ಬಿಟಿ ಹತ್ತಿ ನಂಬಿ ಕೆಟ್ಟವರು.....

Update: 2018-03-16 18:44 GMT

 ಕಳೆದ ಮೂರು ದಶಕಗಳಿಂದ ಕೃಷಿ ಲೋಕದಲ್ಲಾದ ಬದಲಾವಣೆಗಳೆಲ್ಲಾ ರೈತನ ಕತ್ತಿನ ಕುಣಿಕೆಯನ್ನು ಬಿಗಿಗೊಳಿಸುತ್ತಾ ಬಂದಿದೆ. ಉಪ್ಪು ತಿನ್ನಿಸಿ ಹತ್ತು ಮೈಲಾಚೆಯ ಬಾವಿಗೆ ಉರಿ ಬಿಸಿಲಲ್ಲಿ ಓಡಲು ಹೇಳಿದಂತೆ ಈ ಸ್ಥಿತಿ ಇದೆ. ವ್ಯಾಪಾರಿ ಬೆಳೆಯನ್ನು ಏಕಬೆಳೆಯಾಗಿ ಬೆಳೆದು ಆರ್ಥಿಕ ಲಾಭ ಮಾಡಿಕೊಳ್ಳುವ ಒತ್ತಾಸೆಯೊಂದನ್ನು ನಮ್ಮ ಸರಕಾರ ಹೆಚ್ಚಿಸುತ್ತಾ ಇದೆ. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ರೈತರ ಸಂಕಟಗಳ ಅಧ್ಯಯನದ ನೋಟವೊಂದು ‘ಬಿಟಿ ಹತ್ತಿ-ರೈತರ ಕೊರಳ ಕುಣಿಕೆ ಬಿಗಿಗೊಳಿಸಿದ ಬೆಳೆ’ ಎನ್ನುವ ಪುಟ್ಟ ಕೃತಿಯಲ್ಲಿ ಕಾಣಬಹುದು. ಅಕ್ಷರ ಕೃಷಿ ಫೌಂಡೇಶನ್ ಮೈಸೂರು, ಕೆ. ಪಿ. ಸುರೇಶ, ಮಂಜುನಾಥ ಹೊಳಲು, ಪಿ. ವಾಸು ಇವರು ಜಂಟಿಯಾಗಿ ಈ ಅಧ್ಯಯನವನ್ನು ಮಾಡಿದ್ದಾರೆ. ಲಡಾಯಿ ಪ್ರಕಾಶನ ಗದಗ ಕೃತಿಯನ್ನು ಹೊರತಂದಿದೆ.
2015-16ನೆ ಸಾಲಿನ ರಾಯಚೂರಿನ ಬಿಟಿ ಹತ್ತಿ ಬೆಳೆದ ರೈತರು ಅನುಭವಿಸಿದ ಕಷ್ಟ ನಷ್ಟಗಳನ್ನು ಈ ವರದಿಯಲ್ಲಿ ಸಾದರ ಪಡಿಸಲು ಪ್ರಯತ್ನಿಸಲಾಗಿದೆ. ರಾಯಚೂರಿನ ನೂರಾರು ರೈತರು, ರೈತ ಸಂಘದ ನಾಯಕರು, ಕಾರ್ಯಕರ್ತರು, ಪರಿಸರ ಆಸಕ್ತರು ತಮ್ಮ ಅನಿಸಿಕೆ, ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬಿಟಿ ಹತ್ತಿಯ ಒಳಿತುಗಳನ್ನು ಮಾಧ್ಯಮಗಳ ಕಂಪೆನಿಗಳು ಡಂಗುರ ಸಾರುತ್ತಾ ಬರುತ್ತಿವೆ. ಬಿಟಿ ಹತ್ತಿ ಬೀಜದ ಲಾಭಗಳನ್ನು ಮುಂದಿಟ್ಟು, ದೇಶಕ್ಕೆ ದುಬಾರಿ ಬೆಲೆಯ ಕುಲಾಂತರಿ ಬೀಜಗಳನ್ನು ಕೃಷಿಕರ ಕೈಗೆ ಬಲವಂತವಾಗಿ ತುರುಕಲಾಗುತ್ತದೆ. ವಿಜ್ಞಾನಿಗಳೂ ಕುಲಾಂತರಿ ತಳಿಗಳನ್ನು ಹಾಡಿ ಹೊಗಳುತ್ತಿದ್ದಾರೆ. ಹೀಗಿದ್ದರೂ ರಾಯಚೂರು ಜಿಲ್ಲೆಯ ಸಾವಿರಾರು ರೈತರ ಬಿಟಿ ಹತ್ತಿಯ ಫಸಲು ಹೇಗೆ ಕೈ ಕೊಟ್ಟಿತು ಎನ್ನುವ ಅಂಶಗಳನ್ನು ಸ್ಥಳಕ್ಕೆ ಭೇಟಿ ನೀಡಿ ವಿವಿಧ ರೈತರ ಅನಿಸಿಕೆಗಳನ್ನು ದಾಖಲಿಸಿ ಈ ಪುಟ್ಟ ವರದಿಯನ್ನು ಸಿದ್ಧಗೊಳಿಸಲಾಗಿದೆ. ಬೃಹತ್ ಕಂಪೆನಿಗಳ ಹುನ್ನಾರ, ರಾಜಕಾರಣಿಗಳ ವಂಚನೆ ಇವೆಲ್ಲದಕ್ಕೆ ರೈತರು ಹೇಗೆ ಬಲಿಯಾಗಬೇಕಾಯಿತು ಎನ್ನುವ ಕೃಷಿ ರಾಜಕಾರಣವನ್ನು ಇಲ್ಲಿ ತೆರೆದಿಡಲಾಗಿದೆ. ಇದು ಕೇವಲ ರಾಯಚೂರಿಗೆ ಮಾತ್ರ ಸೀಮಿತವಾಗಬೇಕಾಗಿಲ್ಲ. ಇಂತಹ ರಾಯಚೂರುಗಳನ್ನು ದೇಶಾದ್ಯಂತ ಬಿಟಿ ಬೆಳೆ ನಿಮಾ‰ಣ ಮಾಡುತ್ತಿದೆ ಎನ್ನುವುದು ಲೇಖಕರ ಒಮ್ಮತದ ಅಭಿಪ್ರಾಯವಾಗಿದೆ. ಸದ್ಯದ ಕೃಷಿ ವಲಯದ ದುರಂತಗಳನ್ನು ಅರ್ಥ ಮಾಡಿಕೊ್ಳಲು ಈ ಕೃತಿ ಒಂದು ಕೈಮರವಾಗಿದೆ.
 60 ಪುಟಗಳ ಈ ಕೃತಿಯ ಮುಖಬೆಲೆ 30 ರೂಪಾಯಿ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News