ಹಲವು ಮಕ್ಕಳ ಪ್ರಾಣ ರಕ್ಷಿಸಿದ ಆಪತ್ಪಾಂಧವ ಕಫೀಲ್ ಖಾನ್ ಗೆ ಜೈಲೇ ಗತಿ!

Update: 2018-03-17 14:37 GMT

ಲಕ್ನೋ, ಮಾ.17: ಕಳೆದ ವರ್ಷ ಉತ್ತರ ಪ್ರದೇಶದ ಗೋರಖ್ ಪುರದ ಬಿಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ ಸಂಭವಿಸಿದ ದುರಂತದ ನೆನಪುಗಳು ಇನ್ನೂ ಮಾಸಿಲ್ಲ. ಆಕ್ಸಿಜನ್ ಸರಬರಾಜು ನಿಂತಿದ್ದರಿಂದ 70 ಮಕ್ಕಳು ಮೃತಪಟ್ಟಿದ್ದರು. ಹಳೆಯ ಬಾಕಿ ಪಾವತಿಸದ ಕಾರಣ ಸಂಸ್ಥೆಯವರು ಆಕ್ಸಿಜನ್ ಸರಬರಾಜು ನಿಲ್ಲಿಸಿದ್ದೇ ಮಕ್ಕಳು ಸಾವನ್ನಪ್ಪಲು ಕಾರಣವಾಗಿತ್ತು. ಈ ಸಂದರ್ಭ ಆಪದ್ಭಾಂದವರಂತೆ ಬಂದು ಹಲವು ಮಕ್ಕಳ ಪ್ರಾಣ ಉಳಿಸಿದ್ದು ಡಾ.ಕಫೀಲ್ ಖಾನ್. 

ಆಸ್ಪತ್ರೆಯಲ್ಲಿ ಮಕ್ಕಳು ಸಾವಿಗೀಡಾಗುತ್ತಿದ್ದಾರೆ ಎಂದು ತಿಳಿದ ಕೂಡಲೇ ಹೊರಗಿನಿಂದ ಆಮ್ಲಜನಕ ವ್ಯವಸ್ಥೆ ಮಾಡಿ ಆಹೋರಾತ್ರಿ ಶ್ರಮಿಸಿ ಹಲವು ಜೀವಗಳನ್ನು  ಉಳಿಸಿದ್ದರು. ಅವರಿಲ್ಲದೇ ಹೋಗುತ್ತಿದ್ದರೆ ಇನ್ನೂ ಅನೇಕ ಜೀವಗಳು ಬಲಿಯಾಗುತ್ತಿದ್ದವು ಎಂದು ಗೋರಖ್ ಪುರದ ವೈದ್ಯ ಸಮುದಾಯವೇ ಹೇಳುತ್ತಿದೆ. ಆದರೆ ಇಂದು ಕಫೀಲ್ ಖಾನ್ ಜೈಲಿನಲ್ಲಿದ್ದಾರೆ. 

ತಾನು ಕರ್ತವ್ಯದಲ್ಲಿರದಿದ್ದರೂ ಆಸ್ಪತ್ರೆಗೆ ಧಾವಿಸಿದ್ದ ಕಫೀಲ್ ಖಾನ್ ಇಡೀ ರಾತ್ರಿ ಆಕ್ಸಿಜನ್ ಸಿಲಿಂಡರ್ ಗಾಗಿ ನಗರಗಳಲ್ಲಿ ಸುತ್ತಾಡಿದ್ದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು ಆಮ್ಲಜನಕದ ಸಿಲಿಂಡರ್ ಗಳಿಗೆ ಹಣ ಪಾವತಿಸದೆ ಸರಬರಾಜು ನಿಂತದ್ದೇ ಅವಘಡಕ್ಕೆ ಕಾರಣ ಎಂದು ತಿಳಿಸಿದ್ದರು. ನಂತರ ಕಫೀಲ್ ಖಾನ್ ರನ್ನು ಅಮಾನತುಗೊಳಿಸಲಾಯಿತು. ಈ ಸಂದರ್ಭ ಅವರು ಹೆದರಿಕೊಂಡಿದ್ದರು. "ಅವರು ನನ್ನ ಬೆನ್ನು ಹತ್ತಿದ್ದಾರೆ. ನನಗೆ ಮಾತನಾಡಲು ಸಾಧ್ಯವಿಲ್ಲ" ಎಂದು ಕಫೀಲ್ ಖಾನ್ ಆಪ್ತರೊಬ್ಬರಲ್ಲಿ ಹೇಳಿದ್ದರು ಎನ್ನಲಾಗಿದೆ. 

ಕಳೆದ ವರ್ಷದ ಸೆಪ್ಟಂಬರ್ ನಲ್ಲಿ ಅವರನ್ನು ಬಂಧಿಸಲಾಯಿತು. 2 ದಿನಗಳ ನಂತರ ಅವರನ್ನು ಜನರಲ್ ಕ್ರಿಮಿನಲ್ ವಾರ್ಡ್ ಗೆ ಸ್ಥಳಾಂತರಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಕಫೀಲ್ ಖಾನ್ ರನ್ನು ಭೇಟಿಯಾಗಲು ಯಾರೊಬ್ಬರನ್ನೂ ಬಿಡುತ್ತಿಲ್ಲ ಎನ್ನಲಾಗಿದೆ. ಕಫೀಲ್ ಖಾನ್ ಈಗಾಗಲೇ 6 ತಿಂಗಳುಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಅವರು ಜಾಮೀನು ಅರ್ಜಿಗಳು ತಿರಸ್ಕೃತಗೊಂಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News