ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿಯಿಂದ ಮೈಸೂರಿನಲ್ಲಿ ‘ವಿದ್ಯಾರ್ಥಿ ಹಕ್ಕುಗಳ ಸಮಾವೇಶ’:- ಮುಹಮ್ಮದ್ ಶಾಕೀರ್

Update: 2018-03-16 09:09 GMT


        
 ವಿದ್ಯಾರ್ಥಿ ಸಮೂಹವು ಒಂದು ದೇಶದ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಒಂದು ದೇಶದ ಅಭೀವೃದ್ಧಿಯ ಹಿಂದೆ ಆ ದೇಶದಲ್ಲಿ ಶಿಕ್ಷಣ ಮತ್ತು ಅವರನ್ನು ನಡೆಸಿಕೊಳ್ಳುವ ರೀತಿಯ ಮೇಲೆ ಅವಲಂಬಿತವಾಗಿದೆ. ಕೇವಲ ವೃತ್ತಿಯಾದಾರಿತ ಶಿಕ್ಷಣಗಳು ವೃತ್ತಿಯನ್ನೇ ಸೃಷ್ಟಿಸಬಹುದು ಹೊರತು ಒಬ್ಬ ಉತ್ತಮ ವ್ಯಕ್ತಿಯನ್ನಲ್ಲ, ಸಮಾಜದಲ್ಲಿ ಬದಲಾವಣೆಗೊಳಬೇಕಾದರೆ ವ್ಯಕ್ತಿಯಾಧಾರಿತ ಶಿಕ್ಷಣದ ಜೊತೆ ಜೊತೆಗೆ ಮಾನವೀಯ ಮೌಲ್ಯಾಧಾರಿತ ಶಿಕ್ಷಣಗಳು ಅತ್ಯಾವಶ್ಯಕ. ವಿದ್ಯಾರ್ಥಿ ಸಮುದಾಯವು ಸಮಾಜದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ, ವಿಶ್ಲೇಷಣೆ ಮತ್ತು ಅದರ ವಿರುದ್ದ ಪ್ರಶ್ನಿಸುವುದು, ಹೋರಾಟ ನಡೆಸುವುದು ಅವರ ಮುಖ್ಯ ಹೊಣೆಗಾರಿಕೆಯಾಗಿದೆ.


ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಗಮನಿಸುವಾಗ ವಿದ್ಯಾರ್ಥಿ ಚಳುವಳಿಯ ಶಕೆ ಆರಂಭವಾಗಿದೆ. ವಿದ್ಯಾರ್ಥಿ ಸಮುದಾಯವು ಪ್ರಸ್ತುತ ದಿನಗಳಲ್ಲಿ ಸರ್ಕಾರಗಳ ಜನವಿರೋಧಿ ನೀತಿ, ಭ್ರಷ್ಟಾಚಾರ, ಒಡೆದು ಆಳುವ ನೀತಿ ಮತ್ತು ಫ್ಯಾಶಿಸಂ ಮನೋಭಾವದ ವಿರುದ್ಧ ಧ್ವನಿಯೆತ್ತುತ್ತಿದೆ. ಅಣ್ಣಾ ಹಜಾರೆ ಅವರ ಹೋರಾಟದಿಂದ ಹಿಡಿದು ಪ್ರಸ್ತುತ ಜೆ.ಎನ್.ಯು ನಲ್ಲಿ ನಡೆದ ಹೋರಾಟಗಳ ವರೆಗೂ ವಿದ್ಯಾರ್ಥಿ ಸಮುದಾಯ ಸಾಮಾಜಿಕ ವ್ಯವಸ್ಥೆಯಲ್ಲಿ ತನ್ನ ಭಾಗೀದಾರಿಕೆಯನ್ನು ಜಗತ್ತಿನ ಮುಂದೆ ತೋರ್ಪಡಿಸಿತ್ತು. ವೃತ್ತಿಯನ್ನು ಪಡೆಯುವುದೊಂದೆ ಶಿಕ್ಷಣದ ಮುಖ್ಯ ಉದ್ದೇಶ ಅಲ್ಲ, ಜೊತೆಗೆ ಶಿಕ್ಷಣವು ಸಮಗ್ರ ಬದಲಾವಣೆಯ ಆಯುಧವೆಂಬ ಸಂದೇಶವನ್ನು ಜನತೆಗೆ ನೀಡಿತ್ತು. ವಿದ್ಯಾರ್ಥಿಗಳು ಜನತೆಗೋಸ್ಕರ ಬೀದಿಗಿಳಿದಾಗ ರಾಜಕೀಯ ವ್ಯವಸ್ಥೆಯಲ್ಲೇ ಬದಲಾವಣೆಗಳನ್ನು ಕಾಣಬಹುದಾಗಿದೆ.


