ಕಾಡಾನೆ ಪಳಗಿಸಲು ಕರ್ನಾಟಕದ ನೆರವು ಕೋರಿದ ಮಹಾರಾಷ್ಟ್ರ

Update: 2018-03-16 13:11 GMT

ಮುಂಬೈ, ಮಾ.16: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಕಾಡಾನೆಗಳಿಂದ ಪ್ರಾಣಹಾನಿ ಹಾಗೂ ಬೆಳೆನಷ್ಟ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ , ಇಂತಹ ಕಾಡಾನೆಗಳನ್ನು ಸೆರೆಹಿಡಿದು ಪಳಗಿಸಿ ತರಬೇತಿ ನೀಡಲು ಕರ್ನಾಟಕದ ನೆರವನ್ನು ಕೋರಲಾಗಿದೆ ಎಂದು ಮಹಾರಾಷ್ಟ್ರದ ಅರಣ್ಯ ಸಚಿವ ಸುಧೀರ್ ಮುಂಗಂಟಿವಾರ್ ತಿಳಿಸಿದ್ದಾರೆ.

 ಕರ್ನಾಟಕ ರಾಜ್ಯದಲ್ಲಿರುವ ತರಬೇತಿ ಪಡೆದ ಸಿಬ್ಬಂದಿಗಳನ್ನು ಕಳಿಸಿಕೊಡುವಂತೆ ಆ ರಾಜ್ಯಕ್ಕೆ ಮನವಿ ಮಾಡಲಾಗಿದೆ. ಆದರೆ ಈಗ ಕರ್ನಾಟಕದಲ್ಲೇ ಕಾಡಾನೆ ಪಳಗಿಸುವ ಕಾರ್ಯದಲ್ಲಿ ಸಿಬ್ಬಂದಿಗಳು ನಿರತರಾಗಿದ್ದು ಮೇ- ಜೂನ್ ಬಳಿಕ ಅವರನ್ನು ಕಳಿಸಬಹುದು ಎಂದು ಕರ್ನಾಟಕದ ಅಧಿಕಾರಿಗಳಿಂದ ಉತ್ತರ ಬಂದಿದೆ ಎಂದು ವಿಧಾನಸಭೆಯಲ್ಲಿ ಎನ್‌ಸಿಪಿ ಶಾಸಕಿ ಸಂಧ್ಯಾ ಕುಪೆಕರ್ ಮಂಡಿಸಿದ ಗಮನ ಸೆಳೆಯುವ ಗೊತ್ತುವಳಿ ಮೇಲಿನ ಚರ್ಚೆಯ ಸಂದರ್ಭ ಸಚಿವರು ತಿಳಿಸಿದ್ದಾರೆ. ಅಷ್ಟರವರೆಗೆ ಕಾಯುವ ಬದಲು ಮಹಾರಾಷ್ಟ್ರದ ಸಿಬ್ಬಂದಿಗಳನ್ನು ಕರ್ನಾಟಕಕ್ಕೆ ಕಳುಹಿಸಿ ಕಾಡಾನೆಗಳನ್ನು ಪಳಗಿಸುವ ಬಗ್ಗೆ ತರಬೇತಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ಎನ್‌ಸಿಪಿ ಶಾಸಕ ಜಯಂತ್ ಪಾಟೀಲ್ ಸಲಹೆ ಮಾಡಿದರು. ಈ ಸಲಹೆಯನ್ನು ಪರಿಗಣಿಸುವುದಾಗಿ ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News