ವೀರಶೈವರು ಪ್ರತ್ಯೇಕ ಧರ್ಮ ಬೇಕಿದ್ದರೆ ಬೇಡಿಕೆ ಸಲ್ಲಿಸಲಿ: ಮಾತೆ ಮಹಾದೇವಿ

Update: 2018-03-17 12:41 GMT

ಹುಬ್ಬಳ್ಳಿ, ಮಾ.17: ಲಿಂಗಾಯತ ಹಾಗೂ ವೀರಶೈವ ಒಂದೇ ಅಲ್ಲ. ಹೀಗಾಗಿ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ರಾಜ್ಯ ಸರಕಾರ ಮಾನ್ಯತೆ ನೀಡಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಬೇಕಿದ್ದರೆ ವೀರಶೈವರು ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಸಲ್ಲಿಸಲಿ ಎಂದು ಬಸವ ಧರ್ಮ ಪೀಠದ ಮಾತೆ ಮಹಾದೇವಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನಮ್ಮ ಹಕ್ಕು. ಲಿಂಗಾಯತರು ಮಾನ್ಯತೆ ಕೇಳಿದರೆ ಭಿಕ್ಷೆ ಬೇಡಿದಂತೆ ಅಲ್ಲ ಎಂದು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಉದ್ಯಮಿ ವಿಜಯ ಸಂಕೇಶ್ವರ್ ಲಿಂಗಾಯತ ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡಬಾರದು. ಏನೇ ವಾದಗಳಿದ್ದರೂ ವೀರಶೈವ ಸ್ವಾಮೀಜಿಗಳ ಜೊತೆಗೆ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ. ವಿಜಯ ಸಂಕೇಶ್ವರ ಶ್ರೀಮಂತರು ಅವರಿಗೆ ಬಡವರ ಬಗ್ಗೆ ಗೊತ್ತಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವನ್ನು ರಾಜಕೀಯ ಬಣ್ಣದ ಕನ್ನಡಕ ಹಾಕಿಕೊಂಡು ನೋಡಬಾರದು ಎಂದು ಅವರು ಟೀಕಿಸಿದರು.

ಲಿಂಗಾಯತ ಎನ್ನುವುದು ಸ್ವತಂತ್ರ ಧರ್ಮ. ಲಿಂಗಾಯತ್ಕಕಿಂತ ಸಣ್ಣ ಧರ್ಮಗಳಿಗೆ ಮಾನ್ಯತೆ ಸಿಕ್ಕಿದೆ. ಅದೇ ರೀತಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗಬೇಕು. ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಲು ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಅಲ್ಲ. ಲಿಂಗಾಯತ ಧರ್ಮ 12ನೆಯ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿ ಸ್ಥಾಪಿತವಾದ ಧರ್ಮ ಎಂದು ಅವರು ತಿಳಿಸಿದರು.

ಲಿಂಗಾಯತ ಪತ್ಯೇಕ ಧರ್ಮಕ್ಕಾಗಿ ನಾಳೆಯಿಂದಲೇ ಬೆಂಗಳೂರಿನ ಪುರಭವನದ ಮುಂಭಾಗ ಸತ್ಯಾಗ್ರಹ ಮಾಡಲಾಗುತ್ತದೆ. ತಜ್ಞರ ವರದಿಗೆ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ಕೊಡುವವರೆಗೆ ನಮ್ಮ ಹೋರಾಟ ನಡೆಯಲಿದೆ. ದಿಂಗಾಲೇಶ್ವರ ಸ್ವಾಮೀಜಿ, ಶಾಮನೂರ ಶಿವಶಂಕರಪ್ಪ ಹತ್ತಿರ ಯಾವುದೇ ದಾಖಲೆಗಳಿಲ್ಲ. ಕೆಲವು ಸ್ವಾಮೀಜಿಗಳು ಮುಖ್ಯಮಂತ್ರಿಗೆ ಬೆದರಿಕೆ ಹಾಕುತ್ತಿದ್ದಾರೆ. ಲಿಂಗ ಕಟ್ಟಿಕೊಂಡವರು ಎಲ್ಲರೂ ಲಿಂಗಾಯತರು, ವೀರಶೈವರು ಅಲ್ಲ. ವೀರಶೈವದ ಬಗ್ಗೆ ದಾಖಲೆಗಳಿದ್ದರೆ ಮತ್ತು ಅವರಿಗೆ ಧೈರ್ಯ ಇದ್ದರೆ ಅವರು ವೀರಶೈವ ಧರ್ಮ ಮಾಡಿಕೊಳ್ಳಲಿ. ಲಿಂಗಾಯತ ಧರ್ಮದಲ್ಲಿ ವೀರಶೈವರು ಬರುವುದು ಸರಿಯಲ್ಲ.
-ಮಾತೇ ಮಹಾದೇವಿ, ಪೀಠಾಧ್ಯಕ್ಷೆ, ಬಸವ ಧರ್ಮ ಪೀಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News