ವ್ಯವಸ್ಥೆಯ ಮುಖಕ್ಕೆ ಕನ್ನಡಿಯಾದ ರೈತರ ಜರ್ಜರಿತ ಪಾದ

Update: 2018-03-14 04:16 GMT

ಸೋಮವಾರ ಮುಂಬೈಗೆ ತಮ್ಮ ಹಕ್ಕುಗಳನ್ನು ಈಡೇರಿಸಿಕೊಳ್ಳಲು ಮುಂಬೈಗೆ ಹರಿದು ಬಂದ ರೈತಸಾಗರವನ್ನು ಇನ್ನೊಂದು ಸ್ವಾತಂತ್ರ ಹೋರಾಟದ ಭಾಗವಾಗಿ ನಾವು ಸ್ವೀಕರಿಸಬೇಕಾಗಿದೆ. ಈ ದೇಶದ ವ್ಯವಸ್ಥೆ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳನ್ನು ಸರ್ವ ರೀತಿಯಲ್ಲಿ ವ್ಯವಸ್ಥೆ ದಮನ ಮಾಡುತ್ತಿದೆ. ತಮ್ಮ ಹಕ್ಕುಗಳನ್ನು ಕೇಳುವ ಎಲ್ಲ ಅವಕಾಶಗಳನ್ನು ಅವರಿಂದ ಕಿತ್ತುಕೊಂಡಿದೆ. ಈ ದೇಶದಲ್ಲಿ ಕಾರ್ಮಿಕರು, ರೈತರು ರಾಜಕೀಯ ಶಕ್ತಿಯಲ್ಲ ಎನ್ನುವುದನ್ನು ಸರಕಾರ ನಿರೂಪಿಸಲು ನೂರಾರು ತಂತ್ರಗಳನ್ನು ಹೆಣೆಯುತ್ತಿರುವ ಹೊತ್ತಿನಲ್ಲೇ, ರೈತ ಮತ್ತು ಕಾರ್ಮಿಕರ ಶಕ್ತಿ ಮುಂಬೈಯಲ್ಲಿ ಫೀನಿಕ್ಸ್‌ನಂತೆ ಎದ್ದು ನಿಂತು ನಗರದ ಬೀದಿಗಳಲ್ಲಿ ಹರಿಯಿತು. ಯಾವುದೇ ಧರ್ಮ, ಜಾತಿ ಮೊದಲಾದ ಭಾವನಾತ್ಮಕ ವಿಷಯಗಳಿಲ್ಲದೆ ಅಪ್ಪಟವಾಗಿ ಜನಸಾಮಾನ್ಯರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು 50,000ಕ್ಕೂ ಅಧಿಕ ಜನರನ್ನು ಸಂಘಟಿಸಿ 180 ಕಿಲೋ ಮೀಟರ್ ದಾರಿಯನ್ನು ಹಗಲು ರಾತ್ರಿ ಎನ್ನದೆ, ಬಿಸಿಲಿಗೂ ಹೆದರದೆ ಕಾಲ್ನಡಿಗೆಯಲ್ಲಿ ಸವೆಸಿ ಮುಂಬೈಯವರೆಗೆ ಕರೆತರುವುದು ಇಂದಿನ ರಾಜಕೀಯ ಸನ್ನಿವೇಶದಲ್ಲಿ ಒಂದು ಕ್ರಾಂತಿಕಾರಿ ಬೆಳವಣಿಗೆಯಾಗಿದೆ.

