ಚಿಕ್ಕಮಗಳೂರು: ಚುನಾವಣಾ ನೀತಿ ಸಂಹಿತೆ ಪ್ರತಿಯೊಬ್ಬರೂ ಪಾಲಿಸಬೇಕು; ಡಿಸಿ ಶ್ರೀರಂಗಯ್ಯ

Update: 2018-03-17 15:05 GMT

ಚಿಕ್ಕಮಗಳೂರು, ಮಾ.17: ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ನಂತರ ಪ್ರತಿಯೊಬ್ಬರೂ ಚುನಾವಣಾ ಆಯೋಗದ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಹೇಳಿದರು.

2018 ರ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣಾ ವೆಚ್ಚ ಮತ್ತು ಲೆಕ್ಕಪತ್ರಗಳ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾವುದೇ ಪಕ್ಷಗಳು ತಮ್ಮ ಪ್ರಚಾರಕ್ಕಾಗಿ ಸಾರ್ವಜನಿಕ ಸ್ಥಳಗಳು ಮತ್ತು ಖಾಸಗಿ ಸ್ಥಳಗಳಲ್ಲಿ ಅಳವಡಿಸಿದ ಬಿತ್ತಿ ಪತ್ರಗಳನ್ನು ಮತ್ತು ಬ್ಯಾನರ್ ಗಳನ್ನು ನೀತಿ ಸಂಹಿತೆ ಜಾರಿಗೊಂಡ ನಂತರ ಸ್ವತಃ ತೆರವುಗೊಳಿಸಲು ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ನೀತಿಗಳನ್ನು ಅನುಸರಿಸುವಂತೆ ತಿಳಿಸಿದರು.
ಮತದಾರರನ್ನು ಓಲೈಸುವ ಸಲುವಾಗಿ ಅವರಿಗೆ ಆಮಿಷವೊಡ್ಡುವುದು, ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ನಡೆಸುವುದು, ಪರಿಶಿಷ್ಠ ಜಾತಿ, ಪಂಗಡ, ಅಲ್ಪಸಂಖ್ಯಾತ ಮತ್ತು ಸ್ಲಂ ಪ್ರದೇಶಗಳಲ್ಲಿ ಇಂತಹದೇ ವ್ಯಕ್ತಿಗೆ ಮತದಾನ ಮಾಡುವಂತೆ ಒತ್ತಾಯಪಡಿಸುವಂತಿಲ್ಲ. ಕೋಮು ಪ್ರಚೋದಿತ ಹೇಳಿಕೆಗಳನ್ನು ನೀಡುವಂತಿಲ್ಲ. ಚುನಾವಣಾ ಪ್ರಚಾರಕ್ಕಾಗಿ ಸಾರ್ವಜನಿಕ ಸಮುದಾಯಗಳನ್ನು ಬಳಸಲು ಮುಂಚಿತವಾಗಿ ದಿನಾಂಕ, ಸ್ಥಳ, ನಿರ್ಬಂಧವಿರದ ಸ್ಥಳದ ಕುರಿತು ಮಾಹಿತಿ ನೀಡಿ ಅನುಮತಿ ಪಡೆಯಬೇಕು, ಮೊದಲು ಅನುಮತಿ ಕೋರಿದವರಿಗೆ ಆದ್ಯತೆಯಂತೆ ಸ್ಥಳ ನೀಡಲಾಗುವುದು ಎಂದರು. 

ಪ್ರಸ್ತುತ ಕೂಲಿ ಕಾರ್ಮಿಕರಿಗೆ ದಿನದಲ್ಲಿ ಅಥವಾ ವಾರದಲ್ಲಿ ನೀಡುತ್ತಿರುವ ಸಂಬಳವನ್ನಷ್ಟೇ ಚುನಾವಣಾ ಸಂದರ್ಭದಲ್ಲಿ ನೀಡಬೇಕು, ಇದರ ಹೊರತಾಗಿ ಮತದಾನದ ಆಮಿಷಕ್ಕಾಗಿ ಹೆಚ್ಚಿನ ಹಣ ನೀಡಿದ ಕುರಿತು ಮಾಹಿತಿ ತಿಳಿದು ಬಂದಲ್ಲಿ ಹಣ ನೀಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದ ಅವರು ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಾದ ನಂತರ ಮದ್ಯ ಮಾರಾಟದ ಬಗ್ಗೆ ನಿಗಾ ವಹಿಸಲಾಗುವುದು ಎಂದರು.

ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರದಲ್ಲಿನ ಮತದಾರರ ಪಟ್ಟಿಯನ್ನು ಸಂಬಂಧಪಟ್ಟ ಎಲ್ಲಾ ಕಛೇರಿಗಳಲ್ಲಿ ಪ್ರಕಟಿಸಲಾಗಿದ್ದು, ನ್ಯೂನ್ಯತೆ ಬಗ್ಗೆ ಪರಿಶೀಲಿಸಲು ತಹಸೀಲ್ದಾರ್ ಹಾಗೂ ಬಿ.ಎಲ್.ಒ ಗಳಿಗೆ ಸೂಚಿಸಿದ್ದು ಈವರೆಗೆ ಯಾವುದೇ ನ್ಯೂನ್ಯತೆಗಳ ಬಗ್ಗೆ ಮಾಹಿತಿ ಬಂದಿಲ್ಲ ಎಂದರು.

ಈಗಾಗಲೇ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‍ಗಳ ಪ್ರಥಮ ಹಂತದ ತಪಾಸಣೆಯನ್ನು ರಾಜಕೀಯ ಮುಖಂಡರ ಸಮ್ಮುಖದಲ್ಲಿ ನಡೆಸಲಾಗಿದೆ. ಮತದಾರರ ಪಟ್ಟಿ ನ್ಯೂನ್ಯತೆ ಕುರಿತು ಪರಿಶೀಲನೆ ಕೈಗೊಳ್ಳಲು ತಹಸೀಲ್ದಾರ್ ಹಾಗೂ ಬಿ.ಎಲ್.ಒ ಗಳಿಗೆ ಸೂಚಿಸಲಾಗಿದೆ, ಮತಪಟ್ಟಿ ಕುರಿತು ನ್ಯೂನ್ಯತೆಗಳಿದ್ದಲ್ಲಿ ರಾಜಕೀಯ ಮುಖಂಡರು ಮತ್ತು ಮಾಧ್ಯಮ ಪ್ರತಿನಿಧಿಗಳು ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.

ಚುನಾವಣೆ ನಡೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಸುವ್ಯವಸ್ಥಿತವಾಗಿ ಚುನಾವಣಾ ಕಾರ್ಯ ನಡೆಯಲು ಪೂರ್ವ ಸಿದ್ದತೆಯಾಗಿ ಪಕ್ಷದ ಸಭೆಗಳಲ್ಲಿ ವಿಡಿಯೋ ಚಿತ್ರೀಕರಣ, ಗಡಿ ಪ್ರದೇಶಗಳಲ್ಲಿ ವಾಹನ ತಪಾಸಣೆ, ರಾಜಕೀಯ ಪ್ರತಿನಿಧಿಗಳ ಖರ್ಚು ವೆಚ್ಚದ ಕುರಿತು ಗಮನಹರಿಸುವುದು ಇತ್ಯಾದಿಯಾಗಿ ನಿರ್ವಹಿಸಲು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್.ಎಸ್.ಟಿ, ಎಂ.ಸಿ.ಸಿ, ವಿ.ಎಸ್.ಟಿ, ವಿ.ವಿ.ಟಿ, ಎಕ್ಸ್‍ಪಂಡಿಚರ್ ಮಾನಿಟರಿಂಗ್ ಟೀಮ್, ಅಕೌಂಟಿಂಗ್ ಟೀಮ್, ಎಂ.ಸಿ.ಸಿ ನೋಡಲ್ ಹಾಗೂ ಅಸಿಸ್ಟೆಂಟ್ ಎಕ್ಸ್ ಪೆಂಡಿಚರ್ ಅಬ್ಸರ್ವರ್ ಎಂಬ ತಂಡಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ ವಿವಿಧ ಪಕ್ಷಗಳ ಮುಖಂಡರಾದ ರಘು, ವರಸಿದ್ದಿ ವೇಣುಗೋಪಾಲ್, ಚಂದ್ರಪ್ಪ, ರೇಣುಕಾರಾಧ್ಯ, ಕೆ.ಟಿ ರಾಧಾಕೃಷ್ಣ ಮತ್ತು ಮಾಧ್ಯಮ ಪ್ರತಿನಿಧಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News