ಆಧಾರ್ ಕಡ್ಡಾಯ ಗಡುವು ವಿಸ್ತರಣೆ ಸ್ವಾಗತಾರ್ಹ

Update: 2018-03-15 03:59 GMT

ಸರಕಾರದ ಕೆಲವು ಯೋಜನೆಗಳು, ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಸಿಮ್ ಸೇರಿದಂತೆ ನಾನಾ ಯೋಜನೆಗಳು ಹಾಗೂ ಸವಲತ್ತುಗಳಿಗೆ ಆಧಾರ್ ಲಿಂಕ್ ಮಾಡಲು ವಿಧಿಸಲಾಗಿದ್ದ ಮಾರ್ಚ್ 31ರ ಗಡುವನ್ನು ಸುಪ್ರೀಂ ಕೋರ್ಟ್ ಅನಿರ್ದಿಷ್ಟಾವಧಿಗೆ ವಿಸ್ತರಿಸಿದೆ. ಆಧಾರ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸಂವಿಧಾನ ಪೀಠವು ವಿಚಾರಣೆ ನಡೆಸಿ ತೀರ್ಪು ನೀಡುವವರೆಗೆ ಈ ಗಡುವನ್ನು ವಿಸ್ತರಿಸಲಾಗಿದೆ. ಕಳೆದ ಡಿಸೆಂಬರ್ 31ರಂದು ನಡೆದ ವಿಚಾರಣೆಯಲ್ಲಿ ಆಧಾರ್ ಸಂಖ್ಯೆ ಜೋಡಣೆಗೆ ಮಾರ್ಚ್ 31ರ ಗಡುವನ್ನು ನೀಡಲಾಗಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಈ ಗಡುವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದೆ. ತತ್ಕಾಲ್ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವವರು ಆಧಾರ್ ಸಂಖ್ಯೆ ನೀಡುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಸರಕಾರದ ಸಬ್ಸಿಡಿ ಪಡೆಯಲು ಆಧಾರ್ ಜೋಡಣೆ ಮಾಡಲೇ ಬೇಕು ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ದೇಶದ ಜನಸಾಮಾನ್ಯರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ. ಆಧಾರ್ ಕಡ್ಡಾಯದ ಮಾರ್ಚ್ 31ರ ಗಡುವು ಸಮೀಪಿಸಿರುವಂತೆ ಮೊಬೈಲ್ ಗ್ರಾಹಕರಿಗೆ ಮತ್ತು ಬ್ಯಾಂಕ್ ಖಾತೆದಾರರಿಗೆ ನಿತ್ಯವೂ ಕಿರುಕುಳ ನೀಡಲಾಗುತ್ತಿತ್ತು. ಅದರಿಂದ ಈಗ ಕೊಂಚ ವಿನಾಯಿತಿ ದೊರೆತಂತಾಗಿದೆ. ದೇಶಕ್ಕೆ ಅಚ್ಛೇ ದಿನಗಳನ್ನು ತರುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕೇಂದ್ರದ ನರೇಂದ್ರ ಮೋದಿ ಸರಕಾರ ಎಂತಹ ದಿನಗಳನ್ನು ತಂದಿದೆ ಎಂಬುದರ ಕಹಿ ಅನುಭವ ಜನರಿಗೆ ಆಗುತ್ತಿದೆ. ಎಲ್ಲಾ ಜೀವನಾವಶ್ಯಕ ಪದಾರ್ಥಗಳ ಬೆಲೆಗಳು ಗಗನಕ್ಕೇರಿವೆ. ನೋಟು ಅಮಾನ್ಯೀಕರಣದ ಪರಿಣಾಮವಾಗಿ ಆರ್ಥಿಕ ಸ್ಥಿತಿ ಇನ್ನೂ ಹದಗೆಟ್ಟಿದೆ. ತೈಲ ಬೆಲೆ ಲೀಟರ್‌ಗೆ 80 ರೂ.ಆಗಿದೆ. ಇದನ್ನೆಲ್ಲ ಸಹಿಸಿಕೊಂಡು ಹೇಗೋ ಜೀವನ ಸಾಗಿಸಬೇಕೆಂದರೆ ನಿತ್ಯವೂ ಆಧಾರ್ ಕಡ್ಡಾಯದ ಕಿರಿಕಿರಿಯಿಂದ ಜನ ರೋಸಿ ಹೋಗಿದ್ದರು. ಈ ಆಧಾರ್ ಯೋಜನೆಯನ್ನು ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ ಜಾರಿಗೆ ತಂದಿತ್ತು. ಆದರೆ, ಇದನ್ನು ವಿರೋಧಿಸಿದ್ದ ಬಿಜೆಪಿ ತಾನು ಅಧಿಕಾರಕ್ಕೆ ಬಂದರೆ ಆಧಾರ್ ರದ್ದುಗೊಳಿಸುವುದಾಗಿ ಹೇಳಿತ್ತು. ಆದರೆ, ಕೊಟ್ಟ ಮಾತಿಗೆ ವಿರುದ್ಧವಾಗಿ ಎಲ್ಲದಕ್ಕೂ ಆಧಾರ್‌ನ್ನು ಕಡ್ಡಾಯಗೊಳಿಸಲಾಯಿತು.