ತ್ರಿಪುರಾದಲ್ಲಿ ಕಮ್ಯುನಿಸ್ಟ್ಟ್ ಪಕ್ಷ ನೆಲ ಕಚ್ಚಿದ ಬೆನ್ನಿಗೇ ಅದು ಮಹಾರಾಷ್ಟ್ರದಲ್ಲಿ ರೈತರ ಆಂದೋಲನವಾಗಿ ಭೋರ್ಗರೆದದ್ದು ಮೋದಿ ಮತ್ತು ಅವರ ಬಳಗಕ್ಕೆ ದೊಡ್ಡ ಸಂದೇಶವನ್ನು ನೀಡಿದೆ. ರೈತರು ಮತ್ತು ಕಾರ್ಮಿಕರ ಧ್ವನಿಯನ್ನು ಹೊರಗೆ ಕೇಳಿಸದಂತೆ ಮುಚ್ಚಿ ಹಾಕಿ, ಈ ದೇಶದಲ್ಲಿ ರೈತರಿಗೆ, ಕಾರ್ಮಿಕರಿಗೆ ಸಮಸ್ಯೆಗಳೇ ಇಲ್ಲ ಎಂದು ಬಿಂಬಿಸುವುದು ಅಷ್ಟು ಸುಲಭವಲ್ಲ ಎನ್ನುವುದನ್ನು ಇದು ಸ್ಪಷ್ಟಪಡಿಸಿದೆ. ರೈತರು ಮತ್ತು ಕಾರ್ಮಿಕರ ಆಕ್ರೋಶದ ಬೆಂಕಿ ಈ ದೇಶದ ರಾಜಕೀಯದ ಒಡಲಲ್ಲಿ ಇನ್ನೂ ದಾವಾನಲವಾಗಿ ಧಗಿಸುತ್ತಲೇ ಇದೆ. ಅದು ಒಂದು ದಿನ ಸ್ಫೋಟಿಸಿದರೆ ಅದರ ಲಾವಾರಸದಿಂದ ಎಲ್ಲವೂ ಅಸ್ತವ್ಯಸ್ತವಾಗಬಹುದು ಎನ್ನುವ ಎಚ್ಚರಿಕೆಯನ್ನು ಈ ಆಂದೋಲನ ಸರಕಾರಕ್ಕೆ ನೀಡಿದೆ. ಈ ಆಂದೋಲನ ಸರಕಾರವನ್ನು ಎಷ್ಟರಮಟ್ಟಿಗೆ ನಡುಗಿಸಿತು ಎಂದರೆ, ಸೋಮವಾರದ ದಿನ, ಯಾವ ಚರ್ಚೆಯೂ ಇಲ್ಲದೆ ರೈತರ ಬೇಡಿಕೆಗಳಿಗೆ ಆಳುವವರು ಒಪ್ಪಿಕೊಳ್ಳಬೇಕಾಯಿತು. ಯಾವುದೇ ಪ್ರಗತಿ ಪರ ಸಂಘಟನೆಗಳು ಜೀವಂತವಾಗಿರಬೇಕೆಂದರೆ ಅದು ಅಧಿಕಾರದಲ್ಲಿರಲೇಬೇಕು ಎಂದೇನಿಲ್ಲ. ಮೊತ್ತ ಮೊದಲು ಅದು ತಳಸ್ತರದ ಜನರ ನಡುವೆ ಅಸ್ತಿತ್ವದಲ್ಲಿರಬೇಕು. ರಾಜಕೀಯ ಅಧಿಕಾರ ಪಡೆಯಲು ಇಂದು ಸಾವಿರ ಅಡ್ಡದಾರಿಗಳಿವೆ. ರೈತ, ಕಾರ್ಮಿಕರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅಧಿಕಾರ ಹಿಡಿಯುವುದು ಇಂದಿನ ದಿನಗಳಲ್ಲಿ ಸುಲಭವೂ ಅಲ್ಲ. ಅಧಿಕಾರ ಹಿಡಿಯಲು ವಿಫಲವಾದಾಕ್ಷಣ ರೈತರನ್ನು ಪ್ರತಿನಿಧಿಸುವ ಪಕ್ಷಗಳು ದೇಶದಲ್ಲಿ ಅಪ್ರಸ್ತುತವಾಗಿವೆ ಎಂದು ನಿರಾಶೆಯಾಗಬೇಕಾದ ಅಗತ್ಯವಿಲ್ಲ. ಮಹಾರಾಷ್ಟ್ರದ ರೈತ ಜಾಥ ಇದನ್ನೇ ಹೇಳುತ್ತಿದೆ. ಈ ಮಹಾ ಪಾದಯಾತ್ರೆಯನ್ನು ನಾವು ಕೇವಲ ಕಮ್ಯುನಿಸ್ಟರಿಗಷ್ಟೇ ಸೀಮಿತಗೊಳಿಸಿ ವಿಮರ್ಶೆ ಮಾಡಿದರೆ, ದೇಶದ ಸಮಸ್ಯೆಯನ್ನು ನಾವು ಸಂಕುಚಿತ ಗೊಳಿಸಿದಂತಾಗುತ್ತದೆ.

