ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಸಂಬಂಧಿಸಿ ವಿವಾದಿತ ಟ್ವೀಟ್ ಮಾಡಿದ ವೀರಪ್ಪ ಮೊಯ್ಲಿ

Update: 2018-03-16 13:42 GMT

ಬೆಂಗಳೂರು, ಮಾ.16: ‘ಲೋಕೋಪಯೋಗಿ ಸಚಿವ ಹಾಗೂ ರಸ್ತೆ ಗುತ್ತಿಗೆದಾರರ ನಡುವಿನ ಹೊಂದಾಣಿಕೆಯು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ನಿರ್ಧರಿಸುವಂತಾಗಬಾರದು. ರಾಜಕೀಯದಲ್ಲಿನ ಹಣದ ಪ್ರಭಾವವನ್ನು ಎಐಸಿಸಿ ಬಗೆಹರಿಸಬೇಕಿದೆ’ ಎಂದು ಕೇಂದ್ರದ ಮಾಜಿ ಸಚಿವ ಡಾ.ಎಂ.ವೀರಪ್ಪಮೊಯ್ಲಿ ಹೆಸರಿನಲ್ಲಿ ಮಾಡಿರುವ ಟ್ವಿಟ್ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅಧ್ಯಕ್ಷತೆಯಲ್ಲಿ ಶನಿವಾರ ಹೊಸದಿಲ್ಲಿಯಲ್ಲಿ ಆರಂಭಗೊಳ್ಳಲಿರುವ ಎಐಸಿಸಿ ಮಹಾ ಅಧಿವೇಶನದ ಮುನ್ನ ದಿನ ನಡೆದಿರುವ ಈ ಬೆಳವಣಿಗೆಯಿಂದ ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಮುಜುಗರ ಅನುಭವಿಸುವಂತಾಗಿದೆ.

ಮೊಯ್ಲಿ ಹೆಸರಿನಲ್ಲಿ ಬಂದಿರುವ ಈ ಟ್ವಿಟ್ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ಗೆ ರಾಜ್ಯ ಸರಕಾರದ ವಿರುದ್ಧ ಹೋರಾಡಲು ಮತ್ತೊಂದು ಪ್ರಬಲ ಅಸ್ತ್ರ ನೀಡಿದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪರನ್ನು ಗುರಿಯನ್ನಾಗಿಸಿಕೊಂಡು ವೀರಪ್ಪಮೊಯ್ಲಿ ಈ ಟ್ವಿಟ್ ಮಾಡಿದ್ದಾರೆ ಎನ್ನಲಾಗಿದೆ.

ಪುತ್ರ ವ್ಯಾಮೋಹಕ್ಕಾಗಿ ವೀರಪ್ಪಮೊಯ್ಲಿ ಎಡವಟ್ಟು?: ಮುಂಬರುವ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮಾ.14ರಂದು ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ವೀರಪ್ಪಮೊಯ್ಲಿ ಹಾಗೂ ಎಚ್.ಸಿ.ಮಹದೇವಪ್ಪ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ತಮ್ಮ ಪುತ್ರಹರ್ಷಮೊಯ್ಲಿಯನ್ನು ಕಣಕ್ಕಿಳಿಸಲು ವೀರಪ್ಪಮೊಯ್ಲಿ ಉತ್ಸುಕರಾಗಿದ್ದಾರೆ. ಆದರೆ, ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯು ಉದಯ್ ಶೆಟ್ಟಿ ಎಂಬವರ ಹೆಸರನ್ನು ಶಿಫಾಸ್ಸು ಮಾಡಿದೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಪಕ್ಷಕ್ಕೆ ನಾನು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ, ನನ್ನ ಮಗನಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಸಭೆಯಲ್ಲಿ ವೀರಪ್ಪ ಮೊಯ್ಲಿ ಕೇಳಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಉದಯ್‌ಶೆಟ್ಟಿ ಹೆಸರನ್ನು ಶಿಫಾರಸ್ಸು ಮಾಡಿದೆ. ಮೊದಲಿನಿಂದಲೂ ಅವರು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಮಹದೇವಪ್ಪ ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ವೀರಪ್ಪಮೊಯ್ಲಿ ಹಾಗೂ ಮಹದೇವಪ್ಪ ನಡುವೆ ಕೆಲಕಾಲ ವಾಗ್ವಾದ ನಡೆದಿದೆ ಎನ್ನಲಾಗುತ್ತಿದ್ದು, ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಮಧ್ಯಪ್ರವೇಶದಿಂದ ವಾತಾವರಣ ತಿಳಿಯಾಗಿದೆ ಎಂದು ಹೇಳಲಾಗುತ್ತಿದೆ.