ಈ ಆಧಾರ್ ಯೋಜನೆ ವಿರುದ್ಧ ಅನೇಕ ಸಾರ್ವಜನಿಕ ಹಿತಾಸಕ್ತಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿವೆ. ಕಳೆದ ಎರಡು ವರ್ಷಗಳಿಂದ ಈ ಅರ್ಜಿಗಳು ಅಲ್ಲಿ ಕೊಳೆಯುತ್ತಾ ಬಿದ್ದಿವೆ. ಜನರ ಜೀವನ್ಮರಣದ ಈ ಸಮಸ್ಯೆಯನ್ನು ಇತ್ಯರ್ಥ ಪಡಿಸುವಲ್ಲಿ ಸುಪ್ರೀಂ ಕೋರ್ಟ್ ಉದಾಸೀನ ತಾಳಿದೆ. ನ್ಯಾಯಾಲಯದ ಮುಂದೆ ಈ ಪ್ರಕರಣವಿದ್ದಾಗಲೂ ಸರಕಾರ ಆಧಾರ್ ಕಡ್ಡಾಯಕ್ಕಾಗಿ ಜನರಿಗೆ ಕಿರುಕುಳ ನೀಡುತ್ತಲೇ ಇತ್ತು. ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಸಾಮಾಜಿಕ ಭದ್ರತಾ ಸೌಕರ್ಯಗಳಿಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ. ರೇಷನ್ ಅಂಗಡಿಗಳಲ್ಲಿ ಆಹಾರ ಸಾಮಗ್ರಿಗಳನ್ನು ಬಯೋಮೆಟ್ರಿಕ್ ದಾಖಲಾತಿಯ ಮೂಲಕವೇ ಪಡೆಯಬೇಕಾಗಿದೆ. ಇದರಿಂದಾಗಿ ರಾಜಸ್ಥಾನ, ಜಾರ್ಖಂಡ್ ಮತ್ತು ತೆಲಂಗಾಣ ಮುಂತಾದ ರಾಜ್ಯಗಳ ಜನರು ರೇಷನ್ ಪಡೆಯುವಲ್ಲಿ ವಂಚಿತರಾಗಿದ್ದಾರೆ. ರೇಷನ್ ಅಂಗಡಿಗಳಲ್ಲಿ ಬೆರಳಚ್ಚು ಗುರುತಿಸುವ ಯಂತ್ರಗಳು ಕೆಲಸ ಮಾಡದಿರುವುದು ಇದಕ್ಕೆ ಕಾರಣವಾಗಿದೆ. ಇದೆಲ್ಲದರ ಪರಿಣಾಮವಾಗಿ ಜಾರ್ಖಂಡ್‌ನ 11 ವರ್ಷದ ಸಂತೋಷಿ ಕುಮಾರಿ ಎಂಬ ಬಾಲಕಿ ಹಸಿವಿನಿಂದ ದಾರುಣ ಸಾವನ್ನಪ್ಪಿದ ಘಟನೆ ನಡೆಯಿತು.

