ವಿಶ್ವದ ಅತೀ ಅಗ್ಗದ ನಗರಗಳಲ್ಲಿ ಬೆಂಗಳೂರು, ದಿಲ್ಲಿ

Update: 2018-03-15 14:53 GMT

ಹೊಸದಿಲ್ಲಿ, ಮಾ.15: ವಿಶ್ವದ ಅತೀ ಅಗ್ಗದ ನಗರಗಳ ಪಟ್ಟಿಯಲ್ಲಿ ಬೆಂಗಳೂರು, ದಿಲ್ಲಿ, ಚೆನ್ನೈ ನಗರಗಳು ಸ್ಥಾನ ಪಡೆದಿವೆ . ಸಿಂಗಾಪುರ ಅತ್ಯಂತ ದುಬಾರಿ ನಗರವಾಗಿದೆ ಎಂದು ಇಐಯು ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ. ಇಕನಾಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ (ಇಐಯು) ವಿಶ್ವದಾದ್ಯಂತ ಜೀವನನಿರ್ವಹಣೆ ವೆಚ್ಚದ ಆಧಾರದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ದಕ್ಷಿಣ ಏಶ್ಯಾದ ನಗರಗಳು, ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನಗಳು ಹಣಕ್ಕೆ ಹೆಚ್ಚಿನ ವೌಲ್ಯವನ್ನು ನೀಡುತ್ತವೆ. ಸಮೀಕ್ಷೆ ನಡೆಸಿದ ನಗರಗಳ ಪೈಕಿ ಪಟ್ಟಿ ಮಾಡಲಾದ 10 ಅತ್ಯಂತ ಅಗ್ಗವಾದ ನಗರಗಳಲ್ಲಿ ಬೆಂಗಳೂರು, ಚೆನ್ನೈ, ಕರಾಚಿ ಹಾಗೂ ಹೊಸದಿಲ್ಲಿಗಳು ಸ್ಥಾನ ಪಡೆದಿವೆ.

 ಸಿರಿಯಾದ ರಾಜಧಾನಿ ದಮಾಸ್ಕಸ್ ವಿಶ್ವದ ಅತ್ಯಂತ ಅಗ್ಗದ ನಗರವಾಗಿದ್ದು, ವೆನೆಝುವಲಾದ ರಾಜಧಾನಿ ಕರಾಕಸ್ ಮತ್ತು ಕಝಕ್‌ಸ್ತಾನದ ವಾಣಿಜ್ಯ ನಗರ ಅಲ್ಮಾಟಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದೆ. ಲಾಗೊಸ್ ನಾಲ್ಕನೆ, ಬೆಂಗಳೂರು ಐದನೆ ಸ್ಥಾನದಲ್ಲಿದ್ದರೆ ಕರಾಚಿ , ಅಲ್ಜಿಯರ್ಸ್ , ಚೆನ್ನೈ, ಬುಕಾರೆಸ್ಟ್ ಮತ್ತು ಹೊಸದಿಲ್ಲಿ ಆ ಬಳಿಕದ ಸ್ಥಾನದಲ್ಲಿವೆ. ಸತತ ಐದನೇ ವರ್ಷವೂ ಸಿಂಗಾಪುರ ವಿಶ್ವದ ಅತ್ಯಂತ ದುಬಾರಿ ನಗರ ಎನಿಸಿಕೊಂಡಿದೆ. ಪ್ಯಾರಿಸ್ , ಝೂರಿಚ್, ಹಾಂಕಾಂಗ್, ಓಸ್ಲೊ, ಜಿನೆವಾ, ಸಿಯೋಲ್, ಕೋಪನ್‌ಹೇಗನ್, ಟೆಲ್ ಅವೀವ್, ಸಿಡ್ನಿ ಆ ಬಳಿಕದ ಸ್ಥಾನದಲ್ಲಿದೆ.

ಭಾರತದಲ್ಲಿ ಆರ್ಥಿಕ ವಿಸ್ತರಣೆ ತ್ವರಿತ ಗತಿಯಲ್ಲಿ ನಡೆಯುತ್ತಿದ್ದರೂ ಪ್ರತೀ ವ್ಯಕ್ತಿಯನ್ನು ಪರಿಗಣಿಸಿದರೆ ಸಂಬಳ ಹಾಗೂ ವೆಚ್ಚ ಮಾಡುವ ಸಾಮರ್ಥ್ಯದ ಹೆಚ್ಚಳ ಕನಿಷ್ಟ ಮಟ್ಟದಲ್ಲಿಯೇ ಇದೆ. ಆದಾಯದ ಅಸಮಾನತೆಯ ಕಾರಣ ಕಡಿಮೆ ಸಂಬಳ ಪಡೆಯುವ ವ್ಯಕ್ತಿಯ ಕುಟುಂಬದ ವೆಚ್ಚ ಆದಾಯದ ಪ್ರಮಾಣಕ್ಕೆ ಸೀಮಿತಗೊಂಡಿರುತ್ತದೆ. ಇದರಿಂದ ಹಲವು ಶ್ರೇಣಿಯ ದರ ವ್ಯವಸ್ಥೆಯನ್ನು ಕಾಣಬಹುದು . ಅಲ್ಲದೆ ಗ್ರಾಮೀಣ ಉತ್ಪಾದಕರು ಅಪಾರ ಪ್ರಮಾಣದಲ್ಲಿ ಕಡಿಮೆ ಬೆಲೆಯ ಸರಕುಗಳನ್ನು ನಗರಕ್ಕೆ ಸರಬರಾಜು ಮಾಡುತ್ತಿರುವುದು ದರ ಕಡಿಮೆಯಾಗಲು ಕಾರಣವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಸ್ಥಿರತೆಯು ಒಂದು ಪ್ರದೇಶದ ಜೀವನನಿರ್ವಹಣೆ ವೆಚ್ಚವನ್ನು ಕಡಿಮೆಗೊಳಿಸುವ ಪ್ರಮುಖ ಅಂಶವಾಗಿದೆ.

ವಿಶ್ವದ ಕೆಲವು ಅಗ್ಗದ ನಗರಗಳಲ್ಲಿ ಅಪಾಯದ ಪ್ರಮಾಣ ಗಮನಾರ್ಹ ಮಟ್ಟದಲ್ಲಿರುತ್ತವೆ ಎಂಬುದು ಇದರರ್ಥವಾಗಿದೆ ಎಂದೂ ವರದಿ ತಿಳಿಸಿದೆ.ಆಹಾರ, ಪಾನೀಯ, ಬಟ್ಟೆಬರೆ, ಮನೆಬಳಕೆ ವಸ್ತುಗಳು, ವೈಯಕ್ತಿಕ ಬಳಕೆಯ ವಸ್ತುಗಳು, ಮನೆಬಾಡಿಗೆ, ಸಾರಿಗೆ ವೆಚ್ಚ, ಖಾಸಗಿ ಶಾಲೆ, ಮನೋರಂಜನಾ ವೆಚ್ಚ ಸೇರಿದಂತೆ 160 ವಸ್ತುಗಳು ಹಾಗೂ ಸೇವೆಗಳ ದರವನ್ನು ಪರಿಗಣಿಸಿ ವರದಿ ತಯಾರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News