ಈ ದೇಶದಲ್ಲಿ ರೈತರು, ಕಾರ್ಮಿಕರು ಹತಾಶರಾಗಿದ್ದಾರೆ. ಅವರನ್ನು ಜಾಗೃತಗೊಳಿಸಿ, ಸಂಘಟಿತರನ್ನಾಗಿಸಿ ವ್ಯವಸ್ಥೆಯ ವಿರುದ್ಧ ನಿಲ್ಲಿಸುವವರ ಕೊರತೆ ಎದ್ದು ಕಾಣುತ್ತಿದೆ. ಒಂದು ವೇಳೆ ಸಂಘಟಿತಗೊಳಿಸುವ ಒಂದು ಶಕ್ತಿಯಿದ್ದರೆ ಏನಾಗಬಹುದು ಎನ್ನುವುದಕ್ಕೆ ರೈತರ ಈ ಐತಿಹಾಸಿಕ ರ್ಯಾಲಿಯೇ ಸಾಕ್ಷಿ. ಇಲ್ಲಿ ಎಡಪಕ್ಷಗಳು ಒಂದು ನೆಪ ಮಾತ್ರ. ಆ ಸ್ಥಾನವನ್ನು ಯಾವ ಪಕ್ಷಗಳೂ ತುಂಬಬಹುದು. ಈ ರ್ಯಾಲಿಯನ್ನು ಸಂಘಟಿಸಿದ ಪ್ರಮುಖರಲ್ಲಿ ವಿಜೂ ಕೃಷ್ಣನ್ ಎಂಬವರ ಹೆಸರು ಮಾಧ್ಯಮಗಳಲ್ಲಿ ಇದೀಗ ಹರಿದಾಡುತ್ತಿದೆ. ಜೆಎನ್‌ಯುವಿನಿಂದ ಹೊರಹೊಮ್ಮಿದ ಈ ಸಂಘಟಕ ಮಾಧ್ಯಮಗಳಲ್ಲಿ ಕೇಂದ್ರ ಬಿಂದುವಾಗಿದ್ದಾರೆ. ಈ ರ್ಯಾಲಿಯ ಮೂಲಕ ವಿಜೂ ಕೃಷ್ಣನ್ ಕೂಡ ಹೊಸ ನಾಯಕನಾಗಿ ಹೊರಹೊಮ್ಮಿದ್ದಾರೆ. ಮುಂದಿನ ದಿನಗಳಲ್ಲಿ ಕನ್ಹಯ್ಯಾ, ಜಿಗ್ನೇಶ್, ಉಮರ್ ಖಾಲಿದ್ ಸಾಲಿನಲ್ಲಿ ಇವರೂ ಗುರುತಿಸಲ್ಪಡಬಹುದು. ಈ ರ್ಯಾಲಿಯ ಅತಿ ದೊಡ್ಡ ಹಿರಿಮೆಯೆಂದರೆ, ಗ್ರಾಮೀಣ ಪ್ರದೇಶದ ರೈತರು ಮತ್ತು ಮಹಿಳೆಯರು ನೇರವಾಗಿ ಪಾಲುದಾರರಾದುದು. ಇವರ್ಯಾರೂ ರಾಜಕೀಯ ಪಕ್ಷಗಳ ಆಮಿಶಕ್ಕೆ ಬಲಿಯಾಗಿ ಗುಂಪಿನಲ್ಲಿ ಗೋವಿಂದ ಎಂದು ಭಾಗವಹಿಸಿದವರಲ್ಲ. ಮಹಾರಾಷ್ಟ್ರ ಸರಕಾರದ ರೈತವಿರೋಧಿ ಧೋರಣೆಯಿಂದ ಹಾನಿಯಾದ ಎಲ್ಲರೂ ಸ್ವ ಇಚ್ಛೆಯಿಂದ 180 ಕಿ.ಮೀ. ದಾರಿಯನ್ನು ಸವೆಸಿದ್ದಾರೆ. ಹಾಗೆಂದು ಇವರ್ಯಾರೂ ಕಮ್ಯುನಿಸ್ಟ್ ಪಕ್ಷದ ನೇರ ಕಾರ್ಯಕರ್ತರು ಅಲ್ಲವೇ ಅಲ್ಲ. ಅವರ ಹೋರಾಟದ ಪ್ರಾಮಾಣಿಕತೆಯನ್ನು, ಬಿಸಿಲಲ್ಲಿ ನಡೆದು ಜರ್ಜರಿತವಾದ ಅವರ ಪಾದಗಳೇ ಹೇಳುತ್ತಿದ್ದವು.

