ವಿದ್ಯಾರ್ಥಿಗಳೇ... ಪರೀಕ್ಷೆಯ ಆತಂಕದಿಂದ ಹೊರಬನ್ನಿ

Update: 2018-03-15 07:45 GMT

ಹೆಚ್ಚಿನ ವಿದ್ಯಾರ್ಥಿಗಳ ಮಟ್ಟಿಗೆ ಪರೀಕ್ಷೆ ಎಂದರೆ ಒಂದು ರೀತಿಯಲ್ಲಿ ಅಗ್ನಿಪರೀಕ್ಷೆ. ಅವರು ಅಧ್ಯಯನ ನಡೆಸಿದ್ದನ್ನು ಪ್ರಾಯೋಗಿಕವಾಗಿ ಸಾಬೀತು ಪಡಿಸಿ ಮುಂದಿನ ಘಟ್ಟಕ್ಕೆ ಭಡ್ತ್ತಿ ಹೊಂದಲು ಸಹಾಯಕವಾಗುವ ಒಂದು ಅಂಶವಾಗಿದೆ. ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವಲ್ಲಿ ವಿಫಲರಾದರೆ ಭವಿಷ್ಯದಲ್ಲಿ ತನ್ನ ವ್ಯಕ್ತಿತ್ವಕ್ಕೆ ಧಕ್ಕೆ ಬರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಇನ್ನೇನು ಕೆಲವೇ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಶಾಲಾ-ಕಾಲೇಜುಗಳ ತರಗತಿಗಳಲ್ಲಿ ವರ್ಷಪೂರ್ತಿ ಕಲಿತಿದ್ದನ್ನು ಒರೆಗೆ ಹಚ್ಚುವ ಸಮಯವಿದು. ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ನೆರವಾಗುವ ಸೇತುವೆ ಎಂದರೆ ಪರೀಕ್ಷೆ. ಪರೀಕ್ಷೆಯೆಂದಾಕ್ಷಣ ಶೇ. 80ರಷ್ಟು ವಿದ್ಯಾರ್ಥಿಗಳು ಭಯಪಡುವುದು ಸ್ವಾಭಾವಿಕ. ಪರೀಕ್ಷೆಯ ಭಯದಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ಇದರಿಂದಾಗಿಯೇ ಕೆಲವು ವಿದ್ಯಾರ್ಥಿಗಳು ಹೇಳುವಂತೆ ಪರೀಕ್ಷಾ ಕೊಠಡಿ ಪ್ರವೇಶಿಸುತ್ತಿದ್ದಂತೆಯೆ ಎಷ್ಟು ಆಳವಾಗಿ ಅಧ್ಯಯನ ನಡೆಸಿದ್ದರೂ ಮನಸ್ಸು ಖಾಲಿಯಾಗಿ ಪ್ರಶ್ನೆಗಳಿಗೆ ಉತ್ತರಗಳು ಗೊತ್ತಿದ್ದೂ ಬರೆಯಲಾಗುವುದಿಲ್ಲ. ಅಥವಾ ಯಾವ ಪ್ರಶ್ನೆಗೆ ಯಾವ ಉತ್ತರ ಸರಿಯೆನ್ನುವುದು ಅರಿವಾಗದೇ ಇರುವ ಸಾಧ್ಯತೆ ಇದೆ. ಪರೀಕ್ಷಾ ಫಲಿತಾಂಶವನ್ನು ಯೋಚಿಸುತ್ತಾ ಪರೀಕ್ಷೆಯ ಅಧ್ಯಯನಕ್ಕೆ ತೊಡಗದೆ ಇರುವುದು ವಿದ್ಯಾರ್ಥಿಗಳಿಗೆ ನಷ್ಟ ತಂದೊಡ್ಡುತ್ತದೆ. ನಾನು ಓದಿದ್ದು ಪರೀಕ್ಷೆಯಲ್ಲಿ ಬರದೇ ಹೋದರೆ? ನನ್ನ ಸ್ನೇಹಿತರಿಗಿಂತ ಹೆಚ್ಚು ಅಂಕ ಪಡೆಯದೇ ಹೋದರೆ? ಎಂಬ ಆತಂಕ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿರುತ್ತದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲವು ಸಲಹೆ ಸೂಚನೆಗಳು ಅತಿ ಅಗತ್ಯ.

