ಬ್ರಿಟನ್: ಮುಸ್ಲಿಮ್ ಸಂಸದರಿಗೆ ನಿಗೂಢ ದ್ರವ ಪೊಟ್ಟಣಗಳು

Update: 2018-03-14 16:25 GMT

ಲಂಡನ್, ಮಾ. 14: ಬ್ರಿಟಿಶ್ ಸಂಸತ್ತಿನ ನಾಲ್ವರು ಮುಸ್ಲಿಮ್ ಸಂಸದರಿಗೆ ನಿಗೂಢ ಅಂಟು ದ್ರವವನ್ನೊಳಗೊಂಡ ಪೊಟ್ಟಣಗಳನ್ನು ಕಳುಹಿಸಲಾಗಿದೆ. ಈ ಪೊಟ್ಟಣಗಳಲ್ಲಿ ‘ಪನಿಶ್ ಅ ಮುಸ್ಲಿಮ್ ಡೇ’ (ಮುಸ್ಲಿಮರನ್ನು ಶಿಕ್ಷಿಸುವ ದಿನ) ಎಂದು ಬರೆಯಲಾಗಿದೆ.

ಸಂಶಯಾಸ್ಪದ ಪೊಟ್ಟಣಗಳನ್ನು ಸ್ವೀಕರಿಸಿದ ಎಲ್ಲ ಸಂಸದರು ಪ್ರತಿಪಕ್ಷ ಲೇಬರ್ ಪಕ್ಷದವರು. ಕಳೆದ ಎರಡು ದಿನಗಳ ಅವಧಿಯಲ್ಲಿ ಈ ಸಂಸದರು ಒಂದೇ ರೀತಿಯ ಪೊಟ್ಟಣಗಳನ್ನು ವೆಸ್ಟ್‌ಮಿನ್‌ಸ್ಟರ್ ಅರಮನೆಯ ಆವರಣದಲ್ಲಿರುವ ಅವರ ಸಂಸದೀಯ ಕಚೇರಿಗಳಲ್ಲಿ ಸ್ವೀಕರಿಸಿದ್ದಾರೆ.

ಪೊಟ್ಟಣಗಳನ್ನು ಪಡೆದವರೆಂದರೆ- ಬಾಂಗ್ಲಾದೇಶ ಮೂಲದ ಸಂಸದರಾದ ರುಶನಾರ ಅಲಿ ಮತ್ತು ರುಪ ಹಕ್ ಹಾಗೂ ಪಾಕಿಸ್ತಾನ ಮೂಲದ ಸಂಸದರಾದ ಅಫ್ಝಲ್ ಖಾನ್ ಮತ್ತು ಮುಹಮ್ಮದ್ ಯಾಸಿನ್.

‘‘ಭದ್ರತಾ ತಪಾಸಣೆಗಳ ಬಳಿಕವೂ ಈ ಪೊಟ್ಟಣಗಳು ಒಳಗೆ ಬಂದಿರುವುದು ಆತಂಕಕಾರಿಯಾಗಿದೆ. ಅವುಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿದೆ ಎನ್ನುವುದು ನನಗೆ ಗೊತ್ತು’’ ಎಂದು ಸಂಸದ ಹಕ್ ಹೇಳುತ್ತಾರೆ.

ಈ ಪೊಟ್ಟಣದ ಸಂಪರ್ಕಕ್ಕೆ ಬಂದ ಬಳಿಕ ಆಸ್ಪತ್ರೆಗೆ ಸೇರಿಸಲಾಗಿದ್ದ ಓರ್ವ ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ. ಸೋಮವಾರ, ಯಾಸಿನ್‌ರ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಮುಂಜಾಗರೂಕತಾ ಕ್ರಮವಾಗಿ ಕೊಂಚ ಅವಧಿಗೆ ಆಸ್ಪತ್ರೆಗೆ ಸೇರಿಸಲಾಗಿತ್ತು.

ಎ.3: ಮುಸ್ಲಿಮರನ್ನು ಶಿಕ್ಷಿಸುವ ದಿನ!

ಈ ನಡುವೆ, ‘ಮುಸ್ಲಿಮರನ್ನು ಶಿಕ್ಷಿಸುವ ದಿನ’ದ ಸಂದೇಶವನ್ನು ಹೊತ್ತ ಪತ್ರಗಳು ಬ್ರಿಟನ್‌ನ ಮೂಲೆ ಮೂಲೆಗಳಿಗೆ ರವಾನೆಯಾಗಿರುವ ಹಿನ್ನೆಲೆಯಲ್ಲಿ, ಭಯೋತ್ಪಾದನೆ ನಿಗ್ರಹ ಅಧಿಕಾರಿಗಳು ತನಿಖೆಗೆ ಇಳಿದಿದ್ದಾರೆ.

ಎಪ್ರಿಲ್ 3ನ್ನು ‘ಮುಸ್ಲಿಮರನ್ನು ಶಿಕ್ಷಿಸುವ ದಿನ’ ಎಂಬುದಾಗಿ ಘೋಷಿಸುವ ಈ ಪತ್ರಗಳು, ಆ ದಿನ ಮುಸ್ಲಿಮರನ್ನು ನಿಂದಿಸಿ ಹಾಗೂ ಅವರ ಮೇಲೆ ಆಕ್ರಮಣ ಮಾಡಿ ಹಾಗೂ ಮಸೀದಿಗಳ ಮೇಲೆ ದಾಳಿ ನಡೆಸಿ ಎಂದು ಕರೆ ನೀಡುತ್ತವೆ.

ಆ ದಿನ ಮುಸ್ಲಿಮರನ್ನು ನಿಂದಿಸಿ, ಮಹಿಳೆಯರ ಶಿರವಸ್ತ್ರ (ಹಿಜಾಬ್)ವನ್ನು ಹರಿದುಹಾಕಿ, ದೈಹಿಕ ಹಲ್ಲೆ ನಡೆಸಿ ಹಾಗೂ ಆ್ಯಸಿಡನ್ನು ಶಸ್ತ್ರವಾಗಿ ಬಳಸಿ ಎಂದು ಪತ್ರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News