ಉತ್ತರಪ್ರದೇಶ ಮತ್ತು ಇತರ ಕಡೆಗಳಲ್ಲೂ ಇಂತಹ ಸಾವಿನ ವರದಿಗಳು ಬಂದಿವೆ. ಹೀಗೆ ಸಾವಿಗೀಡಾದವರ ಕುಟುಂಬಗಳಿಗೆ ಸರಕಾರ ಪರಿಹಾರ ಕೊಡಬೇಕು. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಈಗ ಆಧಾರ್ ಕಡ್ಡಾಯವನ್ನು ಹುಟ್ಟು, ಸಾವು, ನೋಂದಣಿ ಸೇರಿದಂತೆ ಎಲ್ಲಾ ವಲಯಗಳಿಗೆ ವಿಸ್ತರಿಸಲಾಗುತ್ತಿದೆ. ಇದು ಎಲ್ಲಿಗೆ ಹೋಗಿ ತಲುಪಿದೆ ಎಂದರೆ ಕೆಲವು ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲು ಕೂಡಾ ಆಧಾರ್ ಕಾರ್ಡ್ ಕೇಳುತ್ತಾರೆ. ಆಧಾರ್ ಇಲ್ಲದಿದ್ದರೆ ರೋಗಿಯನ್ನು ದಾಖಲು ಮಾಡಿಕೊಳ್ಳುವುದಿಲ್ಲ. ಆಧಾರ್ ಇಲ್ಲದಿದ್ದ ವ್ಯಕ್ತಿಗಳು ನಾಗರಿಕರಾಗಿ ಉಳಿಯುವುದಿಲ್ಲ. ಅವರ ಅಸ್ತಿತ್ವವೇ ಇರುವುದಿಲ್ಲ. ಹೀಗೆ ಈ ಸರಕಾರ ಆಧಾರ್‌ನ ಹೆಸರಿನಲ್ಲಿ ಜನರಿಗೆ ನಾನಾ ಕಿರುಕುಳ ನೀಡುತ್ತಾ ಬಂದಿದೆ.

  ಇವೆಲ್ಲಕ್ಕಿಂತ ಹೆಚ್ಚಾಗಿ ಆಧಾರ್ ಎಂಬುದು ಸರ್ವಾಧಿಕಾರಿ ಸರಕಾರದ ಕೈಯಲ್ಲಿ ದಮನದ ಮತ್ತೊಂದು ಅಸ್ತ್ರವಾಗಿ ಬಳಕೆಯಾಗುತ್ತಿದೆ. ನಾಗರಿಕರ ಖಾಸಗಿತನ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿ ಅವರ ಮೇಲೆ ನಿಗಾ ಇಡಲು ಅವಕಾಶ ಮಾಡಿಕೊಡುತ್ತದೆ. ಸರಕಾರ ಮತ್ತು ವಿಶಿಷ್ಟ ಗುರುತು ಪ್ರಾಧಿಕಾರದ ಧೋರಣೆ ‘ಟ್ರಿಬ್ಯೂನ್’ ಪತ್ರಿಕೆಯ ವರದಿಗಾರನ ಮೇಲೆ ಆಧಾರ್ ಜಾಲತಾಣದ ಭದ್ರತೆಯನ್ನು ಭೇದಿಸಿದರೆಂದು ಮೊಕದ್ದಮೆ ದಾಖಲು ಮಾಡಿರುವುದರಿಂದ ವ್ಯಕ್ತವಾಗುತ್ತದೆ. ಆಧಾರ್ ದೋಷಪೂರ್ಣವಾದ, ಅಪರಿಪೂರ್ಣವಾದ ಒಂದು ವ್ಯವಸ್ಥೆ ಎಂದು ಸರಕಾರ ಒಪ್ಪಿಕೊಳ್ಳಬೇಕಾಗಿದೆ. ಜಗತ್ತಿನಲ್ಲಿಯೇ ಜನರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿಕೊಳ್ಳುವ ಅತ್ಯಂತ ಕೆಟ್ಟ ವ್ಯವಸ್ಥೆ ಆಧಾರ್ ಎಂಬುದು