ಕಾಳು ಮೆಣಸು ಆಮದು ತಡೆಗೆ ಕೇಂದ್ರ ಸರಕಾರ ವಿಫಲ: ಆರೋಪ

Update: 2018-03-17 16:33 GMT

ಕೇಂದ್ರದ ವಾಣಿಜ್ಯ ನೀತಿ ವಿರುದ್ಧ ಬೆಳೆಗಾರರ ಆಕ್ರೋಶ
ಆಮದುದಾರರ ದಂಧೆಗೆ ಸಚಿವರು, ಸಂಸದರು, ಅಧಿಕಾರಿಗಳು ಸಾಥ್: ಆರೋಪ


ಚಿಕ್ಕಮಗಳೂರು, ಮಾ.16: ಕಾಳು ಮೆಣಸು ಧಾರಣೆ ಕುಸಿತದಿಂದ ಮಲೆನಾಡಿನ ಕಾಫಿ ಬೆಳಗಾರರ ಬದುಕು ಅತಂತ್ರಗೊಂಡಿದ್ದು, ವಿದೇಶಗಳಿಂದ ಆಮದಾಗುತ್ತಿರುವ ಕಳಪೆ ಗುಣಮಟ್ಟದ ಕಾಳು ಮೆಣಸು ಆಮದು ತಡೆಗೆ ಕೇಂದ್ರದ ಸರಕಾರ ನಿರ್ಲಕ್ಷ್ಯ ವಹಿಸಿದೆ. ಇದರ ವಿರುದ್ಧ ಕೇಂದ್ರದ ವಾಣಿಜ್ಯ ಇಲಾಖೆ ಇನ್ನು 15 ದಿನದೊಳಗೆ ಕ್ರಮವಹಿಸದಿದ್ದಲ್ಲಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಬಂದ್‍ಗೆ ಕರೆ ನೀಡಿ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ಗ್ರೋವರ್ಸ್ ಸಂಘದ ಜಿಲ್ಲಾ ಸಂಘಟನಾ ಕರ್ಯದರ್ಶಿ ಡಿ.ಎಂ.ವಿಜಯ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ವಾಣಿಜ್ಯ ನೀತಿಯಿಂದಾಗಿ ವಿಯಾಟ್ನಾಂ, ಇಂಡೋನೇಶಿಯಾ, ಶ್ರೀಲಂಕಾಗಳಿಂದ ಕಳಪೆ ಗುಣಮಟ್ಟದ ಕಾಳು ಮೆಣಸು ದೇಶಕ್ಕೆ ಆಮದಾಗುತ್ತಿದ್ದು, ಇದರ ಪರಿಣಾಮವಾಗಿ ಸ್ಥಳೀಯವಾಗಿ ಬೆಳೆಯುವ ಉತ್ತಮ ಗುಣಮಟ್ಟದ ಕಾಳು ಮೆಣಸನ್ನು ಕೊಳ್ಳುವವರಿಲ್ಲದಂತಾಗಿದ್ದು, ಧಾರಣೆ ಪ್ರತಿದಿನ ಕುಸಿತ ಕಾಣುತ್ತಿದೆ. ಪರಿಣಾಮ ಚಿಕ್ಕಮಗಳೂರು, ಮಡಿಕೇರಿ, ಹಾಸನ, ಶಿವಮೊಗ್ಗ ಜಿಲ್ಲೆಗಳ ಕಾಫಿ ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿ ಬದುಕುವಂತಾಗಿದ್ದು ಕಾಳು ಮೆಣಸಿಗೆ ಕನಿಷ್ಠ ಬೆಲೆಯೂ ಇಲ್ಲದೇ ಬೆಳೆ ಬೆಳೆಯಲು ಮಾಡಿದ ಖರ್ಚೂ ಕೈ ಸೇರುತ್ತಿಲ್ಲ. ಒಂದು ಎಕರೆಯಲ್ಲಿ ಕಾಳು ಮೆಣಸು ಬೆಳೆಯಲು ವಾರ್ಷಿಕ 70 ಸಾವಿರ ರೂ. ಖರ್ಚಾಗುತ್ತಿದ್ದು, 7-8 ಕ್ವಿಂಟಾಲ್ ಬೆಳೆ ಬೆಳೆಯುವುದು ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಧಾರಣೆ ಕುಸಿತದಿಂದಾಗಿ ಬೆಳೆಗಾರರಿಗೆ ಅಸಲೂ ಕೈಸೇರದಂತಾಗಿದ್ದು, ಬೆಳೆಗಾರರನ್ನೇ ನೆಚ್ಚಿಕೊಂಡು  ಬದುಕುತ್ತಿರುವ ಕೃಷಿ ಕಾರ್ಮಿಕರಿಗೆ ವೇತನ ನೀಡಲೂ ಸಾಧ್ಯವಾಗುತ್ತಿಲ್ಲ. ಬ್ಯಾಂಕ್‍ಗಳ ಸಾಲ ಮರುಪಾವತಿ ಮಾಡಲೂ ಸಾಧ್ಯವಾಗುತ್ತಿಲ್ಲ. ಬೆಲೆ ಕುಸಿತದಿಂದಾಗಿ ಬೆಳೆಗಾರರು ಕೃಷಿ ಕೈಬಿಟ್ಟು ಕಾಫಿ ತೋಟಗಳನ್ನು ಮಾರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೋಂ ಸ್ಟೇಗಳಂತಹ ಪರ್ಯಾಯ ಉದ್ಯೋಗಗಳತ್ತ ಮುಖಮಾಡುವಂತಾಗಿದೆ. ಬೆಳೆಗಾರರ ಪರಿಸ್ಥಿತಿಯ ಬಗ್ಗೆ ಈ ಭಾಗದ ಶಾಸಕರು, ಸಚಿವರು, ಸಂಸದರಿಗೆ ಅರಿವಿದ್ದರೂ ಆಮದುದಾರರೊಂದಿಗೆ ಶಾಮೀಲಾಗಿರುವ ಇವರು ಬೆಳೆಗಾರರ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಕಾಳು ಮೆಣಸು ಧಾರಣೆ ಪ್ರತಿದಿನ ಕುಸಿತ ಕಾಣುತ್ತಿದ್ದು, ಕೇಂದ್ರದ ಸಚಿವರು, ಅಧಿಕಾರಿಗಳು, ಸಂಸದರು ಈ ಧಂದೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆಂದು ಆರೋಪಿಸಿದ ಅವರು, ಇನ್ನು 15 ದಿನದೊಳಗೆ ಆಮದು ತಡೆಗೆ ಕ್ರಮ ವಹಿಸದಿದ್ದಲ್ಲಿ ಕೆಜಿಎಫ್ ವತಿಯಿಂದ ಕೊಡಗು, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗೆ ಜಿಲ್ಲೆಗಳ ಬಂದ್‍ಗೆ ಕರೆ ನೀಡಲಾಗುವುದು ಎಂದು ಅವರು ಇದೇ ವೇಳೆ ಎಚ್ಚರಿಸಿದರು.

