ಬಸವಣ್ಣನವರ ವಿಚಾರಧಾರೆಗೆ ಜ್ಞಾನ ವೈರಾಗ್ಯಗಳ ಕ್ರಾಂತಿಯನ್ನಿತ್ತು ಮುನ್ನಡೆಸಿದವರು ಅಲ್ಲಮಪ್ರಭುಗಳು: ಶಂಕರ ದೇವನೂರು

Update: 2018-03-17 14:37 GMT

ಮೈಸೂರು,ಮಾ.17: ಬಸವಣ್ಣನವರ ವಿಚಾರಧಾರೆಗೆ ತನ್ನ ಜ್ಞಾನ ವೈರಾಗ್ಯಗಳ ಕ್ರಾಂತಿಯನ್ನಿತ್ತು ಮುನ್ನಡೆಸಿದವರು ಅಲ್ಲಮಪ್ರಭುಗಳು. ಗುಹೇಶ್ವರ ಎಂಬ ಅಂಕಿತತಿಂದ ಕೂಡಿದ ಅವರ ವಚನಗಳು ಬೆಡಗಿನ ವಚನಗಳೆಂದೆ ಖ್ಯಾತಿಯಾಗಿದೆ ಎಂದು ಬೆಂಗಳೂರಿನ ಕರ್ನಾಟಕ ವಿದ್ಯುತ್ ನಿಗಮದ ಮುಖ್ಯ ಅಭಿಯಂತರ ಹಾಗು ಸಾಹಿತಿ ಶಂಕರ ದೇವನೂರು ಹೇಳಿದರು.

ಶ್ರೀ ನಟರಾಜ ಪ್ರತಿಷ್ಠಾನದಲ್ಲಿ ವ್ಯೋಮಮೂರುತಿ ಅಲ್ಲಮಪ್ರಭು ಜಯಂತಿ ಹಾಗೂ ಚರಮೂರ್ತಿ ಆಸ್ಥಾನ್ ವಿದ್ವಾನ್ ನಿ.ಪ್ರ.ಸ್ವ. ಶ್ರೀ ಬಸವಲಿಂಗಸ್ವಾಮಿಗಳವರ 67ನೇ ಪುಣ್ಯಾರಾಧನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಲ್ಲಮ ಪ್ರಭುಗಳು 11ನೇ ಶತಮಾನದ ಧಾರ್ಮಿಕ ಮಹತ್ ಸಾಧನೆಯ ಇತಿಹಾಸದಲ್ಲಿ ಬಹಳ ಪ್ರಮುಖರಾದ ವಚನಕಾರರೆಂದರೆ ಶ್ರೀ ಅಲ್ಲಮಪ್ರಭುಗಳು. ಇವರು ಜೀವನ ಸಿದ್ಧಾಂತದ ಸಾರವನ್ನೇ ತನ್ನ ಇರವಿನಲ್ಲಿರಿಸಿಕೊಂಡು ಶರಣ ಮಾರ್ಗಕ್ಕೆ ಗುರುವಾಗಿ, ಅನುಭವ ಮಂಟಪದ ಅಧ್ಯಕ್ಷರಾಗಿ ಹಾಗೂ ಶೂನ್ಯ ಸಿಂಹಾಸನದ ದೊರೆಯಾಗಿದ್ದವರು. ಆಗಿನ ಕಾಲಘಟ್ಟದಲ್ಲಿದ್ದ ಬಾಹ್ಯಾಡಂಬರ, ಅಂಧ ಶ್ರದ್ಧೆ, ಢಾಂಬಿಕತೆ, ಅಸತ್ಯ, ಅಜ್ಞಾನಗಳ ವಿರುದ್ಧ ಹೋರಾಡಿದವರು. ಬಸವಣ್ಣನವರ ವಿಚಾರಧಾರೆಗೆ ತನ್ನ ಜ್ಞಾನ ವೈರಾಗ್ಯಗಳ ಕ್ರಾಂತಿಯನ್ನಿತ್ತು ಮುನ್ನಡೆಸಿದವರು ಅಲ್ಲಮಪ್ರಭುಗಳು. ಗುಹೇಶ್ವರ ಎಂಬ ಅಂಕಿತದಿಂದ ಕೂಡಿದ ಇವರ ವಚನಗಳು ಬೆಡಗಿನ ವಚನಗಳೆಂದೆ ಖ್ಯಾತಿಯಾಗಿದೆ. ಇವರ ವಚನಗಳಲ್ಲಿ ಅನುಭವ ಸಂಪತ್ತು, ಅಲಂಕಾರ, ಉಪಮಾನಗಳ ಬಳಕೆ ಉಜ್ವಲ ಹಾಗೂ ಪರಿಣಾಮಕಾರಿಯಾದುದೆಂದು ತಿಳಿಸಿದರು.

ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ಬಿ.ವಿ. ವಸಂತ ಕುಮಾರ್ ಮಾತನಾಡಿ, ಹನ್ನೆರಡನೆಯ ಶತಮಾನದ ಶಿವಶರಣರು ಹಾಗೂ ಅಲ್ಲಮನ ಚಿಂತನೆಗಳು ಸರ್ವಕಾಲಕ್ಕೂ ಒಪ್ಪುವಂತಹ ಜೀವನ ಸತ್ಯಗಳನ್ನು ತೆರೆದಿಡುವ ಮಹಾಕಾವ್ಯಗಳಂತೆ, ಧರ್ಮ ಮತ್ತು ರಾಜಕಾರಣಗಳು ಒಂದೊಕ್ಕೊಂದು ಪೂರಕವಾಗಿದ್ದಾಗ ಮಾತ್ರ ಜನತೆ, ಸಮಾಜ ಸಂತೃಪ್ತರಾಗಿ ಬದುಕಲು ಸಾಧ್ಯ. ಆದರೆ ರಾಜಕೀಯವೇನಾದರು ಧರ್ಮವನ್ನು ಆಪೋಶನ ತೆಗೆದುಕೊಂಡರೆ ಇಡೀ ಮನುಕುಲವೆ ಅಪಾಯಕ್ಕೆ ಸಿಲುಕುತ್ತದೆ ಎಂಬುದನ್ನು ಹಲವು ಐತಿಹಾಸಿಕ ನಿದರ್ಶನಗಳ ಮೂಲಕ ತಿಳಿಸಿದರು.

ಶ್ರೀ ಮಹಾಂತ ಸ್ವಾಮಿಗಳು, ಶ್ರೀ ಗುರುಮಲ್ಲೇಶ್ವರ ದಾಸೋಹ ಮಠ ದೇವನೂರು ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ನಿ.ಪ್ರ.ಸ್ವ. ಶ್ರೀ ಚಿದಾನಂದಮಹಾಸ್ವಾಮಿಗಳು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿದ್ದ ಗಣ್ಯರನ್ನು ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಭಾರ ಪ್ರಾಂಶುಪಾಲ ಸಿದ್ಧಲಿಂಗಸ್ವಾಮಿ ಸ್ವಾಗತಿಸಿದರು,  ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕ ಹೆಚ್.ಬಿ. ಬಸಪ್ಪ ,  ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಂ.ಎಸ್. ಸಂಧ್ಯಾರಾಣಿ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News