ಖಚಿತವಾಗಿದೆ. ದೇಶದ ನಾಗರಿಕರಿಗೆ ಗುರುತನ್ನು ನೀಡುವ ನೆಪದಲ್ಲಿ ನಮ್ಮೆಲ್ಲರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಅತ್ಯಂತ ಸರ್ವಾಧಿಕಾರಿ ವ್ಯವಸ್ಥೆ ಈ ಆಧಾರ್ ಆಗಿದೆ. ಯಾವುದೇ ಪ್ರಜಾಪ್ರಭುತ್ವ ದೇಶ ಅಪರಾಧಿಗಳು ತಾವು ಮಾಡಿದ ಅಪರಾಧವನ್ನು ಒಪ್ಪಿಕೊಳ್ಳಲು ಇಂತಹ ವ್ಯವಸ್ಥೆಯನ್ನು ಹೊಂದಿರುತ್ತದೆಯೇ ಹೊರತು ತಮ್ಮ ಪ್ರಜೆಗಳನ್ನೇ ಅಪಾಯಕ್ಕೆ ತಳ್ಳುವ ಕ್ರೌರ್ಯವನ್ನು ಮಾಡುವುದಿಲ್ಲ. ಆದರೆ, ನಮ್ಮ ದೇಶದಲ್ಲಿ ಮಾತ್ರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ತಂತ್ರಜ್ಞಾನವನ್ನೇ ಆಕರವಾಗಿ ಬಳಸಿಕೊಳ್ಳುತ್ತಿರುವುದು ಅಪಾಯಕಾರಿಯಾಗಿದೆ.

ಆಧಾರ್ ಎಂಬುದು ದೇಶದ ಪ್ರಜೆಗಳನ್ನು ಅಪರಾಧಿ ಎಂದು ಪರಿಗಣಿಸಿ ಅವರನ್ನು ನಿಗಾ ವ್ಯವಸ್ಥೆಗೆ ಒಳಪಡಿಸುವ ಕುತಂತ್ರವಾಗಿದೆ. ವ್ಯವಸ್ಥೆಯ ಒಳಗೆ ದಕ್ಷತೆ ಹಾಗೂ ಆಧುನಿಕತೆಯನ್ನು ತರುವ ಹೆಸರಿನಲ್ಲಿ ಜನರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಅಪಾಯಕಾರಿ ವ್ಯವಸ್ಥೆಯಾಗಿದೆ. ಪ್ರಜೆಗಳಲ್ಲಿ ದಿನನಿತ್ಯದ ಚಲನವಲನಗಳನ್ನು ಗಮನಿಸುವ ಮತ್ತು ನಮ್ಮ ನಡೆ, ಆಯ್ಕೆ, ನಿರ್ಣಯ, ಮೊಬೈಲ್ ಕರೆ, ನಮ್ಮ ದುಡಿಮೆಯ ಹಣ, ನಮ್ಮ ಜೀವನದ ಪ್ರತೀ ಹೆಜ್ಜೆಯ ಗುರುತನ್ನು ಪತ್ತೆ ಹಚ್ಚುವ, ಪರೀಕ್ಷಿಸುವ ವ್ಯವಸ್ಥೆಯಾಗಿದೆ. ಆಧಾರ್ ದುರುಪಯೋಗದಿಂದ ಎದುರಾಗುವ ಹಾನಿ ಹಾಗೂ ಮಾಹಿತಿಗಳ ಸ್ವಾಮ್ಯತೆಯ ರಕ್ಷಣೆಯ ಅರಿವಿಲ್ಲದೆ ಈ ಅಸಂವಿಧಾನಾತ್ಮಕ ವ್ಯವಸ್ಥೆಯ ಜಾಲಕ್ಕೆ ಜನ ತುತ್ತಾಗಬೇಕಾಗಿದೆ. ಜನರ ಬ್ಯಾಂಕ್ ಖಾತೆಯಿಂದ ಹಣವನ್ನು ದೋಚಲು ಆಧಾರ್ ಸಂಖ್ಯೆಯನ್ನು ಬಳಸಿಕೊಳ್ಳುತ್ತಿರುವುದು ಈಗಾಗಲೇ ಬಯಲಾಗಿದೆ. ಹಾಗೆಯೇ ಬಹಳಷ್ಟು ವಿದೇಶಿಯರು ತಮ್ಮ ದಾಖಲೆಗಳನ್ನು