ಚಿಕ್ಕಮಗಳೂರು: ಮಲೆನಾಡು ಭಾಗಗಳಲ್ಲಿ ತಂಪೆರೆದ ಅಕಾಲಿಕ ಮಳೆ

Update: 2018-03-15 17:15 GMT

ಚಿಕ್ಕಮಗಳೂರು, ಮಾ.15: ಜಿಲ್ಲೆಯ ಮಲೆನಾಡು ಭಾಗಗಳ ಕೆಲವೆಡೆ ಬುಧವಾರ ರಾತ್ರಿ  ಹಾಗೂ ಗುರುವಾರ ಮಧ್ಯಾಹ್ನ ಧಾರಾಕಾರ ಮಳೆಯಾಗಿದ್ದು, ಬಿಸಿಲ ಧಗೆಯಿಂದ ನಲುಗಿದ್ದ ಜನರಿಗೆ ಹಾಗೂ ಇಳೆಗೆ ತಂಪೆರಚಿದೆ.

ಜಿಲ್ಲೆಯ ಶೃಂಗೇರಿ, ಕೊಪ್ಪ, ಜಯಪುರ, ಕೆರೆಕಟ್ಟೆ, ಬಾಳೆಹೊನ್ನೂರು, ಎನ್.ಆರ್.ಪುರ ಮೊದಲಾದ ಮಲೆನಾಡು ಪ್ರದೇಶಗಳಲ್ಲಿ ಬುಧವಾರ ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗುತ್ತಲೇ ಈ ಭಾಗದಲ್ಲಿ ದಿಢೀರ್ ಮಳೆಯಾಗಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗಿನಿಂದಲೇ ಮೋಡ ಆವರಿತ್ತಾದರೂ ವರುಣನ ಸುಳಿವಿರಲಿಲ್ಲ. ಆದರೆ ಮಲೆನಾಡಿನಲ್ಲಿ ಮಾತ್ರ ವರುಣನ ಆರ್ಭಟ ಜೋರಾಗಿತ್ತು. ರಾತ್ರಿ ಕವಿಯುತ್ತಿದ್ದಂತೆ ಗುಡುಗು, ಮಿಂಚಿನ ಸಮೇತ ಮಳೆ ಧಾರಾಕಾರವಾಗಿ ಸುರಿಯಿತು.

ಗುರುವಾರ ಮಧ್ಯಾಹ್ನ ಚಿಕ್ಕಮಗಳೂರು ನಗರ ಸೇರಿದಂತೆ ಸುಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಅರ್ಧ ಗಂಟೆ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯ ಆಲ್ದೂರು, ಮೂಡಿಗೆರೆ, ಎನ್.ಆರ್.ಪುರ, ಕಳಸ, ಬಾಳೆಹೊನ್ನೂರು, ಜಯಪುರ, ಕೊಪ್ಪ, ಶೃಂಗೇರಿ ಭಾಗಗಳಲ್ಲೂ ಗುರುವಾರ ಮಳೆಯ ಸಿಂಚನವಾಗಿದೆ. ಜಿಲ್ಲೆಯ ಬರಪೀಡಿತ ತಾಲೂಕುಗಳಾದ ತರೀಕೆರೆ, ಕಡೂರು ಭಾಗಗಗಳಲ್ಲಿ ಗುರುವಾರ ಮಳೆಯ ಹನಿ ನೆಲಕ್ಕುದುರಿವೆಯಾದರೂ ಭಾರೀ ಮಳೆಯಾಗಲಿಲ್ಲ ಎಂದು ವರದಿಯಾಗಿದೆ. ಮಳೆಯ ಆರ್ಭಟದಿಂದಾಗಿ ಚಿಕ್ಕಮಗಳೂರು ನಗರದಲ್ಲಿ ಸಂಜೆಯಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆರಂಭವಾಗಿದ್ದು, ಮಲೆನಾಡು ಭಾಗಗಲ್ಲಿ ಬುಧವಾರ ರಾತ್ರಿಯಿಡೀ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. 

ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಬಿಸಿಲ ಝಳಕ್ಕೆ ರೋಸಿ ಹೋಗಿದ್ದ ಜನತೆ ಬುಧವಾರ, ಗುರುವಾರ ಸುರಿದ ಮಳೆಯಿಂದಾಗಿ ಕೊಂಚ ನಿರಾಳರಾಗಿದ್ದಾರೆ. ಮಲೆನಾಡು ಭಾಗಗಳಲ್ಲಿ ಕಾಫಿ, ಅಡಿಕೆ ತೋಟಕ್ಕೆ ನೀರಿಲ್ಲದೇ ಬಸವಳಿದಿದ್ದ ರೈತರು, ಬೆಳೆಗಾರರು ಅಕಾಲಿಕ ಮಳೆ ತಂಪೆರೆದಿರುವುದರಿಂದ ನಿಟ್ಟುಸಿರು ಬಿಡುವಂತಾಗಿದ್ದು, ಸದ್ಯ ಸುರಿದ ಮಳೆಯಿಂದಾಗಿ ಜಿಲ್ಲೆಯ ಕಾಫಿ ತೋಟಗಳ ಮಾಲಕರ ಮುಖದಲ್ಲಿ ಮಂದಹಾಸಕ್ಕೆ ಕಾರಣಾವಾಗಿದೆ. ಕಾಫಿ ಗಿಡಗಳಲ್ಲಿ ಪ್ರಸಕ್ತ ಹೂವು ಅರಳುವ ಸಮಯವಾಗಿದ್ದು, ಬಿಸಿಲ ತಾಪಕ್ಕೆ ಅರಳಿದ ಹೂವುಗಳು ಕಮರುತ್ತಿದ್ದವು. ಇದನ್ನು ತಡೆಯಲು ಬೆಳೆಗಾರರು ಮೋಟರ್ ಪಂಪ್, ಡೀಸೆಲ್ ಪಂಪ್, ವಿದ್ಯುತ್ ಮೋಟರ್ ಗಳಿಗೆ ಲಕ್ಷಾಂತರ ರೂ. ವ್ಯಯಿಸಿ ಹಳ್ಳಕೊಳ್ಳ, ಬಾವಿಗಳಿಂದ ನೀರಿತ್ತಿ ಸ್ಪ್ರಿಂಕ್ಲರ್ ಮೂಲಕ ನೀರೊದಗಿಸಲು ಹರ ಸಾಹಸಪಡುತ್ತಿದ್ದರು. 

ಸದ್ಯ ಸುರಿದ ಮಳೆ ಕಾಫಿ ತೋಟಗಳ ಮಾಲಕರ ಜೇಬಿಗೆ ಕತ್ತರಿ ಬೀಳುವುದನ್ನು ಕೊಂಚವಾದರೂ ತಡೆಯಲು ಸಹಾಯಕವಾಗಿದೆ. ಅಲ್ಲದೇ ಕಾಫಿ ಗಿಡಗಳಲ್ಲಿ ಹೂವು ಚೆನ್ನಾಗಿ ಅರಳು ಈ ಮಳೆ ಸಹಕಾರಿಯಾದಂತಾಗಿದೆ. ಜಿಲ್ಲೆಯ ಕೆಲವೆಡೆ ಬುಧವಾರ, ಗುರುವಾರ ಗುಡುಗು, ಮಿಂಚು ಸಹಿತ ಸುರಿದ ಮಳೆಯಿಂದಾಗಿ ಯಾವುದೇ ಪ್ರಾಣಾಪಾಯ, ಆಸ್ತಿಪಾಸ್ತಿ ನಷ್ಟವಾದ ಬಗ್ಗೆ ವರದಿಯಾಗಿಲ್ಲ. 

ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ 4 ಮಿ.ಮೀ. ಮಳೆಯಾಗಿದ್ದು, ತಾಲೂಕಿನ ಹರಿಹರಪುರದಲ್ಲಿ 17.2 ಮಿ.ಮೀ., ಜಯಪುರ 28.2 ಮಿ.ಮೀ., ಕಮ್ಮರಡಿ 08 ಮಿ.ಮೀ., ಬಸರೀಕಟ್ಟೆ 20.2 ಮಿ.ಮೀ. ಮಳೆಯಾಗಿದೆ. ನರಸಿಂಹರಾಜಪುರ ಪಟ್ಟಣದಲ್ಲಿ 11 ಮಿ.ಮೀ. ಮಳೆಯಾಗಿದ್ದು, ತಾಲೂಕಿನ ಬಾಳೆಹೊನ್ನೂರು 0.2 ಮಿ.ಮೀ., ಮೇಗಲಮಕ್ಕಿ 20 ಮಿ.ಮೀ. ಮಳೆಯಾಗಿದೆ. ಶೃಂಗೇರಿಯಲ್ಲಿ 12 ಮಿ.ಮೀ. ಮಳೆಯಾಗಿದ್ದು, ತಾಲೂಕಿನ ಕೆರೆಕಟ್ಟೆಯಲ್ಲಿ 13 ಮಿ.ಮೀ., ಕಿಗ್ಗ 9.6 ಮಿ.ಮೀ. ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಬುಧವಾರ 136.08 ಮಿ.ಮೀ. ಮಳೆಯಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News