಿಸಿದೆ ಎಂದು ದಲಿತ ಗುಂಪುಗಳು ಮತ್ತು ನಾಯಕರು ಆರೋಪಿಸುತ್ತಲೇ ಬಂದಿದ್ದಾರೆ. ಒಟ್ಟಾರೆಯಾಗಿ 1,199 ಜನರ ವಿರುದ್ಧ 622 ಪ್ರಕರಣಗಳು ದಾಖಲಾಗಿದೆ ಮತ್ತು 13 ಕೋಟಿ ರೂ.ನಷ್ಟು ಆಸ್ತಿಗಳಿಗೆ ಹಾನಿಯಾಗಿದೆ ಎಂದು ಫಡ್ನವೀಸ್ ತಿಳಿಸಿದ್ದಾರೆ. ಭೀಮಾ ಕೊರೆಗಾಂವ್ ಘಟನೆಯ ಮುಖ್ಯ ಆರೋಪಿ ಮಿಲಿಂದ್ ಎಕ್ಬೊತೆ ಬಗ್ಗೆ ಸರಕಾರವು ಮೃದು ಧೋರಣೆ ಅನುಸರಿಸುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಫಡ್ನವೀಸ್, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ಆತನಿಗೆ ಷರತ್ತುಬದ್ಧ ಜಾಮೀನು ನೀಡಿದೆ ಮತ್ತು ನಾವು ಆತನನ್ನು ವಿಚಾರಣೆಗೊಳಪಡಿಸಬಹುದು ಎಂದು ತಿಳಿಸಿದೆ. ನಮ್ಮ ಪರವಾಗಿ ಅಟರ್ನಿ ಜನರಲ್ ನ್ಯಾಯಾಲಯದಲ್ಲಿ ವಾದಿಸುತ್ತಿದ್ದು ಮಿಲಿಂದ್‌ನನ್ನು ನ್ಯಾಯಾಂಗ ಬಂಧನಕ್ಕೆ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಫಡ್ನವೀಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News