ದೇಶ ಒಗ್ಗಟ್ಟಾಗಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ: ರಾಹುಲ್ ಗಾಂಧಿ

Update: 2018-03-17 07:28 GMT

 ಹೊಸದಿಲ್ಲಿ, ಮಾ.17: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ದ್ವೇಷವನ್ನು ಹರಡಿ, ಧರ್ಮ ಹಾಗೂ ಜಾತಿ ಹೆಸರಲ್ಲಿ ದೇಶವನ್ನು ವಿಭಜಿಸುತ್ತಿದೆ ಎಂದು ಶನಿವಾರ ವಾಗ್ದಾಳಿ ನಡೆಸಿದ ಕಾಂಗ್ರೆೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನಮ್ಮ ಪಕ್ಷದಿಂದ ಮಾತ್ರ ದೇಶವನ್ನು ಏಕೀಕರಣಗೊಳಿಸಲು ಸಾಧ್ಯ ಎಂದು ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್‌ನ 84ನೇ ಮಹಾ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಹುಲ್,‘‘ ಇಂದು ನಮ್ಮ ದೇಶ ವಿಭಜಿತವಾಗುತ್ತಿದೆ. ಒಬ್ಬರು ಮತ್ತೊಬ್ಬರೊಂದಿಗೆ ಹೋರಾಡುತ್ತಿದ್ದಾರೆ. ಇವರೆಲ್ಲರನ್ನೂ ಒಟ್ಟಾಗಿಸುವುದು ಕಾಂಗ್ರೆಸ್‌ನ ಕೆಲಸ. ಕೈ ಚಿಹ್ನೆಯನ್ನು ನೀವೆಲ್ಲರೂ ಬಲಪಡಿಸಬೇಕು. ಕೈ ಚಿಹ್ನೆ(ಕಾಂಗ್ರೆಸ್ ಪಕ್ಷದ ಚಿಹ್ನೆ)ಯಿಂದ ಮಾತ್ರ ದೇಶ ಒಗ್ಗಟ್ಟಾಗಿ ಮುನ್ನಡೆಯಲು ಸಾಧ್ಯ’’ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಅಧಿವೇಶನ ಮುಂಬರುವ 2019ರ ಲೋಕಸಭಾ ಚುನಾವಣೆಗೆ ಪೂರ್ವ ತಯಾರಿಯಾಗಿದೆ. ಈ ಅಧಿವೇಶನದಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿಗಳು, ರಾಜ್ಯ ಕಾಂಗ್ರೆಸ್ ಅಧ್ಯಕ್ಷರುಗಳು ಹಾಗೂ ಎಲ್ಲ ರಾಜ್ಯಗಳ ಕಾಂಗ್ರೆಸ್ ಶಾಸಕರು ಭಾಗವಹಿಸಿದ್ದಾರೆ. ಮಾಜಿ ಪ್ರಧಾನಮಂತ್ರಿ ಮನ್‌ಮೋಹನ್ ಸಿಂಗ್ ಹಾಗೂ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಉಪಸ್ಥಿತರಿದ್ದರು.

ಕಾಂಗ್ರೆಸ್ ಪಕ್ಷ ಅಧಿವೇಶನದಲ್ಲಿ ಎರಡು ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ. ಒಂದು ರಾಜಕೀಯ ಹಾಗೂ ಮತ್ತೊಂದು ಉದ್ಯೋಗ ಹಾಗೂ ಬಡತನ ನಿರ್ಮೂಲನೆ ಬಗ್ಗೆ ನಿರ್ಣಯ ಕೈಗೊಳ್ಳಲಿದೆ. ಅಧಿವೇಶನದ ಕೊನೆಯ ದಿನ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಪಕ್ಷದ ಅಧ್ಯಕ್ಷರು ಆಯ್ಕೆ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News