ಚಿಕ್ಕಮಗಳೂರು; ತಾಪಂ ಅಧ್ಯಕ್ಷೆ, ಮುಖ್ಯಾಧಿಕಾರಿಯಿಂದ ಹಣ ದುರುಪಯೋಗ; ಆರೋಪ

Update: 2018-03-15 17:10 GMT

ಚಿಕ್ಕಮಗಳೂರು, ಮಾ.14: ಕೇಂದ್ರ ಸರಕಾರದ ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಬಿಡುಗಡೆಗೊಂಡ ಅನುದಾನದಿಂದ ಪಟ್ಟಣ ಅಭಿವೃದ್ದಿಗೊಳಿಸದೇ ಪ.ಪಂ. ಅಧ್ಯಕ್ಷೆ ರಮೀಜಾಭಿ ಮತ್ತು ಮುಖ್ಯಾಧಿಕಾರಿ ಕಲಾವತಿ ಅವರು ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂಬ ಆರೋಪ ತಾಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಈ ಸಂಬಂಧ ಪಪಂ ಅಧ್ಯಕ್ಷೆ ಗುತ್ತಿಗೆದಾರನೊಂದಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆನ್ನಲಾಗುತ್ತಿರುವ ವಿಡಿಯೋ ಮತ್ತು ಆಡಿಯೊ ಇದೀಗ ತಾಲೂಕಿನಲ್ಲಿ ವೈರಲ್ ಆಗಿದೆ. 

ಸ್ವಚ್‍ಭಾರತ್‍ಅಭಿಯಾನದ ಅಂಗವಾಗಿ ಸಾರ್ವಜನಿಕರಿಗೆ ಮತ್ತು ಶಾಲಾಕಾಲೇಜು ವಿಧ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಕೇಂದ್ರ ಸರಕಾರದ ಯೋಜನೆಯ ಹಣವನ್ನು ಪಟ್ಟಣ ಪಂಚಾಯತ್ ಸರಿಯಾಗಿ ವಿನಿಯೋಗ ಮಾಡದೆ ಟೆಂಡರ್ ದಾರರೊಂದಿಗೆ ಒಪ್ಪಂದ ಮಾಡಿಕೊಂಡು, ಬೀದಿನಾಟಕ, ಪರಿಸರ ಸ್ವಚ್ಚತೆಗೆ ಒತ್ತು ನೀಡದೆ ಅವ್ಯವಹಾರದಲ್ಲಿ ಭಾಗಿಯಾಗಿರುವ ಪಪಂ ಅಧ್ಯಕ್ಷೆ ಹಾಗೂ ಮುಖ್ಯಾಧಿಕಾರಿ ಗುತ್ತಿಗೆದಾರನ ಬಿಲ್ ಪಾವತಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

ಮೂಡಿಗೆರೆ ಪಟ್ಟಣಕ್ಕೆ ಯೋಜನೆಯಡಿ 1.80 ಲಕ್ಷ ರೂ. ಬಿಡುಗಡೆ ಮಾಡಲಾಗಿದ್ದು, ಇದರ ಅರಿವು ಮೂಡಿಸುವ ಜವಾಬ್ದಾರಿಯನ್ನು ಮೈಸೂರಿನ ಪ್ರಯೋಜನ ಸಂಸ್ಥೆಯು (ಗ್ರಾಮೀಣಅಭಿವೃದ್ದಿ ಮತ್ತುತರಬೇತಿ ಸಂಸ್ಥೆ) 99,885 ರೂ. ಗೆ ಟಂಡರ್ ಪಡೆಯಲಾಗಿತ್ತು. ಅದರಂತೆ ಜಾಗೃತಿ ಕಾರ್ಯಕ್ರಮ ಉದ್ಘಾಟನೆಗೊಂಡಿದ್ದು, ನಂತರ ಸ್ವಚ್ಚತೆ ಬಗ್ಗೆ ಯಾವುದೇ ಜಾಗೃತಿಕಾರ್ಯ ನಡೆದಿರುವುದು ಕಂಡುಬಂದಿಲ್ಲ ಎಂದು ಹೇಳಲಾಗುತ್ತಿದೆ. 