ಬೆಳೆಗಾರರ ಸಂಘದ ಸದಸ್ಯ ಭೋಜೇಗೌಡ ಮಾತನಾಡಿ, ದೇಶದಲ್ಲಿ 60 ಸಾವಿರ ಟನ್ ಕಾಳು ಮೆಣಸು ಉತ್ಪಾದನೆಯಾಗುತ್ತಿದ್ದು, ಆಂತರಿಕವಾಗಿ 50 ಸಾವಿರ ಟನ್ ಬಳಕೆಯಾಗುತ್ತಿದೆ. ಯೂರೋಪ್ ದೇಶಗಳಲ್ಲಿ ನಮ್ಮ ದೇಶದ ಮೆಣಸಿಗೆ ಭಾರೀ ಬೇಡಿಕೆ ಇದ್ದು, ಹಿಂದೆ ದೇಶೀಯವಾಗಿ ಉಪತಾದನೆಯಾದ ಮೆಣಸುನ್ನು ರಫ್ತು ಮಾಡುತ್ತಿದ್ದುದರಿಂದ ಉತ್ತಮ ಬೆಲೆ ಇತ್ತು. ಸದ್ಯ ವಿದೇಶಿ ಕಾಳು ಮೆಣಸನ್ನು ಸ್ಥಳೀಯ ಉತ್ತಮ ಗುಣಮಟ್ಟದ ಮೆಣಸಿನೊಂದಿಗೆ ಮಿಶ್ರಣ ಮಾಡುತ್ತಿರುವ ಆಮದು ರಫ್ತು ವಹಿವಾಟುದಾರ ಈ ದಂಧೆಯಿಂದಾಗಿ ಸ್ವದೇಶಿ ಕಾಳು ಮೆಣಸಿಗೆ ಧಾರಣೆ ಕುಸಿತವಾಗಿದೆ. ಈ ಧಂಧೆಯಿಂದಾಗಿ ಆಮದುದಾರರಿಗೆ, ದಲ್ಲಾಳಿಗಳಿಗೆ ಮಾತ್ರ ಲಾಭವಾಗುತ್ತಿದ್ದು, ಬೆಳೆಗಾರರಿಗೆ ವಂಚನೆಯಾಗುತ್ತಿದೆ. ಈ ಸಮಸ್ಯೆ ಸಂಬಂಧ ಮೂರು ರಾಜ್ಯಗಳ ಬೆಳೆಗಾರರ ನಿಯೋಗ ಕೇಂದ್ರ ಸರಕಾರದ ವಾಣಿಜ್ಯ ಮಂತ್ರಿಗಳನ್ನು ಭೇಟಿ ಮಾಡಿದಾಗ, ಆಮದು ಶುಲ್ಕ ಹೆಚ್ಚಿಸಿ ದಂಧೆಗೆ ಕಡಿವಾಣ ಹಾಕಲಾಗುವುದೆಂಬ ಭರವಸೆ ನೀಡಲಾಗಿದ್ದು, ಆದರೆ ಈ ಭರವಸೆ ಸುಳ್ಳಾಗಿದ್ದು, ಆಮದು ತಡೆಗೆ ಕೇಂದ್ರ ಸರಕಾರ ಯಾವುದೇ ಕ್ರಮವಹಿಸಿಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಬೆಳೆಗಾರರ ಸಂಘದ ನರೇಂದ್ರ, ಕೃಷ್ಣೇಗೌಡ, ಶಂಕರೇಗೌಡ, ಸುರೇಶ್, ಲವ, ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

