ಸಫಾಯಿ ಕರ್ಮಚಾರಿ ಕಾನೂನು ಜಾರಿಯಿಂದ ಗಮನಾರ್ಹ ಬದಲಾವಣೆ: ಎಂ.ಆರ್ ರಾಜೇಶ್

Update: 2018-03-14 17:21 GMT

ಮಂಡ್ಯ, ಮಾ.14: ರಾಜ್ಯ ಸಫಾಯಿ ಕರ್ಮಚಾರಿಗಳ ಸುರಕ್ಷತೆಯ ಸಂಬಂಧ 2013ರಲ್ಲಿ ಕಾನೂನು ಜಾರಿಗೆ ಬಂದ ನಂತರ ಆಗಿರುವ ಬದಲಾವಣೆ ಗಮನಾರ್ಹವಾಗಿದೆ ಎಂದು ಉಪವಿಭಾಗಾಧಿಕಾರಿ ಎಂ.ಆರ್.ರಾಜೇಶ್ ತಿಳಿಸಿದ್ದಾರೆ.

ನಗರದ ಕಲಾಮಂದಿರದಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ  ಬುಧವಾರ ಆಯೋಜಿಸಲಾಗಿದ್ದ ಸಫಾಯಿ ಕರ್ಮಚಾರಿಗಳ, ಮ್ಯಾನ್ಯುಯಲ್ ಸ್ಕ್ಯಾವೆಂಜರುಗಳ ನಿಯೋಜನೆ ನಿಷೇಧ ಮತ್ತು ಪುನರ್‍ವಸತಿ ಅಧಿನಿಯಮ 2013ರ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ಮಚಾರಿ ಸೇವೆಯ ಸಂಬಂಧ ಮಾಡಿರುವ ಕಾನೂನುಗಳ ಬಗ್ಗೆ ಜನರು ಮತ್ತು ಕರ್ಮಚಾರಿಗಳಿಗೆ ಅರಿವು ಮೂಡಿಸುವುದು ಹಾಗೂ ಅಧಿನಿಯಮದಡಿ ದೊರೆಯುವ ಸೌಲಭ್ಯಗಳನ್ನು ತಿಳಿಸುವುದು ಇಂದಿನ ಕಾರ್ಯಾಗಾರದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಹಲವು ದಿನಗಳ ಹಿಂದೆ ಯಾವುದೇ ಸುರಕ್ಷಾ ಸಾಧನೆಗಳಿಲ್ಲದೆ ಮಲ ತೆಗೆಯುತ್ತಿರುವ ಸಂಬಂಧ ಜಿಲ್ಲಾಧಿಕಾರಿಗಳಿಗೆ ವಾಟ್ಸ್‍ಆಪ್‍ನಲ್ಲಿ ಒಂದು ಸಂದೇಶ ದೊರೆತಿದ್ದು, ಆ ಸಂದೇಶದ ಮೇರೆಗೆ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಕೃತ್ಯಕ್ಕೆ ಕಾರಣವಾದವರ ವಿರುದ್ಧ ದೂರು ದಾಖಲಾದ ಪ್ರಸಂಗವೊಂದನ್ನು ಅವರು ವಿವರಿಸಿದರು.

ಅಧಿಕಾರಿಗಳು ಸಫಾಯಿ ಕರ್ಮಚಾರಿಗಳಿಗೆ ಸುರಕ್ಷತಾ ಉಪಕರಣಗಳನ್ನು ಒದಗಿಸಬೇಕು. ಒದಗಿಸಿದ ಉಪಕರಣಗಳನ್ನು ಬಳಸುವ ವಿಧಾನ ಮಾಹಿತಿಯನ್ನು ಕರ್ಮಚಾರಿಗಳಿಗೆ ನೀಡಬೇಕು. ಕೆಲಸ ಮಾಡಬೇಕಾದ ಸ್ಥಳಕ್ಕೆ ಸದರಿ ಉಪಕರಣಗಳ ಕೊಂಡೊಯ್ಯಬೇಕು. ಯಾರಾದರೂ ಹಾಗೆಯೇ ಉಪಕರಣಗಳಿಲ್ಲದೇ ಕೆಲಸ ಮಾಡಲು ತಿಳಿಸಿದರೆ, ಬರಿಗೈಯಲ್ಲಿ ಕೆಲಸ ಮಾಡಬಾರದು ಎಂದು ಅವರು ಹೇಳಿದರು.

ಕಾನೂನಿನ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಕರ್ಮಚಾರಿಗಳಿಗೆ ಪುನರ್‍ವಸತಿ ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ಕಾರ್ಯಾಗಾರದಲ್ಲಿ ಭಾಗವಹಿಸಿರುವವರು ಪ್ರತಿಯೊಂದು ಗೋಷ್ಠಿಗಳಲ್ಲಿ ಪಾಲ್ಗೊಂಡು ವಿಷಯ ತಿಳಿದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. 

ನಗರಸಭೆ ಅಧ್ಯಕ್ಷ  ಹೊಸಹಳ್ಳಿ ಬೋರೇಗೌಡ, ಶೈಲಜ, ಎಲ್.ನಾಗೇಶ್, ಎಂ.ಹೆಚ್.ವನೇಶ್, ಸಿ.ನಾಗಲಕ್ಷ್ಮಿ, ನಂಜುಂಡ ಮೌರ್ಯ, ಪಳನಿಯಮ್ಮ, ಆರ್.ಕೃಷ್ಣ, ಗೌರಮ್ಮ, ಪಾಪಮ್ಮ, ಎಸ್.ಕುಮಾರ್, ಎಸ್.ವಿಜಯ್‍ಕುಮಾರ್, ಕೆ.ಮಂಜುಳ, ಪವನ್‍ಕುಮಾರ್, ನಾಗರಾಜು ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News