ಪಿಎನ್‌ಬಿ ಹಗರಣ, ಆಂಧ್ರ ವಿಶೇಷ ಸ್ಥಾನಮಾನ ಗದ್ದಲ: ಲೋಕಸಭೆಯಲ್ಲಿ 7 ದಿನವೂ ಕಲಾಪ ಅಸ್ತವ್ಯಸ್ತ

Update: 2018-03-13 17:24 GMT

 ಹೊಸದಿಲ್ಲಿ,ಮಾ.13: ಬ್ಯಾಂಕ್ ಹಗರಣಗಳು ಹಾಗೂ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಮತ್ತಿತರ ವಿಷಯಗಳಿಗೆ ಸಂಬಂಧಿಸಿ ಪ್ರತಿಪಕ್ಷಗಳು ಹಾಗೂ ಟಿಡಿಪಿ ಸದಸ್ಯರು ಸದನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಪರಿಣಾಮವಾಗಿ ಸತತ ಏಳನೇ ದಿನವೂ ಲೋಕಸಭಾ ಕಲಾಪಗಳು ಅಸ್ತವ್ಯಸ್ತಗೊಂಡವು.

ಟಿಡಿಪಿ,ಕಾಂಗ್ರೆಸ್, ಎಡಿಎಂಕೆ, ಟಿಆರ್‌ಎಸ್ ಹಾಗೂ ತೃಣಮೂಲ ಕಾಂಗ್ರೆಸ್ ಸದಸ್ಯರು ಸದನದ ಅಂಗಣಕ್ಕೆ ಧಾವಿಸಿ ಬಂದು, ಗದ್ದಲ ಎಬ್ಬಿಸಿದ್ದರಿಂದ ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ಕಲಾಪಗಳನ್ನು ಸ್ಥಗಿತಗೊಳಿಸಬೇಕಾಯಿತು.

ಪ್ರತಿಭಟನಾ ನಿರತರ ಸದಸ್ಯರು ‘ನಮಗೆ ನ್ಯಾಯ ಕೊಡಿ’ ಮತ್ತಿತರ ಘೋಷಣೆಗಳನ್ನು ಕೂಗುತ್ತಿದ್ದರು.

 ಕಳೆದ ವಾರವಷ್ಟೇ ಕೇಂದ್ರ ಸಂಪುಟದಿಂದ ಹೊರಬಂದ ತೆಲುಗುದೇಶಂ ಪಕ್ಷದ ಸದಸ್ಯರು ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಘೋಷಣೆಗನ್ನು ಕೂಗಿದರು. ‘‘ ಮೈತ್ರಿಕೂಟದ ಧರ್ಮಪಾಲಿಸಿ’ಎಂಬ ಘೋಷಣೆಗಳುಳ್ಳ ಭಿತ್ತಿಪತ್ರಗಳನ್ನು ಅವರು ಹಿಡಿದಿದ್ದರು.

 ಟಿಡಿಪಿ ಸದಸ್ಯರ ಗದ್ದಲದ ನಡುವೆ, ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಸದಸ್ಯರು ಪಂಜಾಬ್ ನ್ಯಾಶನಲ್ ಬ್ಯಾಂಕ್‌ತ ಹಗರಣವನ್ನು ಪ್ರಸ್ತಾಪಿಸಿದರೆ, ಟಿಆರ್‌ಎಸ್ ಪಕ್ಷವು ಮೀಸಲಾತಿ ಕೋಟಾ ಏರಿಕೆಗೆ ಆಗ್ರಹಿಸಿದರು. ಈ ಮಧ್ಯೆ ಎಡಿಎಂಕೆ ಸದಸ್ಯರು, ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸುವ ಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು. ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣ ದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರಲ್ಲೊಬ್ಬರು ‘ಚೋಟಾ ಮೋದಿ ಕಹಾಂ ಗಯಾ’ ಎಂಬ ಬರಹದ ಭಿತ್ತಿಪತ್ರವೊಂದನ್ನು ಹಿಡಿದಿದ್ದರು. ಹಲವು ಬಾರಿ ಮನವಿ ಮಾಡಿದ ಹೊರತಾಗಿಯೂ ಸದನದಲ್ಲಿ ಕೋಲಾಹಲ ನಿಲ್ಲದೆ ಇದ್ದಾಗ, ಸ್ಪೀಕರ್ ಸುಮಿತ್ರಾ ಮಹಾಜನ್, ಸ್ಥಾಯಿ ಸಮಿತಿಯ ವಿವಿಧ ವರದಿಗಳನ್ನು ಮಂಡಿಸಿದ ಬಳಿಕ ಸದನದ ಕಲಾಪಗಳನ್ನು ಮುಂದೂಡಿದರು.

   ಸದನವು ಇಂದು ಮಹತ್ವದ ಹಣಕಾಸು ವಿಧೇಯಕ 2018 ಹಾಗೂ 2017-18 ಮತ್ತು 2018-19ರ ಸಾಲಿನ ವಿನಿಯೋಗ ವಿಧೇಯಕಗಳನ್ನು ಕೈಗೆತ್ತಿಕೊಳ್ಳಬೇಕಿತ್ತಾದರೂ, ಪ್ರತಿಪಕ್ಷ ಸದಸ್ಯರ ತೀವ್ರ ಗದ್ದಲದಿಂದಾಗಿ ಅದು ಸಾಧ್ಯವಾಗಲಿಲ್ಲ.

   ಸಂಸತ್‌ನ ಬಜೆಟ್ ಅಧಿವೇಶನದ ಎರಡನೆ ಹಂತ ಮಾರ್ಚ್ 5ರಂದು ಆರಂಭಗೊಂಡಿದ್ದು, ಆವಾಗಿನಿಂದ ಸದನದಲ್ಲಿ ಆಗಾಗ್ಗೆ ಗದ್ದಲ ಭುಗಿಲೆದ್ದ ಪರಿಣಾಮವಾಇ ಲೋಕಸಭಾ ಕಲಾಪಗಳು ನಡೆಯಲು ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News