ಪರೀಕ್ಷೆಗೆ ತಯಾರಿ

ಪ್ರತಿಯೊಂದು ಪರೀಕ್ಷೆಗೂ ಅದರ ಮುಂಚಿನ ದಿವಸವೇ ತಯಾರಿ ನಡೆಸಿರಿ. ಪರೀಕ್ಷೆಗೆ ಬೇಕಾಗಿರುವ ಎಲ್ಲ ಅಗತ್ಯ ಸಾಮಗ್ರಿಗಳು ಚೀಲದಲ್ಲಿದೆ ಎಂಬುದನ್ನು ದೃಢಪಡಿಸಿಕೊಳ್ಳಿರಿ. ಪೆನ್ನು, ಪೆನ್ಸಿಲ್, ಕಂಪಾಸ್ ಪೆಟ್ಟಿಗೆ, ಹಾಲ್ ಟಿಕೆಟ್, ಸ್ಕೇಲ್ ಈ ಮುಂತಾದವುಗಳನ್ನು ಚೀಲದಲ್ಲಿಡಲು ಮರೆಯಬಾರದು. ಪರೀಕ್ಷಾ ದಿನಗಳಲ್ಲಿ ದೂರದರ್ಶನವನ್ನು (ಖ್ಖ) ವೀಕ್ಷಿಸುವುದನ್ನು ಬಿಟ್ಟುಬಿಡಿ. ಪರೀಕ್ಷೆ ಮುಗಿದ ನಂತರ ರಜಾ ದಿನಗಳಲ್ಲಿ ಸ್ವಲ್ಪ ಮಟ್ಟಿನ ಮನರಂಜನೆಗೆ ವೀಕ್ಷಿಸಬಹುದೇ ಹೊರತು ಪರೀಕ್ಷೆಯ ದಿನಗಳಲ್ಲಿ ಚಲನ ಚಿತ್ರಗಳು ಹಾಗೂ ಧಾರಾವಾಹಿಗಳನ್ನು ವೀಕ್ಷಿಸುವುದರಿಂದ ಕಡ್ಡಾಯವಾಗಿ ದೂರವಿರಬೇಕು.

ಪರೀಕ್ಷೆ ಬರೆಯುವಾಗ ಗಮನಹರಿಸಬೇಕಾದ ಕೆಲವು ವಿಷಯಗಳು ಇಲ್ಲಿವೆ.

* ಪರೀಕ್ಷಾ ದಿನಗಳಲ್ಲಿ ದಿನಚರಿಯಲ್ಲಿ ಬದಲಾವಣೆ ಮಾಡಬೇಕಾದ ಅಗತ್ಯವಿಲ್ಲ, ಕೆಲವರು ಈ ದಿನಗಳಲ್ಲಿ ನಿಗದಿತ ಸಮಯಕ್ಕಿಂತಲೂ ಮುಂಚಿತವಾಗಿ ಎದ್ದು ಕಲಿಯಲು ಕೂರುವುದು ಹಾಗೂ ತಡರಾತ್ರಿಯವರೆಗೂ ಕಲಿತು ಆ ನಂತರ ಅವರಿಗೆ ಅರಿವಿಲ್ಲದೆಯೇ ನಿದ್ರೆಗೆ ಜಾರುವುದು ಕಂಡುಬರುತ್ತದೆ. ಇದು ಆರೋಗ್ಯದಾಯಕವಲ್ಲದ ಕಾರಣ ಸಾಮಾನ್ಯ ರೀತಿಯಲ್ಲೇ ಏಳಲು ಹಾಗೂ ನಿದ್ರಿಸಲು ಪ್ರಯತ್ನಿಸಿರಿ.

* ಪರೀಕ್ಷಾ ದಿನಗಳಲ್ಲಿ ಕೆಲವರು ಕಡಿಮೆ ಆಹಾರವನ್ನು ಸೇವಿಸುವುದಿದೆ ಇದು ಸರಿಯಲ್ಲ.

* ಪರೀಕ್ಷೆಯ ಸಮಯಕ್ಕಿಂತಲೂ ಅರ್ಧ ತಾಸು ಮುಂಚೆಯೇ ಶಾಲೆಗೆ ತಲುಪಿರಿ.

* ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮುಂಚೆ ಮನಸ್ಸನ್ನು ಏಕಾಗ್ರತೆಗೊಳಿಸಿರಿ.

* ಪರೀಕ್ಷೆಯ ಬೆಲ್ ಬಾರಿಸುವ ಅಥವಾ ಸಮಯವನ್ನು ಸೂಚಿಸುವ ಮುಂಚೆಯೇ ತಮ್ಮ ಸ್ಥಾನವನ್ನು ಕಂಡುಕೊಳ್ಳಿರಿ.

* ನಕಲು ಹೊಡೆಯಲು ಕಾಗದದ ತುಂಡು, ಮೊಬೈಲ್ ಅಥವಾ ಅಂಗಾಂಗಗಳಲ್ಲಿ ಬರೆದಿಡುವ ಹವ್ಯಾಸವನ್ನು ಬಿಟ್ಟುಬಿಡಿರಿ. ಏಕೆಂದರೆ ನಕಲು ಮಾಡುವ ಕ್ರಮ ವಿದ್ಯಾಭ್ಯಾಸ ನಿಯಮಕ್ಕೆ ವಿರುದ್ಧವಾಗಿದೆ. ನಕಲು ಹೊಡೆದು ಶಿಕ್ಷಕರಿಗೆ ಸಿಕ್ಕಿ ಬಿದ್ದರೆ ನಿಮ್ಮ ಚಾರಿತ್ರ್ಯಕ್ಕೆ ಹಾಗೂ ಗೌರವಕ್ಕೆ ಧಕ್ಕೆ ಮಾಡಿದಂತಾಗಬಹುದು. ಮಾತ್ರವಲ್ಲ ಈ ಅಭ್ಯಾಸವನ್ನು ಬೆಳೆಸಿಕೊಂಡರೆ ಎಲ್ಲರಿಂದಲೂ ಛೀಮಾರಿ ಬೀಳುವ ಹಾಗೂ ಮಾನಸಿಕ ಖಿನ್ನತೆಗೊಳಗಾಗುವ ಸಾಧ್ಯತೆಗಳಿವೆ.

* ಉತ್ತರ ಪತ್ರಿಕೆಯಲ್ಲಿ ನಿಮ್ಮ ಹೆಸರು, ವಿಳಾಸ, ತರಗತಿ, ನೋಂದಣಿ ಸಂಖ್ಯೆ ಇತ್ಯಾದಿಗಳನ್ನು ಸ್ಪಷ್ಟವಾಗಿ ನಮೂದಿಸಿ. ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಾಗಿದ್ದರೆ ನೋಂದಣಿ ಸಂಖ್ಯೆ ಬರೆದು ಹೆಸರು ಬರೆಯುವ ಅಗತ್ಯವಿಲ್ಲ.

* ಪ್ರಶ್ನೆ ಪತ್ರಿಕೆ ಲಭ್ಯವಾದರೆ ಅದನ್ನು ಸರಿಯಾಗಿ ಓದಿ ಕೂಲಂಕಷವಾಗಿ ಅರ್ಥ ಮಾಡಿದ ನಂತರ ಉತ್ತರ ಬರೆಯಲು ಆರಂಭಿಸಿರಿ, ಪ್ರಶ್ನೆ ಕಷ್ಟವಾಗಿದ್ದರೆ ಆತಂಕಪಡಬೇಡಿ.

* ಪ್ರಶ್ನೆ ಪತ್ರಿಕೆ ಓದಿ ಅರ್ಥವಾಗದಿದ್ದರೆ, ಏನಾದರೂ ಸಂಶಯಗಳಿದ್ದರೆ ಮೇಲ್ವಿಚಾರಕರೊಂದಿಗೆ ಕೇಳಿ ಪರಿಹರಿಸಿಕೊಳ್ಳಿರಿ.

* ಉತ್ತರ ಬರೆಯುವ ವೇಳೆ ಅದರ ಸಂಖ್ಯೆಯನ್ನು ಸರಿಯಾಗಿ ಬರೆಯಿರಿ.

