ಸಿದ್ದಗಂಗಾ ಶ್ರೀಗಳ 111ನೇ ಜನ್ಮಜಯಂತಿ: 10 ತಾಲೂಕುಗಳ 100ಕ್ಕೂ ಹೆಚ್ಚು ಸ್ಥಳಗಳಿಗೆ ಬೆಳ್ಳಿ ರಥಯಾತ್ರೆ

Update: 2018-03-20 11:25 GMT

ತುಮಕೂರು.ಮಾ.20:ಕರ್ನಾಟಕರತ್ನ, ತ್ರಿವಿಧ ದಾಸೋಹಿ, ಶತಾಯುಷಿ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ 111ನೇ ಜನ್ಮ ದಿನೋತ್ಸವದ ಅಂಗವಾಗಿ ಮಾರ್ಚ್ 22 ರಿಂದ 31ರವರೆಗೆ 10 ದಿನಗಳ ಕಾಲ ಸ್ವಾಮೀಜಿ ಅವರ ಪುತ್ಥಳಿಯನ್ನು ಒಳಗೊಂಡ ರಥಯಾತ್ರೆ ಸಂಚರಿಸಲಿದೆ ಎಂದು ಭಗತ್ ಕ್ರಾಂತಿ ಸೇನೆಯ ಅಧ್ಯಕ್ಷ ಆರಾಧ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮಾರ್ಚ್ 22ರ ಬೆಳಗ್ಗೆ 9 ಗಂಟೆಗೆ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿದ ಸ್ವಾಮ್ಭಿಜಿಯವರ ಪುತ್ಥಳಿಯನ್ನು ಒಳಗೊಂಡ ರಥಯಾತ್ರೆಗೆ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮಿಜೀ ಚಾಲನೆ ನೀಡಿದವರು ಎಂದರು.

ಮಾರ್ಚ್ 22 ರಂದು ಸಿದ್ದಗಂಗಾಮಠದಿಂದ ಹೊರಟ ರಥಯಾತ್ರೆ ಕೊರಟೆಗೆರೆ ತಾಲೂಕಿನ ಚಿಕ್ಕತೊಟ್ಲುಕೆರೆ, ಸಿದ್ದರಬೆಟ್ಟ, ತೋವಿನಕೆರೆ, ಮಲ್ಲೆಕಾವು, ತುಂಬಾಡಿ, ಹೊಳವನಹಳ್ಳಿ ಅಕ್ಕಿರಾಂಪುರ, ಮಧುಗಿರಿಯ ಪುರುವರ, ಕೊಡಿಗೇನಹಳ್ಳಿ,ಮಿಡಿಗೇಶಿ, ಪಾವಗಡ ತಾಲೂಕಿನ ವೆಂಕಟಾಪುರ, ಪಾವಗಡ, ನಾಗಲಮಡಿಕೆ, ರಂಗಸಮುದ್ರ, ಶಿರಾದ ಬರಗೂರು, ಅಮರಾಪುರ, ಆರೋಗೆರೆ, ಅಮಾಲಾಪುರ, ಶಿರಾಪಟ್ಟಣ, ಬಕ್ಕಾಪಟ್ಟಣ, ಚಿಕ್ಕನಾಯಕನಹಳ್ಳಿಯ ಕಂದಿಕೆರೆ, ಗೋಡೆಕೆರೆ, ಸಾಸಲು, ತಿಪಟೂರಿನ ಹಾಲುಕುರಿಕೆ, ಮತ್ತಿಘಟ್ಟ, ಹೊನ್ನವಳ್ಳಿ ಬಿದರೆಗುಡಿ,ರಂಗಾಪುರ, ನೊಣವಿನಕೆರೆ, ಕೆ.ಬಿ.ಕ್ರಾಸ್, ತುರುವೇಕೆರೆಯ ಬಾಣಸಂದ್ರ, ಹುಲ್ಲೆಕೆರೆ, ದಂಡಿನಶಿವರ, ಸಂಪಿಗೆ, ಗುಬ್ಬಿಯ ನಿಟ್ಟೂರು, ತ್ಯಾಗಟೂರು, ಬೆಟ್ಟದಹಳ್ಳಿ, ಹೊಸಕೆರೆ, ಚೇಳೂರು,  ತುಮಕೂರಿನ ಬೆಳ್ಳಾವೆ, ಭೀಮಸಂದ್ರ, ಗೂಳೂರು, ನಾಗವಲ್ಲಿ, ಹೆಬ್ಬೂರು, ಕುಣಿಗಲ್‍ನ ಎಡೆಯೂರು, ಚುಂಚನಗಿರಿ, ನೆಲಮಂಗಲ, ಟಿ.ಬೇಗೂರು, ದಾಬಸ್ ಪೇಟೆ, ಕ್ಯಾತ್ಸಂದ್ರ ಮೂಲಕ ಮಾರ್ಚ್ 31ರ ಮಧ್ಯಾಹ್ನ 3 ಗಂಟೆಗೆ ತುಮಕೂರು ನಗರ ತಲುಪಲಿದೆ ಎಂದು ಆರಾಧ್ಯ ವಿವರ ನೀಡಿದರು.
ಕಳೆದ ನಾಲ್ಕುವರ್ಷಗಳಿಂದ ಜನರಿಗೆ ಡಾ.ಶ್ರೀಶಿವಕುಮಾರಸ್ವಾಮೀಜಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.ಅಲ್ಲದೆ ಇಡೀ ಸಾಧು,ಸಂತರ ಕುಲಕ್ಕೆ ಮೇರು ಪರ್ವತದಂತಿರುವ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರು ಜನ್ಮದಿನವಾದ ಏಪ್ರಿಲ್ 1 ನ್ನು ಸಂತರ ದಿನವಾಗಿ ಭಕ್ತರು ಆಚರಿಸಬೇಕೆಂಬುದು ನಮ್ಮಗಳ ಕೋರಿಕೆಯಾಗಿದೆ.ಅಲ್ಲದೆ ಈ ದಿನದಂದು ಜಿಲ್ಲಾಡಳಿತ ಸ್ವಾಮೀಜಿಗಳ ಗೌರವಾರ್ಥ ಎಲ್ಲಾ ಇಲಾಖೆಗಳಿಗೆ ಒಂದು ದಿನದ ರಜೆ ಘೋಷಿಸಬೇಕೆಂದು ಭಗತ್ ಕ್ರಾಂತಿ ಸೇನೆಯ ಆರಾಧ್ಯ ಒತ್ತಾಯಿಸಿದರು.

ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ,ತುಮಕೂರು ನಗರದ ಎಲ್ಲಾ ಕೋಮಿನ ಮುಖಂಡರು ಸೇರಿ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಹುಟ್ಟು ಹಬ್ಬದ ಮುನ್ನಾದಿನವಾದ ಮಾರ್ಚ್ 31 ರಂದು ಸ್ವಾಮ್ಭಿಜಿಯವರ ಪುತ್ಥಳಿಯ ಹೂವಿನ ಮಂಟಪದಲ್ಲಿಟ್ಟು ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.ಅಂದು ಮಧ್ಯಾಹ್ನ 2 ಗಂಟೆಗೆ ಗಂಗೋತ್ರಿ ನಗರದಿಂದ 21 ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಆರಂಭವಾಗುವ ಮೆರವಣಿಗೆಯು ಎಸ್.ಐ.ಟಿ, ಎಸ್‍ಎಸ್.ಎಸ್.ಪ್ಮರಂ ಮುಖ್ಯರಸ್ತೆ, ಡಾ.ರಾಧಾಕೃಷ್ಣರಸ್ತೆ ಮೂಲಕ ಭದ್ರಮ್ಮ ವೃತ್ತ ತಲುಪಿ, ಕೆ.ಆರ್.ಬಡಾವಣೆ, ವಿವೇಕಾನಂದ ರಸ್ತೆ, ಟೌನ್‍ಹಾಲ್ ಮೂಲಕ ಸರಕಾರಿ ಜೂನಿಯರ್ ಕಾಲೇಜು ಮೈದಾನ ತಲುಪಲಿದೆ.ಮೆರವಣಿಗೆಗೆ ಬೆಳ್ಳಾವಿಯ ಶ್ರೀಕಾರದೇಶ್ವರ ವ್ಮಠದ ಶ್ರೀವೀರಬಸವೇಶ್ವರ ಸ್ವಾಮೀಜಿ,ಕುಂಚಟಿಗ ಮಹಾಸಂಸ್ಥಾನದ ಶ್ರೀಹನುಮಂತನಾಥಸ್ವಾಮೀಜಿ ಚಾಲನೆ ನೀಡುವರು.ಈ ವೇಳೆ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್,ಚಂದ್ರಮೌಳಿ,ಜೈನ ಸಮಾಜದ ಸುರೇಶ್,ವಿ.ಕೆ.ರಾಜಶೇಖರ್,ಬಾವಿಕಟ್ಟೆ ಮಂಜಣ್ಣ ಸೇರಿದಂತೆ ವಿವಿಧ ಕೋಮುಗಳ ಜನರು ಭಾಗವಹಿಸಲಿದ್ದಾರೆ.111 ವರ್ಷ ಪೂರೈಸಿರುವ ಸ್ವಾಮೀಜಿವರ ತ್ರಿವಿಧ ದಾಸೋಹವನ್ನು ಪರಿಗಣಿಸಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿನಯಜೈನ್,ಪಾಲಿಕೆ ಸದಸ್ಯ ಕರುಣಾರಾಧ್ಯ,ವಿಠಲ್,ಕೃಷ್ಣಮೂರ್ತಿ,ಸ್ವಾಮಿ, ಪೃಥ್ವಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News