1970ರ ದಶಕಗಳಲ್ಲಿ ದೇಶದಲ್ಲಿ ವಿದ್ಯಾರ್ಥಿ ಚಳುವಳಿಗಳು ಬದಲಾವಣೆಯ ಬಿರುಗಾಳಿಯನ್ನು ಬೀಸಿದ್ದವು. ಆದರೆ 21 ನೇ ಶತಮಾನದಲ್ಲಿ ವಿದ್ಯಾರ್ಥಿ ಚಳುವಳಿಗಳು ಬಹಳಷ್ಟು ಮಹತ್ವವನ್ನು ಪಡೆದಿದ್ದರೂ, ಸರ್ಕಾರಗಳೇ ವಿದ್ಯಾರ್ಥಿ ಚಳುವಳಿಗಳನ್ನು ಹತ್ತಿಕ್ಕುವ ಕೆಲಸಗಳನ್ನು ಮಾಡುತ್ತಿದೆ. ವಿದ್ಯಾರ್ಥಿ ಹೋರಾಟಗಳನ್ನ ನಿಯಂತ್ರಣದಲ್ಲಿಡುವ ಮೂಲಕ, ವಿದ್ಯಾರ್ಥಿಗಳ ಹಕ್ಕುಗಳನ್ನು ಸರ್ಕಾರಗಳು ನಿಷೇಧಿಸುತ್ತಿದೆ. ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿದ್ದ ರೋಹಿತ್ ವೆಮುಲವೆಂಬ ದಲಿತ ವಿದ್ಯಾರ್ಥಿ ವ್ಯವಸ್ಥೆಯ ತಾರತಮ್ಯ ನೀತಿಯ ವಿರುದ್ದ ಧ್ವನಿಯೆತ್ತಿದ್ದ ಕಾರಣಕ್ಕಾಗಿ, ಸಂಸ್ಥೆಯಿಂದ ಅಮಾನತುಗೊಂಡು ವಿಶ್ವವಿದ್ಯಾನಿಲಯದ ಕುಲಪತಿ ಮತ್ತು ಕೇಂದ್ರ ಸಚಿವರಿಬ್ಬರ ಪ್ರೇರಣೆಯಿಂದ ಆತ್ಮಹತ್ಯೆಗೊಳಗಾಗುತ್ತಾನೆ. ಜಾತಿ ತಾರತಮ್ಯ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯನ್ನು ಬಲಿಪಡೆಯಿತು. ರೋಹಿತ್ ವೇಮುಲನ ಅಸಹಜ ಸಾವಿನ ಕುರಿತು ಧ್ವನಿಯೆತ್ತಿದ ದೇಶದ ಬಹುತೇಕ ವಿದ್ಯಾರ್ಥಿಗಳ ಮೇಲೆ ಕೇಸು ದಾಖಲಿಸಲಾಯಿತು. ಸರ್ಕಾರದ ನೀತಿಯನ್ನು ಟೀಕಿಸಿದ ಕಾರಣಕ್ಕಾಗಿ, ಎ.ಬಿ.ವಿ.ಪಿಯ ಕುತಂತ್ರದಿಂದ ಜೆ,ಎನ್.ಯು ವಿದ್ಯಾರ್ಥಿಗಳನ್ನು ದೇಶದ್ರೋಹಿಗಳಾಗಿ ಚಿತ್ರೀಕರಿಸಿ, ಅವರನ್ನು ಜೈಲಿಗಟ್ಟಲಾಯಿತು, ಮಾತ್ರವಲ್ಲದೆ ಹೋರಾಟದಲ್ಲಿ ಭಾಗಿಯಾದ ಅನೇಕ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್ ಗಳನ್ನು ತಡೆಹಿಡಿಯಲಾಯಿತು. ದೇಶಾದ್ಯಂತ ಸಂಚಲನ ಮೂಡಿಸಿದ ಈ ಚಳುವಳಿಯನ್ನು ವಿದ್ಯಾರ್ಥಿ ಹೋರಾಟದ ಮೂಲಕ ನಾಯಕರೆನಿಸಿಕೊಂಡ ವೆಂಕಯ್ಯ ನಾಯ್ಡು, ಅರುಣ್ ಜೇಟ್ಲಿಯಂತಹ ಕೇಂದ್ರದ ಮಂತ್ರಿಗಳೇ ತಡೆಯಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದರು. ನಜೀಬ್ ಎಂಬ ಜೆ.