* ಉತ್ತರ ತಿಳಿಯುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆದು ತಿಳಿಯದ ಪ್ರಶ್ನೆಗಳನ್ನು ಕೊನೆಗೆ ಬರೆಯಲು ಪ್ರಯತ್ನಿಸಿರಿ. ಮೊದಲ ಪ್ರಶ್ನೆಗೆ ಉತ್ತರ ತಿಳಿಯದಿದ್ದರೆ ಅದನ್ನೇ ಆಲೋಚಿಸಿ ಸಮಯವನ್ನು ವ್ಯರ್ಥಗೊಳಿಸಬೇಡಿರಿ.

* ಉತ್ತರಗಳಿಗೆ ಶೀರ್ಷಿಕೆಯ ಅಗತ್ಯವಿದ್ದರೆ ಅದನ್ನು ಬರೆಯಲು ಮರೆಯಬಾರದು.

* ಇತರರು ಬರೆಯುವುದನ್ನು ನೋಡುವುದು ಹಾಗೂ ಅವರಲ್ಲಿ ಕೇಳುವ ಪ್ರಯತ್ನ ಮಾಡಿ ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗಬೇಡಿರಿ.

* ಪರೀಕ್ಷೆಯ ಕೊಠಡಿಯಲ್ಲಿ ಪೆನ್ನು, ಪೆನ್ಸಿಲು ಅಥವಾ ಇತರ ಸಾಮಗ್ರಿಗಳನ್ನು ಕೇಳಿ ಪಡೆಯುವುದು ಉಚಿತವಲ್ಲ.

* ಪ್ರಶ್ನೆಗಳಿಗೆ ಅನುಸಾರವಾಗಿ ಮಾತ್ರ ಉತ್ತರ ಬರೆಯಿರಿ. ಅಂದರೆ ಉತ್ತರದ ಆಳವು ಅಂಕಗಳಿಗೆ ಹೊಂದಿಕೊಂಡಿರಲಿ (ಉದಾ, ಎರಡು ಅಂಕದ ಪ್ರಶ್ನೆಗೆ 10 ಅಂಕದ ಪ್ರಶ್ನೆಗಿರುವ ಉತ್ತರಬೇಡ)

* ಉತ್ತರ ಪತ್ರಿಕೆಯ ಪ್ರತಿಯೊಂದು ಹಾಳೆಯಲ್ಲೂ ಕ್ರಮ ಸಂಖ್ಯೆಯನ್ನು ನಮೂದಿಸಲು ಮರೆಯಬಾರದು.

* ಪರೀಕ್ಷೆಯ ಮುಕ್ತಾಯದ ಸಮಯಕ್ಕಿಂತ 5- 10 ನಿಮಿಷ ಮುಂಚಿತವಾಗಿ ಬರೆದು ಮುಗಿಸಲು ಹಾಗೂ ಬರೆದ ವಿಷಯಗಳನ್ನು ಪರಿಶೀಲಿಸಲು ಪ್ರಯತ್ನಿಸಿ.

* ಪ್ರಶ್ನೆಪತ್ರಿಕೆ ಕಠಿಣವಾಗಿದ್ದರೆ ಅನುತ್ತೀರ್ಣದ ಆತಂಕವನ್ನು ಮನಸ್ಸಿನಿಂದ ನಿರ್ಮೂಲನೆ ಮಾಡಿರಿ.

ಆಹಾರ ಪದ್ಧತಿ ಹೀಗಿರಲಿ

* ಎಣ್ಣೆ ಪದಾರ್ಥ, ಕರಿದ ತಿಂಡಿ, ಖಾರದ ತಿಂಡಿ ಮತ್ತು ಜಂಕ್ ಫುಡ್‌ಗಳನ್ನು ದೂರವಿಡಿ.

* ನಿದ್ದೆ ದೂರ ಮಾಡಲು ಹೆಚ್ಚು ಚಾ, ಕಾಫಿ ಸೇವನೆ ಬೇಡ.

* ರಾತ್ರಿ ನೆನೆ ಹಾಕಿ ಮೊಳಕೆ ಬರಿಸಿದ ಬೇಳೆ ಕಾಳು, ಹುರುಳಿಯನ್ನು ಪ್ರತಿದಿನ ಬೆಳಗ್ಗೆ ತಾಜಾ ಜಗಿದು ತಿನ್ನುವುದನ್ನು ರೂಢಿಸಿ, ಇದು ಆರೋಗ್ಯಕ್ಕೆ ಉತ್ತಮ.

