ಮಾಲಿನ್ಯ ತಡೆ ಹೆಸರಲ್ಲಿ ಮಾವಿನ ಮರ ಉರಿಸುವ ಯಜ್ಞ!

Update: 2018-03-19 04:09 GMT

ಮೀರಠ್,ಮಾ.19: ಇಲ್ಲಿನ ಭೈನ್‍ಸಾಲಿ ಮೈದಾನದಲ್ಲಿ ರವಿವಾರ ಮುಂಜಾನೆ ಒಂಬತ್ತು ದಿನಗಳ ಮಹಾಯಾಗವನ್ನು ವಾರಣಾಸಿಯ 350ಕ್ಕೂ ಹೆಚ್ಚು ಮಂದಿ ಬ್ರಾಹ್ಮಣರು ಆರಂಭಿಸಿದ್ದು, ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ ಆರಂಭಿಸಿರುವ ಈ ಮಹಾಯಾಗದಲ್ಲಿ 500 ಕ್ವಿಂಟಲ್‍ನಷ್ಟು ಮಾವಿನ ಮರ ಆಹುತಿಯಾಗಲಿದೆ.

ಅಚ್ಚುತಾನಂದಿ ಮಹಾಯಾಗ ಸಮಿತಿ ಇದನ್ನು ಆಯೋಜಿಸಿದ್ದು, ಈ ಬೃಹತ್ ಯಾಗಕ್ಕಾಗಿ 108 ಯಜ್ಞಕುಂಡಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ 125/ 125 ಅಡಿಯ ಬೃಹತ್ ಯಾಗಶಾಲೆ ನಿರ್ಮಾಣವಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಉತ್ತರ ಪ್ರದೇಶ ಪರಿಸರ ಮಾಲಿನ್ಯ ಮಂಡಳಿ, ಪ್ರತಿಕ್ರಿಯಿಸಲು ನಿರಾಕರಿಸಿದೆ. ನಿರ್ದಿಷ್ಟ ಧರ್ಮಕ್ಕೆ ಸೇರಿದ ವಿಚಾರ ಎಂದು ಸುಮ್ಮನಾಗಿದೆ. ಈ ಬಗ್ಗೆ ಯಾವುದೇ ವಿಚಾರಣೆ ನಡೆಸಲಾಗದು ಎಂದು ಕೈಚೆಲ್ಲಿದೆ.

"ಇಷ್ಟು ದೊಡ್ಡ ಪ್ರಮಾಣದಲ್ಲಿ ಮರವನ್ನು ಉರಿಸುವುದು ಖಂಡಿತವಾಗಿಯೂ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಆದರೆ ಈ ಬಗ್ಗೆ ತನಿಖೆ ನಡೆಸಲು ಯಾವುದೇ ಸೂಕ್ತ ಕಾನೂನುಗಳಿಲ್ಲ. ಆದ್ದರಿಂದ ನಾವು ಏನೂ ಮಾಡಲಾಗದು. ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಾನು ಸೂಕ್ತ ವ್ಯಕ್ತಿಯಲ್ಲ" ಎಂದು ಮಂಡಳಿಯ ಪ್ರಾದೇಶಿಕ ಅಧಿಕಾರಿ ಆರ್.ಕೆ.ತ್ಯಾಗಿ ಹೇಳಿದ್ದಾರೆ.

ಕೇಸರಿ ರುಮಾಲು ಸುತ್ತಿಕೊಂಡು ಯಜ್ಞಕುಂಡದ ಸುತ್ತ ಕುಳಿತಿರುವ ಪುರೋಹಿತರಲ್ಲಿ ಕೆಲವರು 16 ವರ್ಷದ ಯುವಕರೂ ಇದ್ದು, ಹೊಗೆ ಮತ್ತು ಧಗೆಯಿಂದ ಇವರ ಕಣ್ಣುಗಳು ಕೆಂಡದುಂಡೆಗಳಂತಾಗಿದ್ದು, ಧಾರಾಕಾರವಾಗಿ ಕಣ್ಣುಗಳಿಂದ ನೀರು ಸುರಿಯುತ್ತಿದೆ. ಮಾವಿನ ಕಟ್ಟಿಗೆ, ತುಪ್ಪ ಹಾಗೂ ಹಾಲಿನ ಆಹುತಿಯನ್ನು ಯಜ್ಞಕುಂಡಗಳಲ್ಲಿ ನೀಡಲಾಗುತ್ತಿದೆ ಎಂದು ಯಾಜ್ಞಿಕರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News