ಎನ್.ಯು ವಿದ್ಯಾರ್ಥಿ ನಾಪತ್ತೆ ಪ್ರಕರಣದಲ್ಲಿ ಎ.ಬಿ.ಪಿ.ಯ ಕಾರ್ಯಕರ್ತರು ಶಾಮೀಲಾಗಿದ್ದಾರೆ ಎಂದು ಗೊತ್ತಿದ್ದರೂ, ಅದರ  ಸರಿಯಾದ ವಿಚಾರಣೆ ನಡೆದಿಲ್ಲ, ಮತ್ತು ಒಂದು ವರ್ಷವದರೂ ನಜೀಬ್ ನನ್ನು ಹುಡುಕಿ ತರಲು ನಮ್ಮ ಸರ್ಕಾರಗಳಿಗೆ ಸಾಧ್ಯವಾಗಲಿಲ್ಲ.
ರಾಮದಾಸ್ ಕಾಲೇಜಿನಲ್ಲಿ ‘ಗುರ್ ಮೆಹರ್ ಕೌರ್’ ಎಂಬ ವಿದ್ಯಾರ್ಥಿನಿ ಯುದ್ದ ಬೇಡ ಎಂಬ ಕಾರಣಕ್ಕೆ ನಮ್ಮ ರಾಜ್ಯದ ಬಿ.ಜೆ.ಪಿ ಸಂಸದರು ಮತ್ತು ಫ್ಯಾಶಿಸ್ಟ್ ಮನೋಸ್ಥಿತಿಯ ವ್ಯಕ್ತಿಗಳು ಆಕೆಯನ್ನು ದೇಶದ್ರೋಹಿಯನ್ನಾಗಿಸಿ ಚಿತ್ರೀಕರಿಸಿದರು ಮತ್ತು ಬೆದರಿಕೆಗಳನ್ನು ಒಡ್ಡಿದರು ಅಲ್ಲದೆ ಪ್ರಸ್ತುತ ಕೇಂದ್ರ ಸರ್ಕಾರವು ವಿಶ್ವವಿದ್ಯಾನಿಲಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಅಲಿಘಡ್ ಮತ್ತು ಜಾಮಿಯಾ ಮಿಲ್ಲಿಯಾ ಯುನಿವರ್ಸಿಟಿಗಳ ಅಲ್ಪಸಂಖ್ಯಾತ ಮಾನ್ಯತೆಯನ್ನು ರದ್ದುಗೊಳಿಸಲು ಹೊರಟಿದೆ. ಒಟ್ಟಾರೆಯಾಗಿ ಈ ಎಲ್ಲಾ ಘಟನೆಗಳು ಸರ್ಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸಿದ ಕಾರಣದಿಂದ ನಡೆದಿದೆ. ಹಿಗೆ ಈ ದೇಶದ ರಾಜಕೀಯ ವ್ಯವಸ್ಥೆಯಿಂದ  ವಿದ್ಯಾರ್ಥಿಗಳನ್ನು ದೂರ ಉಳಿಸುವ ಮತ್ತು ವ್ಯವಸ್ಥೆಯನ್ನು  ಟೀಕಿಸುವವರನ್ನು  ದಮನಿಸುವ ಕಾರ್ಯಗಳನ್ನು ಸರ್ಕಾರ ಮಾಡುತ್ತಿದೆ. ನಮ್ಮ ರಾಜ್ಯದಲ್ಲೂ ಕೂಡಾ ವಿದ್ಯಾರ್ಥಿಗಳ ಮೇಲೆ ಅನ್ಯಾಯ, ಅಕ್ರಮ ನಡೆಯುತ್ತಿದ್ದು ಕಳೆದ 4 ವರ್ಷಗಳಿಂದ ಹಲವು ವಿದ್ಯಾರ್ಥಿನಿಯರು ರಾಜ್ಯದಲ್ಲಿ ಅತ್ಯಾಚಾರ ಮತ್ತು ಕೊಲೆಗಯೈಲ್ಪಟ್ಟಿದ್ದಾರೆ. ಅತೀ ಹೆಚ್ಚಿನ ಪ್ರಕರಣಗಳು ಶಿಕ್ಷಣ ಸಂಸ್ಥೆಯ ಅವರಣದಲ್ಲಿ ನಡೆಯುತ್ತಿದ್ದರೂ ಸರ್ಕಾರ ಇದರ ವಿರುದ್ದದ ಕಾನೂನುಗಳನ್ನು ಕಠಿಣಗೊಳಿಸಲುವಲ್ಲಿ ವಿಫಲವಾಗಿದೆ.  