ನೀಡಿ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ. ಅಧಿಕಾರಿಗಳ ಪ್ರಕಾರ ಅವರು ನೀಡಿರುವ ದಾಖಲೆಗಳು ನೈಜವಾಗಿವೆಯಂತೆ. ಅದನ್ನು ಮರುಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬಡ ಜನರಿಗಾಗಿ ರೂಪಿಸಲಾದ ಅನ್ನಭಾಗ್ಯ ಯೋಜನೆ, ಪಿಂಚಣಿ, ಆರೋಗ್ಯ ಸೇವೆ, ಉದ್ಯೋಗಖಾತ್ರಿ ಹಾಗೂ ಪ್ರತೀಮಗುವಿಗೆ ಕಡ್ಡಾಯ ಶಿಕ್ಷಣ ನೀಡುವ ಹಲವಾರು ಯೋಜನೆಗಳನ್ನು ಸರಕಾರ ತನ್ನ ಕಲ್ಯಾಣ ಕಾರ್ಯಕ್ರಮದ ಭಾಗವಾಗಿ ಜಾರಿಗೊಳಿಸಿದೆ. ಆದರೆ, ಇದಕ್ಕೆ ಆಧಾರ್ ಜೋಡಣೆ ಕಡ್ಡಾಯಗೊಳಿಸಿರುವುದರಿಂದ ತಳಸಮುದಾಯಗಳಲ್ಲಿ ಬದುಕುತ್ತಿರುವ ಜನರು ಈ ಸೌಲಭ್ಯಗಳನ್ನು ಪಡೆಯಲು ವಂಚಿತರಾಗುತ್ತಿದ್ದಾರೆ. ಬಯೋಮೆಟ್ರಿಕ್ ಮೆಶಿನ್ ಬೆರಳಿನ ಗುರುತುಗಳನ್ನು ಗುರುತಿಸದೇ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಕೊಳಚೆ ಪ್ರದೇಶಗಳಲ್ಲಿ ಮೂಲಸೌಕರ್ಯಗಳಾದ ವಿದ್ಯುತ್ ಹಾಗೂ ಇಂಟರ್ನೆಟ್ ಇಲ್ಲದೆ ಇರುವುದರಿಂದ ಈ ಸೌಲಭ್ಯಗಳಿಂದ ಜನರು ವಂಚಿತರಾಗುತ್ತಿದ್ದಾರೆ. ಕೆಲವು ಕಡೆ ಪಡಿತರ ಚೀಟಿಯಲ್ಲಿ ಅವರ ಹೆಸರನ್ನು ತೆಗೆದುಹಾಕುವುದರಿಂದ ಅವರ ಅಸ್ತಿತ್ವವನ್ನೇ ನಿರಾಕರಣೆಗೆ ಒಳಪಡಿಸಲಾಗುತ್ತಿದೆ. ಈ ಆಧಾರ್‌ನಿಂದಾಗಿ ಮಹಿಳೆಯರು, ಹಿರಿಯ ನಾಗರಿಕರು, ಮಕ್ಕಳು, ಅಸಂಘಟಿತ ಕಾರ್ಮಿಕರು, ವಿಕಲಚೇತನರು ಯಾವುದೇ ತೊಂದರೆಗಳಿಲ್ಲದೆ ಅವರಿಗಿರುವ ಯೋಜನೆಗಳನ್ನು ಪಿಂಚಣಿ, ವಿದ್ಯಾರ್ಥಿ ವೇತನ, ಶಾಲಾ ದಾಖಲಾತಿ, ವೈದ್ಯಕೀಯ ಸೌಲಭ್ಯ, ಪಡಿತರ ಸೌಲಭ್ಯ, ಜೀವ ವಿಮೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆಧಾರ್ ಗಡುವು ವಿಸ್ತರಣೆ ಮಾಡಿರುವ ಸುಪ್ರೀಂ ಕೋರ್ಟ್ ಕ್ರಮ ಸ್ವಾಗತಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News