ಮಹಿಳೆಯರಿಗೆ ಇನ್ನೂ ಸ್ವಾತಂತ್ರ್ಯವೇ ಇಲ್ಲದಿರುವುದು ವಿಷಾದನೀಯ: ಸಚಿವೆ ಡಾ.ಗೀತಾ ಮಹದೇವಪ್ರಸಾದ್

Update: 2018-03-15 16:54 GMT

ಮೈಸೂರು,ಮಾ.15: ದೇಶಾದ್ಯಂತ ಪುರುಷ ಹಾಗೂ ಮಹಿಳೆ ನಡುವಿನ ಅಂತರ ಹೆಚ್ಚಿನ ಪ್ರಮಾಣದಲ್ಲಿದ್ದು, ಮಹಿಳೆಯರಿಗೆ ನ್ಯಾಯವಾಗಿ ಸಿಗಬೇಕಾದ ಸ್ಥಾನ ಮಾನಗಳು ಸಿಗದೇ ಇರುವುದು ವಿಷಾದದ ಸಂಗತಿ ಎಂದು ಸಕ್ಕರೆ ಹಾಗೂ ಸಣ್ಣ ಕೈಗಾರಿಕೆ ಸಚಿವೆ ಡಾ. ಗೀತಾ ಮಹದೇವಪ್ರಸಾದ್ ತಿಳಿಸಿದರು.

ರಾಣಿ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಮೈಸೂರು ವಿವಿ ವತಿಯಿಂದ ಆಯೋಜಿಸಿದ್ದ ಮಹಿಳಾ ಸಬಲೀಕರಣ ಮತ್ತು ಗ್ರಾಮೀಣ ಅಭಿವೃದ್ಧಿ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಪುರುಷ ಮತ್ತು ಮಹಿಳೆಯರ ನಡುವಿನ ಅಂತರ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿಲ್ಲ. ಅದು ಗ್ರಾಮಾಂತರ ಪ್ರದೇಶಗಳಲ್ಲೂ ಕಂಡು ಬರುತ್ತಿದೆ. ಅದರಲ್ಲೂ ನನ್ನ ವ್ಯಾಪ್ತಿಯಲ್ಲಿ 186 ಹಳ್ಳಿಗಳು, 26 ಹಾಡಿಗಳು ಒಳಪಟ್ಟಿದ್ದು, ಅಲ್ಲಿನ ಮಹಿಳೆಯರ ಸ್ಥಿತಿಗತಿ ಬಹಳ ಶೋಚನೀಯವಾಗಿದೆ. ಈ ಗ್ರಾಮಗಳಲ್ಲಿ ಅವರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಮಹಿಳೆಯರು ಅಡುಗೆ ಮನೆ ಕೆಲಸ ಹಾಗೂ ಮಕ್ಕಳನ್ನು ಹೆರುವುದೇ ಅವರ ಪ್ರಮುಖ ಕೆಲಸ ಎನ್ನುವಂತಾಗಿದೆ. ಅವರಿಗೆ ಸ್ವಾತಂತ್ರ್ಯವೇ ಇಲ್ಲದಿರುವುದು ಅತ್ಯಂತ ವಿಷಾದನೀಯ ಎಂದರು.

ಇಂದಿನ ಪುರುಷರು ತರುವ ಪದಾರ್ಥಗಳನ್ನೇ ಒಪ್ಪಿಕೊಳ್ಳಬೇಕು. ತಾವು ತಮಗೆ ಬೇಕಾದ ಪದಾರ್ಥಗಳನ್ನು ಖರೀದಿಸಲು ಸ್ವಾತಂತ್ರ್ಯವಿಲ್ಲ. ಇದನ್ನು ನಿರ್ಮೂಲನೆ ಮಾಡದ ಹೊರತು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಗುಡಿ ಕೈಗಾರಿಕೆಗಳನ್ನು ಆರಂಭಿಸಲು ಮುಂದೆ ಬರುವ ಮಹಿಳೆಯರಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಎರಡು ಕೋಟಿ ರೂ. ಸಾಲ ಸೌಲಭ್ಯ ನೀಡಲಾಗುವುದು. ಈ ಹಣಕ್ಕೆ 50 ಲಕ್ಷದ ವರೆಗೆ ಶೇ.2 ರಷ್ಟು ಹಾಗೂ 1.5 ಲಕ್ಷ ರೂ.ಗಳ ವರೆಗೆ ಶೇ.4 ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ. ಇದರಲ್ಲಿ ಶೇ.20 ರಷ್ಟು ರಿಯಾಯಿತಿ ಇರುತ್ತದೆ. ಇಂತಹ ಗುಡಿ ಕೈಗಾರಿಕೆಗಳಲ್ಲಿ ಮಹಿಳೆಯರು ಉತ್ಪಾದಿಸುವ ಪದಾರ್ಥಗಳನ್ನು ಅರ್ಬನ್ ಹಾಥ್ ಮೂಲಕ ಖರೀದಿಸಿ ಮಾರಾಟ ಮಾಡುವುದರ ಮೂಲಕ ಮಹಿಳೆಯರನ್ನು ಉತ್ತೇಜಿಸಲಾಗುತ್ತದೆ. ಅದಕ್ಕಾಗಿ ಸರ್ಕಾರವು ಜಿಲ್ಲಾ ಕೈಗಾರಿಕಾ ಕೇಂದ್ರಗಳ ಮೂಲಕ ನೀಡುವ ಸಾಲ ಸೌಲಭ್ಯಗಳನ್ನು ಪಡೆಯುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೋ.ಬಸವರಾಜು, ಮೈಸೂರು ವಿವಿ ಕುಲಸಚಿವೆ ಭಾರತಿ, ಪರೀಕ್ಷಾಂಗ ಕುಲಸಚಿವ ಸೋಮಶೇಖರ್, ಡಾ.ಅಬ್ದುಲ್ ನಜೀರ್ ಸಾಬ್ ಸಂಸ್ಥೆಯ ನಿರ್ದೇಶಕ ಡಿ.ಪ್ರಾಣೇಶ್ ರಾವ್ ಉಪಸ್ಥಿತರಿದ್ದರು. 

ಕಬ್ಬು ಬೆಳೆಗಾರರ ಸಮಸ್ಯೆಯನ್ನು ಇನ್ನೆರಡು ದಿನಗಳಲ್ಲಿ ಬಗೆ ಹರಿಸಲಾಗುವುದು ಎಂದು ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ತಿಳಿಸಿದರು.

ಮೈಸೂರಿನಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಕುರಿತಂತೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಸಿಎಂ ಜೊತೆ ಚರ್ಚೆ ನಡೆಸಿ ಇತ್ಯರ್ಥ ಮಾಡಲಾಗುವುದು. ಸಿಎಂ ಈಗಾಲೇ ಕಬ್ಬು ಬೆಳಗಾರರ ಜೊತೆ ಚರ್ಚೆ ನಡೆಸಿದ್ದಾರೆ. ಉತ್ತರ ಕರ್ನಾಟಕ ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥವಾಗಿದೆ. ಹಳೆ ಮೈಸೂರು ಹಾಗೂ ದಕ್ಷಿಣ ಕರ್ನಾಟಕದ ರೈತರ ಬೇಡಿಕೆ ಈಡೇರಿಸಲಾಗುವುದು. ಈ ಭಾಗದ ರೈತರಿಗೆ ಬೆಂಬಲ ಬೆಲೆ ಹಾಗೂ ಬಾಕಿ ಹಣವನ್ನು ಶೀಘ್ರದಲ್ಲೇ ಕೊಡಿಸಲಾಗುವುದು ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News