ವಿದ್ಯಾರ್ಥಿಗಳ ಮೇಲಿನ ಅನೈತಿಕ ಪೊಲೀಸ್ ಗಿರಿ ಮತ್ತು ವಸ್ತ್ರ ಸಂಹಿತೆಯ ಹೆಸರಿನಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ಧಾರ್ಮಿಕ ಹಕ್ಕಿನ ಉಲ್ಲಂಘನೆ ನಡೆಯುತ್ತಿದೆ. ಕಳೆದ ವರ್ಷ ಖಾಸಗಿ ವಲಯದಲ್ಲಿ ಮೀಸಲಾತಿಗಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಏಮ್ಸ್ ಸಂಸ್ಥೆಯ ವಿದ್ಯಾರ್ಥಿ ವಿರೋಧಿ ನೀತಿಯ ವಿರುದ್ದ ಪ್ರತಿಭಟನೆ ನಡೆಸಿದ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿಗಳ ಮೇಲೆ ಕೇಸು ಹಾಕಲ್ಪಟ್ಟಿದೆ. ಅಲ್ಲದೆ ಶಿಕ್ಷಣ ಸಚಿವರು ‘ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಭಾಗವಹಿಸುವಂತಿಲ್ಲ’ ಎಂದು ಹೇಳಿಕೆಯು ಕೊಟ್ಟಿದ್ದು ಇದು ವಿದ್ಯಾರ್ಥಿಗಳ ಪ್ರತಿಭಟನೆಯ ಹಕ್ಕನ್ನು ಕಸಿಯುವಂತಿದೆ. ಒಟ್ಟಿನಲ್ಲಿ ಸರ್ಕಾರಗಳ ಮತ್ತು ರಾಜಕಾರಣಿಗಳ ಬೂಟಾಟಿಕೆಯ ಮುಂದೆ ವಿದ್ಯಾರ್ಥಿಗಳ ಹಕ್ಕುಗಳು ವಂಚಿಸಲ್ಪಡುತ್ತಿದೆ, ಮತ್ತು ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜಕಾರಣಿಗಳು ವಿದ್ಯಾರ್ಥಿಗಳನ್ನು ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಬಳಸುತ್ತಿದ್ದಾರೆ ಹೊರತು ಅವರ ಹಕ್ಕುಗಳನ್ನು ಈಡೇರಿಸುವ ಕೆಲಸವನ್ನು ಮಾಡುತ್ತಿಲ್ಲ. ಸಂವಿಧಾನದತ್ತವಾದ ಪ್ರತಿಭಟನೆಯ ಹಕ್ಕನ್ನು  ವಿದ್ಯಾರ್ಥಿಗಳಿಂದ ಕಬಳಿಸಿ ಅವರನ್ನು ಕೇವಲ ನಾಲ್ಕು ಗೋಡೆಯೊಳಗೆ ಸೀಮಿತಗೊಳಿಸಿ, ಸಾಮಾಜಿಕ ಅಸಮಾನತೆಯ ವಿರುದ್ಧದ ವಿದ್ಯಾರ್ಥಿಗಳ ಭಾಗೀದಾರಿಕೆಯನ್ನು ನಾಶಗೊಳಿಸುವ ಕುತಂತ್ರಗಳನ್ನು ಸರ್ಕಾರಗಳು ಮಾಡುತ್ತಿವೆ. ಆದುದರಿಂದ ವಿದ್ಯಾರ್ಥಿಗಳ ಹಕ್ಕುಗಳನ್ನು ಮುಕ್ತವಾಗಿ ಅನುಭವಿಸಲು ಸರ್ಕಾರಗಳು ಅವಕಾಶ ನೀಡಬೇಕು. ವಿದ್ಯಾರ್ಥಿಗಳ ರಕ್ಷಣೆಗೆ ಸಂಬಂದಪಟ್ಟ ಕಾನೂನುಗಳನ್ನು ರೂಪಿಸಬೇಕು ಎಂಬ ಬೇಡಿಕೆಗಳೊಂದಿಗೆ ‘ರಾಜಕೀಯ ಬೂಟಾಟಿಕೆಯನ್ನು ಕೊನೆಗೊಳಿಸಿ, ವಿದ್ಯಾರ್ಥಿಗಳ ರಕ್ಷಣೆಯನ್ನು ಖಾತರಿಪಡಿಸಿ’ ಎಂಬ ಘೋಷಾ ವಾಕ್ಯದೊಂದಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ “ವಿದ್ಯಾರ್ಥಿ ಹಕ್ಕುಗಳ ಸಮಾವೇಶ” ಮೈಸೂರಿನಲ್ಲಿ ದಿನಾಂಕ 17.03.2018 ರಂದು ನಗರದ ಉದಯಗಿರಿ ಸಿಗ್ನಲ್ ಬಳಿಯಿಂದ ಬೃಹತ್ ವಿದ್ಯಾರ್ಥಿ ರ್ಯಾಲಿ ಮತ್ತು ಶಾಂತಿನಗರದಲ್ಲಿ ಸಮಾವೇಶ ನಡೆಯಲಿದೆ. ದಿನಾಂಕ 18.03.2018 ರಂದು ನಗರದ ಆರ್.ಕೆ. ಪ್ಯಾಲೇಸ್ ಸಭಾಂಗಣದಲ್ಲಿ ರಾಜ್ಯ ಪ್ರತಿನಿಧಿ ಸಮಾವೇಶ ನಡೆಯಲಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಕೀರ್ ತಿಳಿಸಿದರು.

 ನದೀಮ್ ಮೈಸೂರು, ಅಧ್ಯಕ್ಷರು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಮೈಸೂರು, ಆರೀಫ್ ಶಿವಮೊಗ್ಗ, ಕಾರ್ಯದರ್ಶಿಗಳು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಕರ್ನಾಟಕ ,ರಿಯಾಝ್ ಕಡಂಬು , ಮಾಧ್ಯಮ ಸಂಯೋಜಕರು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಕರ್ನಾಟಕ ಹಾಗೂ ತನ್ವೀಝ್ ಮೈಸೂರು, ಜಿಲ್ಲಾ ಕಾರ್ಯದರ್ಶಿಗಳು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಮೈಸೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News