ಮಾಧ್ಯಮಗಳಲ್ಲಿ ರೈತರ ಮುಖಗಳಿಗಿಂತ ಅವರ ಹರಿದ ಪಾದಗಳೇ ರಾರಾಜಿಸಿದವು. ಈ ಪಾದಗಳು ವ್ಯವಸ್ಥೆಯ ಮುಖಕ್ಕೆ ಹಿಡಿದ ಕನ್ನಡಿಯೂ ಆಗಿತ್ತು. ಇದೇ ಸಂದರ್ಭದಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು. 50,000ದಷ್ಟು ಜನರು ಸೇರಿದ್ದರೂ ಯಾವುದೇ ರೀತಿಯ ಗೊಂದಲ, ಗದ್ದಲ, ಹಿಂಸಾಚಾರ ನಡೆಯಲಿಲ್ಲ. ಸಂಘಪರಿವಾರ ಬರೇ ನೂರು ಜನರ ರ್ಯಾಲಿ ಮಾಡಿ ಅಂಗಡಿ ಮುಂಗ್ಗಟ್ಟುಗಳಿಗೆ ಕಲ್ಲು ತೂರಾಟಗೈದು, ಅಮಾಯಕರ ಪ್ರಾಣ ತೆಗೆದು ಕಾನೂನು ವ್ಯವಸ್ಥೆಯನ್ನು ನಾಶ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಒಂದು ಪ್ರಾಮಾಣಿಕವಾದ ಪ್ರತಿಭಟನೆ ಹೇಗಿರುತ್ತದೆ ಎನ್ನುವುದನ್ನು ರೈತರು ಮತ್ತು ಕಾರ್ಮಿಕರು ದೇಶದ ರಾಜಕೀಯ ಪಕ್ಷಗಳಿಗೆ ತೋರಿಸಿಕೊಟ್ಟಿದ್ದಾರೆ. ಆದರೆ ದುರದೃಷ್ಟವಶಾತ್ ಬಿಜೆಪಿಯ ನಾಯಕಿಯೊಬ್ಬರು ಪ್ರತಿಭಟನಾಕಾರರನ್ನು ‘ನಕ್ಸಲೈಟುಗಳು, ಉಗ್ರರು’ ಎಂದು ಕರೆದು ತಮ್ಮಾಳಗಿರುವ ಕ್ರೌರ್ಯವನ್ನು ಬಹಿರಂಗಪಡಿಸಿದ್ದಾರೆ.