ಈ ಘಟನೆಯಿಂದ ಬೇಸರಗೊಂಡು ಹರ್ಷ ಮೊಯ್ಲಿ ಈ ವಿವಾದಾತ್ಮಕ ಟ್ವಿಟ್ ಅನ್ನು, ವೀರಪ್ಪಮೊಯ್ಲಿ ಕಚೇರಿಗೆ ರವಾನಿಸಿದ್ದು, ಅವರ ಸಾಮಾಜಿಕ ಜಾಲತಾಣವನ್ನು ನಿರ್ವಹಿಸುವ ಸಿಬ್ಬಂದಿಗಳು ಈ ಟ್ವಿಟ್ ಅನ್ನು ಪೋಸ್ಟ್ ಮಾಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಕೈವಾಡ ಶಂಕೆ: ವೀರಪ್ಪಮೊಯ್ಲಿ ಅವರ ವಿವಾದಾತ್ಮಕ ಟ್ವಿಟ್ ಹಿಂದೆ ಬಿಜೆಪಿಯವರ ಕೈವಾಡವಿರುವ ಸಾಧ್ಯತೆಯಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ಚರ್ಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಶುಕ್ರವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ವಿಟ್‌ಗೆ ಸಂಬಂಧಿಸಿದಂತೆ ಬಿಜೆಪಿಯವರು ನೀಡುತ್ತಿರುವ ನಿರಂತರ ಪ್ರತಿಕ್ರಿಯೆಗಳನ್ನು ನೋಡಿದರೆ ಅದರ ಹಿಂದೆ ಬಿಜೆಪಿಯವರ ಕೈವಾಡವಿರುವ ಸಂಶಯ ಮೂಡುತ್ತಿದೆ. ಅಲ್ಲದೆ, ಟ್ವಿಟರ್ ಖಾತೆ ಹ್ಯಾಕ್ ಆಗಿರುವುದಾಗಿ ಮೊಯ್ಲಿ ಈಗಾಗಲೆ ಸ್ಪಷ್ಟಣೆ ನೀಡಿದ್ದಾರೆ ಎಂದರು.

ಕಾಂಗ್ರೆಸ್ ಚುನಾವಣಾ ಸಮಿತಿಯು ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗಾಗಿ ಕಂದಾಯ ವಿಭಾಗವಾರು ರಚಿಸಿರುವ ತಂಡಗಳ ಮೂಲಕ ಆಯ್ಕೆ ಮಾಡಲಿದೆ. ಅಂತಿಮವಾಗಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಪರಮೇಶ್ವರ್ ತಿಳಿಸಿದರು.

ಲೋಕೋಪಯೋಗಿ ಸಚಿವರು ಹಾಗೂ ಗುತ್ತಿಗೆದಾರರ ನಡುವೆ ಸಂಬಂಧ ಕಲ್ಪಿಸಿ ನಾನು ಯಾವುದೆ ಟ್ವಿಟ್ ಮಾಡಿಲ್ಲ. ನನ್ನ ಮಗನೂ ಅಂತಹ ಟ್ವಿಟ್ ಮಾಡಲು ಸಾಧ್ಯವಿಲ್ಲ. ನನ್ನ ಟ್ವಿಟರ್ ಹ್ಯಾಕ್ ಆಗಿದೆಯೆ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷದ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲೆ ಚರ್ಚೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಈ ರೀತಿ ಬಹಿರಂಗಾಗಿ ಚರ್ಚಿಸುವುದಿಲ್ಲ.
-ವೀರಪ್ಪಮೊಯ್ಲಿ, ಕೇಂದ್ರದ ಮಾಜಿ ಸಚಿವ

