ತುಮಕೂರು ಎಸಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

Update: 2018-03-20 11:15 GMT

ತುಮಕೂರು, ಮಾ. 20: ತಮ್ಮ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿಪಾಸ್ತಿ ಸಂಪಾದಿಸಿದ್ದಾರೆಂಬ ಆರೋಪದ ಮೇಲೆ ಮಂಗಳವಾರ ಬೆಳಗ್ಗೆ ತುಮಕೂರು ಉಪವಿಭಾಗಾಧಿಕಾರಿ ಮನೆ, ಕಚೇರಿ ಹಾಗೂ ವಸತಿ ಗೃಹ ಸೇರಿದಂತೆ ಏಕಕಾಲಕ್ಕೆ ಮೂರು ಕಡೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ.

ವರ್ಷದ ತೊಡಕು ದಿನವಾದ ಮಂಗಳವಾರ ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ ಅವರಿಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಶಾಕ್ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿರುವ ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ ಅವರ ಕಚೇರಿ ಮೇಲೆ ದಾವಣಗೆರೆ ಎಸಿಬಿ ಇನ್ಸ್‍ಪೆಕ್ಟರ್ ಅಡವೀಶ್ ಗದ್ದಿಗೆ ಕೊಪ್ಪ ಅವರ ನೇತೃತ್ವದಲ್ಲಿ ಹಾಗೂ ಸಿರಾಗೇಟ್ ಸಮೀಪವಿರುವ ಅವರ ನಿವಾಸದ ಮೇಲೆ ಚಿತ್ರದುರ್ಗ ಎಸಿಬಿ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.ಚಿತ್ರದುರ್ಗದಲ್ಲಿರುವ ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ ಅವರ ಎರಡು ನಿವಾಸಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲಾತಿಗಳ ತಪಾಸಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

ತುಮಕೂರು ಎಸಿಯಾಗಿರುವ ತಿಪ್ಪೇಸ್ವಾಮಿ ಹಿಂದೆ ತುಮಕೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ 1999-2000 ರವರೆಗೆ ಒಂದು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಹಿರಿಯೂರು ತಹಶೀಲ್ದಾರ್ ಆಗಿ ನಂತರ ಚಿತ್ರದುರ್ಗದ ಉಪವಿಭಾಗಾಧಿಕಾರಿಯಾಗಿದ್ದರು. ಅದೇ ಸಮಯದಲ್ಲಿ ಲಂಚ ಪ್ರಕರಣವೊಂದರಲ್ಲಿ ಸಿಕ್ಕಿ ಬಿದ್ದು ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ನೆಲಮಂಗಲಕ್ಕೆ ಪನಿಷ್ಮೆಂಟ್ ವರ್ಗಾವಣೆ ಮಾಡಲಾಗಿತ್ತು. ನಂತರ ತುಮಕೂರು ಉಪವಿಭಾಗಾಧಿಕಾರಿಯಾಗಿ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತಮ್ಮ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ  ಏಕಕಾಲಕ್ಕೆ ತುಮಕೂರು ಮತ್ತು ಚಿತ್ರದುರ್ಗ ತಾಲೂಕಿನ ಬೆಳಗಟ್ಟ ಹಾಗೂ ದೊಡ್ಡ ಸಿದ್ದವ್ವನಹಳ್ಳಿ ಗ್ರಾಮಗಳಲ್ಲಿನ ಮನೆಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂರು ತಂಡಗಳಲ್ಲಿ ಡಿವೈಎಸ್ಪಿ ಮಂಜುನಾಥ್ ನೇತೃತ್ವ ವಹಿಸಿದ್ದಾರೆ.ಶಿರಾಗೇಟ್‍ನ ಅಧಿಕಾರಿಗಳ ವಸತಿ ಸಮುಚ್ಚಯದಲ್ಲಿರುವ ಅವರ ಮನೆಗೆ ಅಧಿಕಾರಿಗಳು ಹಣ ಎಣಿಸುವ ಮೆಷಿನ್ ತೆಗೆದುಕೊಂಡು ಹೋಗಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News