ಸಫಾಯಿ ಕರ್ಮಚಾರಿಗಳ ಅಭಿವೃದ್ದಿಗೆ ಕಾಂಗ್ರೆಸ್ ಸರಕಾರ ಬದ್ಧ: ಎಂ.ಆರ್.ವೆಂಕಟೇಶ್

Update: 2018-03-17 14:40 GMT

ಮೈಸೂರು,ಮಾ.17: ಸಫಾಯಿ ಕರ್ಮಚಾರಿಗಳಿಗೆ ಸಿಗುವ ಹತ್ತು ಹಲವು ಯೋಜನೆಗಳು ಸರಿಯಾದ ರೂಪದಲ್ಲಿ ಅವರನ್ನು ತಲುಪಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್ ತಿಳಿಸಿದರು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಸಮಾಜಕಲ್ಯಾಣ ಇಲಾಖೆ ಜಿಲ್ಲಾ ನಗರಾಭಿವೃದ್ಧಿ ಕೋಶ, ಮೈಸೂರು ಜಿಲ್ಲೆ ಮತ್ತು ಚಾಮರಾಜನಗರ ಜಿಲ್ಲೆ, ಮೈಸೂರು ಮಹಾನಗರ ಪಾಲಿಕೆ, ಮೈಸೂರು ಹಾಗೂ ನಗರಸಭೆ, ಚಾಮರಾಜನಗರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಕಲಾಮಂದಿರದಲ್ಲಿ ನಡೆದ ಸಫಾಯಿ ಕರ್ಮಚಾರಿಗಳಿಗೆ ಅರಿವು ಮೂಡಿಸುವ ವಿಭಾಗೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. 

ಈಗಾಗಲೇ ಆರೇಳು ವಿಭಾಗದಲ್ಲಿ ಈ ಕಾರ್ಯಕ್ರಮ ಮಾಡಿದ್ದೇವೆ. ರೋಲ್ ಮಾಡೆಲ್ ಸರ್ಕಾರವಿದ್ದು, ಸಫಾಯಿ ಕರ್ಮಚಾರಿಗಳಿಗೆ ಸುವರ್ಣಯುಗವೆಂದೇ ಹೇಳಬಹುದು. ಸಫಾಯಿ ಕರ್ಮಚಾರಿಗಳಿಗೆ ನೀಡತಕ್ಕ ಸವಲತ್ತು, ಕಾರ್ಯಕ್ರಮ ಅವರಿಗೆ ಗೊತ್ತಾಗಬೇಕಿದೆ. ಸಫಾಯಿ ಕರ್ಮಚಾರಿಗಳಿಗೆ  ನ್ಯಾಯಯುತವಾಗಿ ಸಿಗಬೇಕಾದ ವೇತನ ಮತ್ತು ಇತರೆ ಭತ್ಯೆಗಳು ದೊರಕಬೇಕಿದೆ. ಖಾಯಂ ನೌಕರಿ ಯಾವುದೇ ಅಡೆತಡೆ ಇಲ್ಲದೇ ಸಾಗಬೇಕಿದೆ. ವೇತನ ಪ್ರತಿತಿಂಗಳು ಹತ್ತನೇ ತಾರೀಖಿನೊಳಗೆ ನೇರವಾಗಿ ಸಲ್ಲಬೇಕು. ಇಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ಸರ್ಕಾರ ನೀಡಿದೆ. ಅದನ್ನು ಅವರು ಸರಿಯಾಗಿ ಬಳಸಿಕೊಳ್ಳಬೇಕಿದೆ ಎಂದರು.

ದೆಹಲಿ, ಪಂಜಾಬ್ ರಾಜ್ಯಗಳಿಗೂ ಭೇಟಿ ನೀಡಿದ್ದೆ, ಅಲ್ಲಿನ ಸಫಾಯಿ ಕರ್ಮಚಾರಿಗಳಿಗೆ ಸಿಗುವ ವೇತನ 11,000ರೂ, ಇತರೆ ಸೌಲಭ್ಯ 2ಕೆಜಿ ಎಣ್ಣೆ, 2ಕೆಜಿ ಬೆಲ್ಲ. ಆದರೆ ನಮ್ಮ ರಾಜ್ಯದಲ್ಲಿ ವೇತನ 17,000ವಿದೆ. ಇದು ಹೋರಾಟ ಮತ್ತು ಶಿಫಾರಸುಗಳ ಫಲವಾಗಿದೆ. ಬೇರೆ ಯಾವ ರಾಜ್ಯದಲ್ಲೂ 9ಸಾವಿರಕ್ಕಿಂತ ಹೆಚ್ಚಿನ ವೇತನ ನೀಡಲ್ಲ. ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಸಫಾಯಿ ಕರ್ಮಚಾರಿಗಳಿಗೆ ಹೆಚ್ಚಿನ ವೇತನ ಲಭಿಸುತ್ತಿದೆ ಎಂದರು. ಉಪಹಾರ ಯೋಜನೆ, ಗೃಹಭಾಗ್ಯ ಯೋಜನೆಗಳನ್ನು ಕೂಡ ನೀಡಲಾಗುತ್ತಿದ್ದು, ಈ ಕುರಿತು ಅರಿವು ಮೂಡಿಸಿ ಸದುಪಯೋಗ ಪಡೆಯಿರಿ ಎಂದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಬಿ.ಭಾಗ್ಯವತಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಯೀಮಾ ಸುಲ್ತಾನ್ ನಜೀರ್ ಅಹಮದ್, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರುಗಳಾದ  ಜಿ.ಕೆ.ಮೀನಾಕ್ಷಮ್ಮ, ಗೋಕುಲ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗಾರಿ ಮಂಜು ಮತ್ತು ತಂಡದವರು ನಗಾರಿ ಬಾರಿಸುವ ಮೂಲಕ ಕಳೆತಂದುಕೊಟ್ಟರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News