* ದೈಹಿಕ ಕಾರ್ಯಕ್ಕಿಂತ ಮಾನಸಿಕ ಕೆಲಸಕ್ಕೆ ಅಹಾರವು ಅತಿ ಅಗತ್ಯವಾಗಿದೆ. ಆದುದರಿಂದ ದಾಕ್ಷಿಣ್ಯ ಮಾಡದೆ ತಿನ್ನಿ.

* ಆಹಾರದ ಪ್ರಮಾಣವು ಸಾಮಾನ್ಯವಾಗಿರಲಿ. ಅತಿಯೂ ಬೇಡ, ಕಡಿಮೆಯೂ ಬೇಡ.

ಪರೀಕ್ಷೆ ಸಿದ್ಧತೆಗೆ ಫಿಟ್ನೆಸ್ ಮಂತ್ರ

ಪರೀಕ್ಷೆಯ ಸಂದರ್ಭದಲ್ಲಿ ಮಾನಸಿಕವಾಗಿ, ದೈಹಿಕವಾಗಿ ಫಿಟ್ ಆಗಿರಿ. ಮನಸ್ಸು ಶಾಂತವಾಗಿರಿಸಲು ಮಧುರ ಸಂಗೀತವನ್ನು ಆಲಿಸಿ ಮತ್ತು ಪ್ರಾರ್ಥಿಸಿ. ವಾಕಿಂಗ್ ಮಾಡಿ ಮನಸ್ಸನ್ನು ಆಹ್ಲಾದಕರವಾಗಿಟ್ಟುಕೊಳ್ಳಿ.
ಸಾಧ್ಯವಾದರೆ ದೈಹಿಕ ಚಟುವಟಿಕೆಗಳನ್ನು ಮಾಡಿ. ಕಿರು ಅವಧಿಗೆ ಸಣ್ಣ ಪುಟ್ಟ ಆಟಗಳನ್ನು ಆಡಬಹುದು. ಒಂದಿಷ್ಟು ವ್ಯಾಯಾಮವನ್ನೂ ಮಾಡಬಹುದು. ಆದರೆ ಅತಿಯಾಗದಿರಲಿ.

ಯಾವುದು ಬೇಕು ಯಾವುದು ಬೇಡ

ಜಾಸ್ತಿ ಓದಲೇಬೇಕು ಎಂದು ಒತ್ತಡ ಹೇರಿಕೊಳ್ಳದಿರಿ. ಓದಿದ್ದನ್ನು ಮನನ ಮಾಡಿಕೊಳ್ಳಿ. ಮತ್ತೆ ಮತ್ತೆ ಮೆಲುಕು ಹಾಕಿ, ಪುನರಾವರ್ತನೆ ಮಾಡಿ. ಪರೀಕ್ಷೆ ಹೊತ್ತಲ್ಲಿ ಗೊಂದಲವನ್ನೆಬ್ಬಿಸಿ ಮನಸ್ಸಿನಲ್ಲಿ ಆತಂಕವನ್ನು ತರುವ ಯತ್ನವನ್ನು ಮಾಡದಿರಿ.

ಗಣಿತ ಕಷ್ಟ, ವಿಜ್ಞಾನ ಕಷ್ಟ, ಸಮಾಜ ಕಷ್ಟ ಎಂಬ ಮನಸ್ಸಿನ ಸಿಕ್ಕುಗಳನ್ನು ಕಿತ್ತೆಸೆಯಿರಿ. ಕಷ್ಟವೆಂಬ ಆಲೋಚನೆಯಿಂದ ಹೊರಗೆ ಬನ್ನಿ. ಪರೀಕ್ಷೆಯನ್ನು ಹಬ್ಬ, ಉತ್ಸವದಂತೆ ಸಂಭ್ರಮಿಸಿ. ಖುಶಿ ನೀಡುವ ಕೆಲಸವೆಂದು ಕಲ್ಪಿಸಿಕೊಳ್ಳಿ. ಪರೀಕ್ಷೆ ಮುಗಿದ ಬಳಿಕ ಸಂಪೂರ್ಣವಾಗಿ ನಿರಾಳರಾಗಿ. ಆ ದಿನದ ತಪ್ಪುಗಳ ಬಗ್ಗೆ ಕೊರಗುತ್ತ ಕೂರದಿರಿ. ಎಲ್ಲ ಪರೀಕ್ಷೆಗಳು ಮುಗಿದ ಬಳಿಕ ಎಲ್ಲ ಯೋಚನೆ ಗಳನ್ನು ದೂರವಿಟ್ಟು ಸಂಪೂರ್ಣವಾಗಿ ರಜೆಯನ್ನು ಚೆನ್ನಾಗಿ ಬಳಸಿಕೊಳ್ಳಿ.

ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ 10 ಸಲಹೆಗಳು

1. ವೇಳಾಪಟ್ಟಿ ಮಾಡಿ: 10 ದಿನಗಳ ಅಭ್ಯಾಸಕ್ಕೆ ವೇಳಾಪಟ್ಟಿ ಸಿದ್ದಮಾಡಿ. ಪ್ರತೀ ದಿನ ಪ್ರತೀ ವಿಷಯಕ್ಕೆ 2 ಗಂಟೆಯಂತೆ ಆರು ವಿಷಯಗಳಿಗೆ 12 ಗಂಟೆ ಬಳಸಿಕೊಳ್ಳಬಹುದು. ಪ್ರತಿ 2 ಗಂಟೆಗೊಮ್ಮೆ 15 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಬಹುದು. ಇದು ಮುಂದಿನ ಸಬ್ಜೆಕ್ಟಿನ ಓದಿಗೆ ನೆರವಾಗುತ್ತದೆ. ಪ್ರತಿದಿನ 8 ಗಂಟೆ ನಿದ್ದೆಗೆ ಮೀಸಲಿಡಿ.

2. ಸಕಾರಾತ್ಮಕವಾಗಿ ಚಿಂತಿಸಿ: ಸಕಾರಾತ್ಮಕವಾದ ಚಿಂತನೆ ಒಂದು ಅದ್ಭುತವಾದ ಆಯುಧವಾಗಿದೆ. ಇದರಿಂದ ನಮ್ಮ ನಿರ್ವಹಣೆ ಖಂಡಿತ ವೃದ್ಧಿಸುತ್ತದೆ. ನನಗೆ ಅದು ಕಷ್ಟವಾಗುತ್ತದೆ, ಅದು ನನಗೆ ಬರುವುದಿಲ್ಲ, ವ್ಯಾಕರಣ ಗಣಿತ ನನಗೆ ಇಷ್ಟವಿಲ್ಲ. ಮುಂತಾದ ಋಣಾತ್ಮಕ ಯೋಚನೆ ಬಿಟ್ಟುಬಿಡಿ. ಎಲ್ಲವೂ ನನಗೆ ಸುಲಭ ಎಂಬ ಮನೋಸ್ಥಿತಿಯೊಂದಿಗೆ ಮುನ್ನುಗ್ಗಿದರೆ ಗೆಲುವು ಖಚಿತ.

3. ಭಾವನಾತ್ಮಕವಾಗಿ ಓದಿ: ಅಧ್ಯಯನದಲ್ಲಿ ಎರಡು ವಿಧ. ಯಾಂತ್ರಿಕವಾಗಿ ಬಾಯಿಪಾಠ ಹಾಗೂ ಭಾವನಾತ್ಮಕವಾಗಿ ಅಭ್ಯಾಸ ಮಾಡುವುದು. ಎಲ್ಲ ವಿಷಯಗಳನ್ನೂ ಬಾಯಿಪಾಠ ಮಾಡುವುದು ಕಷ್ಟ ಸಾಧ್ಯ. ನಾವು ಅಧ್ಯಯನ ಮಾಡುವ ವಿಷಯವನ್ನು ನಮ್ಮ ಮನಸ್ಸಿಗೆ ಹಚ್ಚಿಕೊಂಡು ಓದಿದಾಗ ಸಹಜವಾಗಿಯೇ ದೀರ್ಘ ಕಾಲ ಮೆದುಳಿನಲ್ಲಿ ಉಳಿಯುತ್ತದೆ.