ಅಧಿಕಾರಿಗಳು ಮತ್ತು ಅಧ್ಯಕ್ಷೆ ಪರ್ಸೆಂಟೇಜ್ ಪಡೆದು ಟೆಂಡರ್ ಮೊತ್ತಕ್ಕಿಂತ ಹೆಚ್ಚು ಹಣ ಬಿಡುಗಡೆ ಮಾಡಿದ್ದಾರೆನ್ನಲಾಗಿದ್ದು, ಪ್ರಥಮ ಹಂತದಲ್ಲಿ  58,700 ರೂ. ಚೆಕ್ ಪಡೆದಿದ್ದು, ಮತ್ತೆ ಹೆಚ್ಚುವರಿಯಾಗಿ 69,950 ರೂ. ನ ಚೆಕ್ ನೀಡಲಾಗಿದೆ. ಒಟ್ಟಾರೆ ಹೆಚ್ಚುವರಿಯಾಗಿ 28,765 ರೂ. ಅನ್ನು ಟೆಂಡರುದಾರರಿಗೆ ನೀಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಪಪಂ ಅಧ್ಯಕ್ಷೆಯ ಪತಿಯಿಂದ ಮೈಸೂರಿನಲ್ಲಿ ದೂರು     
 
ಸ್ವಚ್ಚಭಾರತ್ ಯೊಜನೆಯ ಹಣ ದುರುಪಯೊಗ ಮತ್ತು ನನ್ನಿಂದ ಲಂಚ ಪಡೆದಿದ್ದನ್ನು ಬಹಿರಂಗಪಡಿಸಿದ್ದಕ್ಕೆ ಆಕ್ರೋಶಗೊಂಡಿರುವ ಪಪಂ ಅಧ್ಯಕ್ಷೆ ರಮೀಜಾಬಿ ಅವರ ಪತಿ ಇಮ್ತಿಯಾಝ್ ಎಂಬುವವರು ತನಗೆ ದೂರವಾಣಿ ಮೂಲಕ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ತಾನು ಮೈಸೂರು ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಮೈಸೂರಿನ ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ಮಹದೇವಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ತಾನು ಸ್ವಚ್ಛ ಭಾರತ್ ಯೋಜನೆಯ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ನಗರಗಳ ಟೆಂಡರ್ ಗುತ್ತಿಗೆಯನ್ನು ಪಡೆದಿದ್ದು, ಇದರ ಬಿಲ್ ಪಾವತಿಗೆ ಮೂಡಿಗೆರೆ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಮೀಜಾಬಿ ಮತ್ತು ಮುಖ್ಯಾಧಿಕಾರಿ ಕಲಾವತಿ ಅವರು ನನ್ನನ್ನು ಇನ್ನಿಲ್ಲದಂತೆ ಸತಾಯಿಸಿ ಲಂಚ ಪಡೆದಿದ್ದಾರೆ. ಈ ಬಗ್ಗೆ ಗುರುವಾರ ಪಪಂ ಅಧ್ಯಕ್ಷೆಯ ಪತಿ ಇಮ್ತಿಯಾಝ್ ಅವರು ನನಗೆ ದೂರವಾಣಿ ಕರೆ ಮಾಡಿ ಪತ್ರಿಕೆಗಳಿಗೆ ಲಂಚದ ಬಗ್ಗೆ ಸುದ್ದಿ ಕೊಟ್ಟಿದ್ದೀಯಾ ಎಂದು ವಿಚಾರಿಸಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ತಾನು ಮೈಸೂರು ಪೊಲೀಸ್ ಠಾಣೆಗೆ ದೂರು ನೀಡಿರುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಲಂಚ ಪಡೆದ ಅಧ್ಯಕ್ಷೆಯನ್ನು ಕಿತ್ತೊಗೆಯಿರಿ