ಕಾಫಿಯೊಂದಿಗೆ ಚಿಕೋರಿ ಮಿಶ್ರಣದಂಧೆ ತಡೆಗೆ ಸೂಕ್ತ ಕಾನೂನು ಅಗತ್ಯ
ರಾಜ್ಯದ ಕಾಫಿ ಉದ್ಯಮ ಮಳೆ ಕೊರತೆ, ಹವಾಮಾನ ವೈಪರೀತ್ಯದಿಂದಾಗಿ ಬಾರೀ ನಷ್ಟ ಅನುಭವಿಸುತ್ತಿದೆ. ಇದರಿಂದಾಗಿ ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಹಂತದಲ್ಲಿದ್ದಾರೆ. ದೇಶದಲ್ಲಿ ಕಾಫಿಯೊಂದಿಗೆ ಚಿಕೋರಿಯನ್ನು ಅತೀಯಾಗಿ ಮಿಶ್ರಣ ಮಾಡಿ ಗ್ರಾಹಕರನ್ನು ವಂಚಿಸುತ್ತಿರುವ ದಂಧೆ ನಡೆಯುತ್ತಿದೆ. ಮಲೆನಾಡಿನ ಕೆಲ ಕಾಫಿ ಮಿಲ್‍ಗಳೂ ಈ ದಂಧೆಯಲ್ಲಿ ನಿರತರಾಗಿ ಹಣ ಮಾಡುತ್ತಿದ್ದಾರೆ. ಇದರಿಂದಾಗಿ ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಡಿಮೆ ಬೆಲೆಗೆ ಸಿಗುವ ಚಿಕೋರಿಯ ಅತೀಯಾದ ಮಿಶ್ರಣದಿಂದ ಕಾಫಿಗೂ ಸೂಕ್ತ ಬೆಲೆ ಇಲ್ಲದಂತಾಗಿದ್ದು, ಕಾಫಿ ಉದ್ಯಮ ನೆಲಕಚ್ಚುವ ಸ್ಥಿತಿ ಬಂದೊದಗಿದೆ. ಕಾಫಿ ಪುಡಿಯೊಂದಿಗೆ ನಿಗದಿ ಪ್ರಮಾಣಕ್ಕಿಂತ ಅತಿಯಾಗಿ ಚಿಕೋರಿ ಮಿಶ್ರಣ ತಡೆಗೆ ಸರಕಾರ ಕ್ರಮವಹಿಸಬೇಕು. ಇದರಿಂದಾಗಿ ಎಲ್ಲರೂ ಉತ್ತಮ ಗುಣಮಟ್ಟದ ಕಾಫಿ ಸೇವೆನೆ ಸಾಧ್ಯವಾಗುತ್ತದೆ. ಇದರಿಂದಾಗಿ ಕಾಫಿಗೆ ಉತ್ತಮ ಧಾರಣೆ ಬರಲಿದ್ದು, ಉದ್ಯಮವೂ ಚೇತರಿಸಿಕೊಳ್ಳಲಿದೆ.
- ಮೋಹನ್‍ಗೌಡ, ಕೆಜಿಎಫ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News