4. ಎಲ್ಲವನ್ನೂ ಓದಿಕೊಳ್ಳಿ: ಪ್ರಶ್ನೆ ಪತ್ರಿಕೆಯ ಬ್ಲೂ ಪ್ರಿಂಟ್‌ಗಳನ್ನು ಅತಿ ಹೆಚ್ಚು ಅವಲಂಬಿಸದಿರಿ. ನಂಬಿಕೆಗೆ ಅರ್ಹವಾದ ಗೈಡ್‌ಗಳನ್ನು ಮಾತ್ರ ನೆಚ್ಚಿಕೊಳ್ಳಿ. ಕೆಲವೊಮ್ಮೆ ಗೈಡ್‌ಗಳಲ್ಲೇ ತಪ್ಪಿರಬಹುದು, ಎಚ್ಚರ! ನಿಮ್ಮ ಶಿಕ್ಷಕರಿಗೆ ತೋರಿಸಿ. ಪಠ್ಯ ಪುಸ್ತಕ ಅಭ್ಯಾಸಕ್ಕೆ ಒತ್ತು ನೀಡಿ. ಎಲ್ಲ ಓದಿಗೂ ಅದ್ಯತೆ ನೀಡಿ.

5. ವಿರಾಮವಿರಲಿ: ಪರೀಕ್ಷೆ ವೇಳೆಯಲ್ಲಿ ಅತಿ ಹೆಚ್ಚು ಓದುವೆ ಎನ್ನುವುದು ಕೇವಲ ಭ್ರಮೆ ಮಾತ್ರ. ಪರೀಕ್ಷೆ ಹೊತ್ತಲ್ಲಿ ಕಡಿಮೆ ಓದಬೇಕು. ಹೆಚ್ಚು ವಿರಾಮ ಮಾಡಬೇಕು. ಓದು , ವಿರಾಮದ ಮಧ್ಯೆ ಸಮತೋಲನವಿರಬೇಕು. ವಿರಾಮಕ್ಕೆ ಸಂಗೀತ ಕೇಳುವುದು ಸೇರಿದಂತೆ ಒಂದಿಷ್ಟು ವಿಶ್ರಾಂತಿಗೆ ನಿಮಗೆ ಇಷ್ಟವಿರುವ ಸಂಗತಿಯನ್ನು ಆಯ್ಕೆ ಮಾಡಬಹುದು.

6. ಒತ್ತಡ ಸರಿಯಲ್ಲ: ಕೊನೆಯ ಹಂತದ ಒತ್ತಡಕ್ಕೆ ಒಳಗಾಗಬೇಡಿರಿ. ಶೇಕಡ 98 ರಷ್ಟು ಪೋಷಕರು, ಶಿಕ್ಷಕರು ಒತ್ತಡಕ್ಕೆ ಒಳಗಾಗುತ್ತಾರೆ. ನಮ್ಮ ಶಾಲಾ ಕಾಲೇಜಿಗೆ ಶೇ. 100 ಫಲಿತಾಂಶ ಬರಬೇಕೆಂದು ಶಿಕ್ಷಕರು ಮತ್ತು ನಮ್ಮ ಮಕ್ಕಳು ಹೆಚ್ಚು ಅಂಕಗಳಿಸಬೇಕೆಂದು ಪೋಷಕರು ಒತ್ತಡ ಹಾಕಬಾರದು. ಉತ್ತಮ ಫಲಿತಾಂಶಕ್ಕೆ ಒತ್ತಡವು ಮಾರಕವಾದೀತು.

7. ಕೈಬರಹದತ್ತ ಗಮನ ಕೊಡಿ: ಸುಂದರವಾದ ಬರಹವು ನಿಮ್ಮ ವ್ಯಕ್ತಿತ್ವದ ಕೈಗನ್ನಡಿ. ಅದ್ಭುತ ಹಸ್ತಾಕ್ಷರ ಇಲ್ಲದಿದ್ದರೂ ಚಿಂತಿಲ್ಲ, ಸುಲಲಿತವಾಗಿ ಓದ ಬಲ್ಲಂತಹ ಕೈಬರಹ ಇದ್ದರೆ ಚೆನ್ನ. ಇದು ಮೌಲ್ಯಮಾಪಕರನ್ನು ನಿಮ್ಮ ಉತ್ತರ ಪತ್ರಿಕೆಯನ್ನು ಓದಲು ಪ್ರೇರೇಪಿಸುತ್ತದೆ ಮತ್ತು ಉತ್ಸಾಹ ಮೂಡಿಸುತ್ತದೆ. ನಿಮ್ಮ ಉತ್ತರವನ್ನು ಆಸಕ್ತಿಯಿಂದ ಓದಲು ಸಾಧ್ಯವಾಗುತ್ತದೆ. ಪ್ರತೀ ದಿನವೂ ಕನಿಷ್ಠ ಒಂದೆರಡು ಪುಟ ನೀಟಾಗಿ ಬರೆಯುವುದನ್ನು ರೂಢಿಸಿಕೊಳ್ಳಿ.