ಕೇಂದ್ರದ ಮಾಜಿ ಸಚಿವ ವೀರಪ್ಪಮೊಯ್ಲಿ ಟ್ವಿಟರ್ ಖಾತೆಯಲ್ಲಿ ಹಾಕಿರುವ ಪೋಸ್ಟ್‌ಗೂ ನನಗೂ ಯಾವುದೆ ಸಂಬಂಧವಿಲ್ಲ. ವಿವಾದಾತ್ಮಕ ಟ್ವಿಟ್ ಮಾಡಿರುವುದು ನಾನಲ್ಲ. ನನ್ನ ಟ್ವಿಟರ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆಂದು ವೀರಪ್ಪಮೊಯ್ಲಿ ಈಗಾಗಲೆ ಸ್ಪಷ್ಟೀಕರಣ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ಹೈಕಮಾಂಡ್. ವೀರಪ್ಪಮೊಯ್ಲಿ ನಮ್ಮ ಪಕ್ಷದ ಹಿರಿಯ ನಾಯಕ. ಚುನಾವಣೆ ಸಂದರ್ಭದಲ್ಲಿ ಇಂತಹ ಕೆಲಸವನ್ನು ನಮ್ಮ ವಿರೋಧಿಗಳು ಮಾಡಿರುವ ಸಾಧ್ಯತೆಯಿದೆ.
-ಡಾ.ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ

ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ವೀರಪ್ಪಮೊಯ್ಲಿ ಟ್ವಿಟ್ ಡಿಲೀಟ್ ಮಾಡಿರಬಹುದು. ಪ್ರಧಾನಿ ನರೇಂದ್ರಮೋದಿ ಕಾಂಗ್ರೆಸ್ ಸರಕಾರವನ್ನು ‘10 ಪರ್ಸೆಂಟ್ ಸರಕಾರ’ ಎಂದು ಆರೋಪಿಸಿದಕ್ಕೆ ಈ ಟ್ವಿಟ್ ಪುಷ್ಟಿ ನೀಡುತ್ತಿದೆ. ಪ್ರಧಾನಿ ಆರೋಪಕ್ಕೆ ಮುಖ್ಯಮಂತ್ರಿ ದಾಖಲೆ ಕೇಳಿದ್ದರು. ಇದೀಗ ಅವರ ಪಕ್ಷದ ಹಿರಿಯ ನಾಯಕ ವೀರಪ್ಪಮೊಯ್ಲಿ ಅವರೆ ದಾಖಲೆ ನೀಡಿದ್ದಾರೆ.
-ಶೋಭಾ ಕರಂದ್ಲಾಜೆ, ಬಿಜೆಪಿ ಸಂಸದೆ

ಮುಖ್ಯಮಂತ್ರಿ ಸಿದ್ದರಾಮಯ್ಯರವರದು ಶೇ.10 ಕಮಿಷನ್ ಸರಕಾರವೆಂದು ಬಿಜೆಪಿ ಮತ್ತು ಮೋದಿಯವರ ಆರೋಪಕ್ಕೆ ಕಾಂಗ್ರೆಸ್ ಮುಖಂಡ ವೀರಪ್ಪಮೊಯ್ಲಿ ಟ್ವೀಟ್ ಮಾಡಿರುವುದೆ ಸಾಕ್ಷಿ. ಕಾಂಗ್ರೆಸ್‌ನ ನಿಜವಾದ ಬಣ್ಣ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿಯಿಂದಲೇ ಬಯಲಾಗಿದೆ. ಈಗಲಾದರು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರಕಾರದ ಭ್ರಷ್ಟತೆಯನ್ನು ಒಪ್ಪಿಕೊಳ್ಳಲಿ.
-ಬಿ.ಎಸ್.ಯಡಿಯೂರಪ್ಪಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News