ಲಂಚ ಪಡೆದಿರುವ ಪಪಂ ಅಧ್ಯಕ್ಷೆ ಇನ್ನು ಅಧಿಕಾರದಲ್ಲಿ ಮುಂದುವರಿದಿರುವುದನ್ನು ಕಾಂಗ್ರೆಸ್ ಪಕ್ಷ ಸಹಿಸಿಕೊಳ್ಳಬಾರದಾಗಿತ್ತು. ಆ ಪಕ್ಷಕ್ಕೆ ಘನತೆ ಎಂಬುದಿದ್ದರೆ ಇಂತಹ ಅಧ್ಯಕ್ಷೆಯನ್ನು ಪಕ್ಷದಿಂದ ಉಚ್ಛಾಟಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಬೇಕಾಗಿತ್ತು. ಹಾಗೆ ಮಾಡದೆ ಕಣ್ಣುಮುಚ್ಚಿ ಕುಳಿತಿರುವ ಕಾಂಗ್ರೆಸ್ ಪಕ್ಷದ ಧೋರಣೆ ನಾಚಿಕೆಗೇಡಿನದ್ದು ಎಂದು ಬಿಜೆಪಿ ವಕ್ತಾರ ನಯನ ತಳವಾರ ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಸ್ವಚ್ಛ ಭಾರತ್ ಯೋಜನೆಯ ಗುತ್ತಿಗೆದಾರರಿಗೆ ದೂರವಾಣಿ ಮೂಲಕ ಬೆದರಿಕೆ ಹಾಕುವ ಮಟ್ಟಕ್ಕೆ ಅಧ್ಯಕ್ಷೆಯ ಪತಿ ಮುಂದುವರಿದಿದ್ದಾರೆಂದರೆ ಇವರಿಗೆ ಕಾಂಗ್ರೆಸ್‍ನ ಶ್ರೀರಕ್ಷೆ ಇದ್ದಂತೆ ಕಾಣುತ್ತಿದೆ. ಇಂತವರನ್ನು ಆ ಪಕ್ಷ ಪೋಷಿಸಿ ಬೆಳೆಸಿದರೆ ಮುಂದೆ ಪಟ್ಟಣ ಪಂಚಾಯಿತಿಯ ಕಟ್ಟಡವನ್ನೇ ಮಾರಾಟ ಮಾಡಿ ಬಿಡುವ ಆತಂಕವಿದೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ. ಗುತ್ತಿಗೆದಾರ ಮಹದೇವಸ್ವಾಮಿ ಅವರಿಂದ ಲಂಚ ಪಡೆದು, ಉತ್ತಮ ಜನಪ್ರತಿನಿಧಿಗಳಂತೆ ನಾಟಕವಾಡುವ ಧೋರಣೆ ಹೊಂದಿರುವ ಅಧ್ಯಕ್ಷೆ ಮಾನ ಮರ್ಯಾದೆಯಿದ್ದರೆ ರಾಜೀನಾಮೆ ನೀಡಬೇಕಿತ್ತು. ಅವರು ಪುನಃ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರು ಈ ಬಗ್ಗೆ ಗಮನಹರಿಸಬೇಕು. ಅಧ್ಯಕ್ಷೆಯನ್ನು ವಜಾಗೊಳಿಸಬೇಕು ಪಟ್ಟಣ ಪಂಚಾಯಿತಿಯನ್ನು ಸೂಪರ್ ಸೀಡ್ ಮಾಡಬೇಕು. ಮುಖ್ಯಾಧಿಕಾರಿ ಮತ್ತು ಸಹಾಯಕ ಆರೋಗ್ಯ ನಿರೀಕ್ಷಕ ಈ ಇಬ್ಬರನ್ನು ಅಮಾನತುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಹಾಯಕ ಆರೋಗ್ಯ ನಿರೀಕ್ಷಕ ಪ್ರಕಾಶ್ ಅವರನ್ನು ಕಳೆದ ಏಳು ತಿಂಗಳ ಹಿಂದೆ ತರೀಕೆರೆ ಪುರಸಭೆಗೆ ವರ್ಗಾವಣೆಗೊಳಿಸಿದ್ದರೂ ಇದುವರೆಗೂ ಮೂಡಿಗೆರೆ ಪಟ್ಟಣ ಪಂಚಾಯತ್ ನಿಂದ ಬಿಡುಗಡೆ ಹೊಂದದೆ ಮುಂದುವರಿದಿದ್ದಾರೆ. ಈತ ಪಟ್ಟಣ ಪಂಚಾಯತ್ ನ ಅಧಿಕಾರಿಗಳ ಲಂಚದ ಮಧ್ಯವರ್ತಿಯಾಗಿರುವುದೇ ವರ್ಗಾವಣೆಗೊಳ್ಳದಿರುವುದಕ್ಕೆ ಕಾರಣವಾಗಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಖುದ್ದು ಪಪಂ.ಗೆ ಭೇಟಿ ನೀಡಬೇಕು. ಇಲ್ಲಿರುವ ಭ್ರಷ್ಟರನ್ನು ಹೊರಹಾಕಬೇಕು ಎಂದು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News