ತಮ್ಮ ಬೇಡಿಕೆಗಾಗಿ ಬೀದಿಗಿಳಿದ ಈ ದೇಶದ ರೈತರು ಮತ್ತು ಕಾರ್ಮಿಕರು ನಕ್ಸಲೈಟ್ ಆದರೆ, ಬೀದಿಗಳಲ್ಲಿ ನಕಲಿ ಗೋರಕ್ಷಕರು, ಸಂಸ್ಕೃತಿ ರಕ್ಷಕರ ವೇಷದಲ್ಲಿ ಚೂರಿ ಹಿಡಿದು ಓಡಾಡುತ್ತಿರುವ ಸಂಘಪರಿವಾರವನ್ನು ಏನೆಂದು ಕರೆಯಬೇಕು? ಅವರ ಕುರಿತಂತೆ ಈ ನಾಯಕರು ಯಾಕೆ ಈವರೆಗೆ ಯಾವ ಹೇಳಿಕೆಯನ್ನೂ ನೀಡಿಲ್ಲ? ಕೈಯಲ್ಲಿ ಯಾವುದೇ ಅಸ್ತ್ರಗಳನ್ನು ಇಟ್ಟುಕೊಳ್ಳದೆ, ಕಾಲಿಗೆ ಸರಿಯಾದ ಚಪ್ಪಲಿಯೂ ಇಲ್ಲದೆ 180 ಕಿಲೋ ಮೀಟರ್ ಪಾದಯಾತ್ರೆಯನ್ನು ಯಾವುದೇ ಗದ್ದಲ, ಗೊಂದಲಗಳಿಲ್ಲದೆ ನೆರವೇರಿಸಿದ ರೈತರನ್ನು ಉಗ್ರರೆಂದು ಕರೆದವರೇ ಈ ದೇಶದ ನಿಜವಾದ ಉಗ್ರರು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಈ ದೇಶದಲ್ಲಿ ಅಂತರ್‌ಗಂಗೆಯಂತೆ ಹರಿಯುತ್ತಿರುವ ರೈತರು, ಕಾರ್ಮಿಕರ ನೋವು, ದುಮ್ಮಾನಗಳೇ ಭಾರತದ ಮುಂದಿನ ರಾಜಕೀಯದ ದಿಕ್ಕನ್ನು ಮುನ್ನಡೆಸಲಿದೆ. ಕಾರ್ಪೊರೇಟ್ ಶಕ್ತಿಗಳನ್ನು ಮುಂದಿಟ್ಟು ನಡೆಸುವ ರಾಜಕೀಯ ಹೆಚ್ಚು ಸಮಯ ಬಾಳಿಕೆಬಾರದು. ಅದು ಉಲ್ಕೆಯಂತೆ ಒಮ್ಮೆಗೆ ಹೊಳೆದು ಇಲ್ಲವಾಗಬಹುದು. ದೇಶದ ರೈತರನ್ನು ನಿರ್ಲಕ್ಷಿಸಿ ಕಾರ್ಪೊರೇಟ್ ಶಕ್ತಿಗಳನ್ನು ಪೊರೆದದ್ದಕ್ಕೆ ಆ ಉದ್ಯಮಿಗಳು ಸರಿಯಾದ ಪಾಠವನ್ನು ಕಲಿಸುತ್ತಿದ್ದಾರೆ. ದೇಶದ ಕೋಟ್ಯಂತರ ರೂಪಾಯಿಯನ್ನು ಒಬ್ಬೊಬ್ಬರಾಗಿ ಕೊಳ್ಳೆ ಹೊಡೆದು ವಿದೇಶಗಳಲ್ಲಿ ಬಚ್ಚಿಟ್ಟುಕೊಳ್ಳ್ಳುತ್ತಿದ್ದಾರೆ. ಬೃಹತ್ ಉದ್ಯಮಿಗಳ ಕುರಿತಂತೆ ಮಾಧ್ಯಮಗಳು ಮೂಡಿಸಿದ ಭ್ರಮೆಗಳು ನಿಧಾನವಾಗಿ ಕರಗುತ್ತಿವೆ. ಅವರ ಬಣ್ಣ ಕಳಚಿದ ಹಾಗೆಯೇ, ಬದಿಗೆ ಸರಿದ ರೈತ ಮತ್ತು ಕಾರ್ಮಿಕ ಶಕ್ತಿಗಳು ಮತ್ತೆ ಮುನ್ನೆಲೆಗೆ ಬರಲಿವೆ. ಕುಸಿದು ಬಿದ್ದ ದೇಶದ ಆರ್ಥಿಕತೆಗೆ ಅವರೇ ನಿಜವಾದ ಭರವಸೆಯಾಗಿದ್ದಾರೆ. ಆದುದರಿಂದ ಎಲ್ಲ ರಾಜಕೀಯ ಪಕ್ಷಗಳು ಮತ್ತೆ ರೈತ, ಕಾರ್ಮಿಕರ ಕಡೆಗೆ ದೃಷ್ಟಿ ಹರಿಸಲೇಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News