ಸರಕಾರದ ಸೌಲಭ್ಯ ಪಡೆದು ಆರ್ಥಿಕವಾಗಿ ಸದೃಢರಾಗಿ : ತೆಕ್ಕಡೆ ಶೋಭಾ ಮೋಹನ್ ಕರೆ

Update: 2018-03-19 10:42 GMT

ಮಡಿಕೇರಿ, ಮಾ.19 : ಮಹಿಳೆಯರು ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ತಾ.ಪಂ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್ ಕರೆ ನೀಡಿದ್ದಾರೆ.

ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಬಾಲಭವನದಲ್ಲಿ ನಡೆದ ಸ್ತ್ರೀಶಕ್ತಿ ಗುಂಪಿನವರು ತಯಾರಿಸಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಸಂಘ ಸಂಸ್ಥೆಗಳ ಮೂಲಕ ಹೆಚ್ಚು ಕಾರ್ಯಪ್ರವೃತ್ತರಾಗಿದ್ದು, ಆರ್ಥಿಕವಾಗಿ ಅಭಿವೃದ್ಧಿಯನ್ನು ಕಾಣುತ್ತಿದ್ದಾರೆ. ಮಹಿಳೆಯರ ಕೌಶಲ್ಯವನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಇವುಗಳನ್ನು ಸದುಪಯೋಗ ಪಡಿಸಿಕೊಳ್ಳುವುದರೊಂದಿಗೆ ಸ್ವಂತ ಉದ್ಯೋಗ ಮಾಡುವ ಮೂಲಕ ಆರ್ಥಿಕ ಭದ್ರತೆಯನ್ನು ಕಂಡು ಕೊಳ್ಳಬೇಕೆಂದರು.

ಸಮಾಜಕ್ಕೆ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಎಲ್ಲರ  ಮೇಲಿದ್ದು, ಮತದಾನದಲ್ಲಿ ಪ್ರತಿಯೊಬ್ಬರು  ಪಾಲ್ಗೊಳ್ಳಬೇಕೆಂದು ಶೋಭಾ ಮೋಹನ್ ಕರೆ ನೀಡಿದರು. 

ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಮಾತನಾಡಿ ಮಾನಸಿಕ ಧೈರ್ಯ ಮತ್ತು ಸಾಧಿಸುವ ಛಲವನ್ನು ಹೊಂದುವ ಮೂಲಕ ಮಹಿಳೆಯರು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವುದರೊಂದಿಗೆ ಮಾರ್ಗದರ್ಶಕರಾಗಬೇಕು ಎಂದರು.

ತಾ.ಪಂ. ಕಾರ್ಯನಿರ್ವಣಾಧಿಕಾರಿ ಪಿ.ಲಕ್ಷ್ಮಿ ಮಾತನಾಡಿ ಇತರ ಪ್ರದೇಶಗಳಿಗಿಂತ ಕೊಡಗಿನ ವಹಿಳೆಯರಿಗೆ ಹೆಚ್ಚು ಸ್ವಾತಂತ್ರ್ಯವಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಸಾಧನೆ ಮಾಡುವಂತೆ ಕರೆ ನೀಡಿದರು. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಬಳಿಕೆಯಿಂದ ಕೃಷಿ ಕ್ಷೇತ್ರಗಳಲ್ಲಿ ಹೆಚ್ಚು ಲಾಭಗಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಹಿಳಾ ಗುಂಪುಗಳು ಆಸಕ್ತಿ ತೋರಬೇಕೆಂದರು. ಇಂದು ಮಹಿಳೆಯರ ಅಭಿವೃದ್ಧಿಗಳಿಗಾಗಿ ಹಲವು ಯೋಜನೆಗಳಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹೆಚ್ಚಿನ ಮಾಹಿತಿಯನ್ನು ಪಡೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತೆ ಲಕ್ಷ್ಮಿ ಸಲಹೆ ನೀಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಮಯಂತಿ ಮಾತನಾಡಿ ಸ್ತ್ರೀ ಶಕ್ತಿ ಗುಂಪುಗಳ ಮೂಲಕ ಮಹಿಳೆಯರನ್ನು ಸಂಘಟಿಸಲಾಗುತ್ತಿದ್ದು, ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಮಹಿಳೆಯರ ಪ್ರಗತಿ ಸಾಧ್ಯವೆಂದರು. ಮಹಿಳೆಯರು ಸಮಾಜಿಕ, ಆರ್ಥಿಕ ಹಾಗೂ ಮಾನಸಿಕವಾಗಿ ಸಬಲೀಕರಣಗೊಳ್ಳುವಂತೆ ತಿಳಿಸಿದ ಅವರು ಕೊಡಗಿನಂತಹ ಪ್ರದೇಶದಲ್ಲಿ ಪ್ರಗತಿ ಸಾಧನೆ ಸುಲಭವೆಂದು ಅಭಿಪ್ರಾಯಪಟ್ಟರು. 

ಇದೇ ಸಂದರ್ಭ ಮತದಾನದ ಕುರಿತು ಮಹಿಳೆಯರಿಗೆ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ವಿವಿಧ ಸ್ತ್ರೀಶಕ್ತಿ ಸಂಘಗಳು ತಾವು ಬೆಳೆದ ಸೊಪ್ಪು, ತರಕಾರಿ, ಹೂವಿನ ಗಿಡ ಹಾಗೂ ತಾವು ತಯಾರಿಸಿದ ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಎರಡು ದಿನಗಳ ಕಾಲ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. 
 ಸ್ತ್ರೀಶಕ್ತಿ ತಾಲ್ಲೂಕು ಒಕ್ಕೂಟದ ಅಧ್ಯಕ್ಷರಾದ ಕವಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲೇಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News