8. ಏಕಾಗ್ರತೆ ಇರಲಿ: ಪರಿಸರದಲ್ಲಿ ಕಿರಿ ಕಿರಿ ಶಬ್ದಗಳಿದ್ದರೆ ಓದಲು ಕಷ್ಟವಾಗಬಹುದು. ಮೌನ, ಶಾಂತ ಹಾಗೂ ಏಕಾಗ್ರತೆಯಿದ್ದರೆ ಅಧ್ಯಯನ ಸುಲಭವಾಗುತ್ತದೆ. ಏಕಾಗ್ರತೆ ಮತ್ತು ಆಸಕ್ತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮುಂಜಾನೆ ನಿಮಗೆ ಸುಲಭವಾದ ವಿಷಯಗಳಿಂದ ಆರಂಭಿಸಿ, ಕೊನೆಗೆ ಕಷ್ಟದ ವಿಷಯಗಳನ್ನು ಅಭ್ಯಾಸ ಮಾಡುವುದು ನಿಮ್ಮ ಸ್ಮರಣ ಶಕ್ತಿ ವೃದ್ಧಿಸಲು ಪೂರಕವಾಗಬಹುದು.

9. ಪರೀಕ್ಷೆಯ ಆತಂಕ ಬೇಡ: ನಿಜವಾಗಿಯೂ ಪರೀಕ್ಷೆಯು ಮಹತ್ವದ್ದಾಗಿದೆ. ಆದರೆ, ಅನಗತ್ಯ ಆತಂಕಪಡುವುದು ಸರಿಯಲ್ಲ. ಯಾವುದೇ ಪರೀಕ್ಷೆಯು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯಗಳಿಗೆ ಅನುಗುಣವಾಗಿರುತ್ತದೆ. ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಲೆಂದೇ ಪರೀಕ್ಷೆಯನ್ನು ಮಾಡಿಸುತ್ತಿಲ್ಲ. ಕಲಿತದ್ದನ್ನು ಮನನ ಮಾಡಿ, ನೆಮ್ಮದಿಯಾಗಿ ಪ್ರತಿದಿನವೂ ನಿದ್ರೆ ಮಾಡಿ, ಆತಂಕ ನಿಮ್ಮ ಬಳಿಗೆ ಸುಳಿಯದಿರಲಿ.

10. ಪ್ರಶ್ನೆಗಳನ್ನು ಸ್ಪಷ್ಟವಾಗಿ ಓದಿಕೊಳ್ಳಿ: ಪರೀಕ್ಷೆಗೆ ನೀಡಿದ ಪ್ರಶ್ನೆಗಳನ್ನು ಓದಿ ಅರ್ಥಮಾಡಲು 15 ನಿಮಿಷ ನಿಗದಿಪಡಿಸಿರಿ. ಓದುವಾಗಲೆ ಮಾನಸಿಕ ಸಿದ್ಧತೆ ಮಾಡುತ್ತಲಿರಿ. ಸುಲಭವಾದ, ಚೆನ್ನಾಗಿ ತಿಳಿದಿರುವ ಪ್ರಶ್ನೆಗಳನ್ನು ಮೊದಲು ಪರಿಹರಿಸಿ. ಕಷ್ಟ ಎನಿಸಿದ್ದನ್ನು ಕೊನೆಗೆ ಬಗೆಹರಿಸಿ. ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳಿಂದ ಆರಂಭಿಸಬೇಡಿರಿ. ನಿಮಗೆ ಸರಿ ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲ ಆದ್ಯತೆ ನೀಡಿರಿ.

Writer - ಅಸ ದೇರಳಕಟ್ಟೆ

contributor

Editor - ಅಸ ದೇರಳಕಟ್ಟೆ

contributor

Similar News