ಮಾಹಿತಿ ಹಕ್ಕಿಗೆ ಬಂದಿದೆ ಸಂಚಕಾರ

Update: 2018-03-21 04:05 GMT

ಯುಪಿಎ ಅಧಿಕಾರಾವಧಿಯಲ್ಲಿ ಜಾರಿಗೆ ಬಂದ ಮಹತ್ವದ ಕಾಯ್ದೆ ‘ಮಾಹಿತಿ ಹಕ್ಕು’. ಪ್ರಜಾಸತ್ತೆಗೆ ಇದರಿಂದ ಜೀವ ಬಂತು. ಮತ ಹಾಕಿದ ಮತದಾರ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಪ್ರಶ್ನಿಸುವಂತಾದುದು ಮಾಹಿತಿ ಹಕ್ಕು ಜಾರಿಗೆ ಬಂದ ಬಳಿಕ. ಕಾಂಗ್ರೆಸ್ ಪಕ್ಷ ಮಹಾ ಭ್ರಷ್ಟ ಪಕ್ಷವೆಂದು ನಾವಿಂದು ದೂರುತ್ತಿದ್ದೇವೆಯಾದರೂ, ಈ ಭ್ರಷ್ಟಾಚಾರವನ್ನು ಪ್ರಶ್ನಿಸುವ ಅವಕಾಶವನ್ನು ಕೊಡಲು ಯುಪಿಎ ಸರಕಾರ ಹಿಂಜರಿಯಲಿಲ್ಲ. ಈ ಮಾಹಿತಿ ಹಕ್ಕು ತನಗೇ ತಿರುಗುಬಾಣವಾಗಬಹುದು ಎನ್ನುವುದು ಗೊತ್ತಿದ್ದರೂ ಅಂದಿನ ಮನಮೋಹನ್ ಸಿಂಗ್ ಸರಕಾರ ಯಶಸ್ವಿಯಾಗಿ ಮಾಹಿತಿ ಹಕ್ಕನ್ನು ಜಾರಿಗೊಳಿಸಿತು. ಈ ಮಾಹಿತಿ ಹಕ್ಕನ್ನು ಬಳಸಿಕೊಂಡೇ ಕಾರ್ಯಕರ್ತರು ಯುಪಿಎ ಸರಕಾರದ ಭ್ರಷ್ಟಾಚಾರಗಳನ್ನು ಬಯಲಿಗೆಳೆದರು. ಸರಕಾರ ಎಂದಿಗೂ ಜನಸಾಮಾನ್ಯರ ಈ ಹಕ್ಕನ್ನು ಮೊಟಕುಗೊಳಿಸುವ ಸರ್ವಾಧಿಕಾರಿ ಕೃತ್ಯಕ್ಕೆ ಇಳಿಯಲಿಲ್ಲ. ಆದರೆ ಮೋದಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಆ ಸರಕಾರವನ್ನು ಪ್ರಶ್ನಿಸುವುದೇ ‘ದೇಶದ್ರೋಹ’ವಾಗಿ ಬಿಟ್ಟಿದೆ. ಆರ್‌ಟಿಐ ಕಾರ್ಯಕರ್ತರ ಬದುಕೇ ಅಪಾಯದಲ್ಲಿ ಸಿಲುಕಿಕೊಂಡಿದೆ. ನೋಟು ನಿಷೇಧದ ಬಳಿಕ ಅತ್ಯಧಿಕ ಆರ್‌ಟಿಐ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಹೇಳುತ್ತಿದೆ ಸಮೀಕ್ಷೆ. ಇದೇ ಸಂದರ್ಭದಲ್ಲಿ ಮೋದಿ ಆಡಳಿತದಲ್ಲಿ ಆರ್‌ಟಿಐ ಕಾರ್ಯಕರ್ತರ ಕೊಲೆಗಳ ಸಂಖ್ಯೆಯೂ ಹೆಚ್ಚುತ್ತಿವೆೆ. ಎಲ್ಲೆಲ್ಲ ಬಿಜೆಪಿ ಆಡಳಿತದಲ್ಲಿದೆಯೋ ಆ ಸರಕಾರದ ಅಭಿವೃದ್ಧಿಯ ಕುರಿತಂತೆ ಮಾಹಿತಿ ಕೇಳಲು ಆರ್‌ಟಿಐ ಕಾರ್ಯಕರ್ತರು ಭಯಪಡಬೇಕಾದ ಸ್ಥಿತಿಯಲ್ಲಿದ್ದಾರೆ. ಗುಜರಾತ್‌ನ ಅಭಿವೃದ್ಧಿಯ ಕುರಿತಂತೆ ಮಾಹಿತಿ ಕೇಳಿದರೆ ಆತನಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಗುಜರಾತ್ ಮಾದರಿಯನ್ನು ಪ್ರಶ್ನಿಸಲು ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿದ್ದಕ್ಕಾಗಿ ಕೊಲೆಯಾದವರ ಸಂಖ್ಯೆ 11ನ್ನು ತಲುಪಿದೆ. ಈ ಬಗ್ಗೆ ಮಾನವ ಹಕ್ಕು ಆಯೋಗ ಈಗಾಗಲೇ ಗುಜರಾತ್ ಸರಕಾರಕ್ಕೆ ನೋಟಿಸೊಂದನ್ನು ನೀಡಿದೆ. ಬಹಿರಂಗವಾಗಿ ಕಾರ್ಯಕರ್ತರಿಗೆ ಜೀವ ಭಯ ಒಡ್ಡುವ ಮೂಲಕ ಮಾಹಿತಿ ಹಕ್ಕನ್ನು ಮೊಟಕು ಗೊಳಿಸಲು ಸರಕಾರ ಯೋಜನೆ ಹಾಕಿಕೊಂಡಿದೆ. ಇದೇ ಸಂದರ್ಭದಲ್ಲಿ ಒಳಗೊಳಗೆ ಮಾಹಿತಿ ಹಕ್ಕು ಕಾಯ್ದೆಯನ್ನು ಯಾವೆಲ್ಲ ರೀತಿಯಲ್ಲಿ ದುರ್ಬಲಗೊಳಿಸಲು ಸಾಧ್ಯವೋ ಅವೆಲ್ಲಾ ಪ್ರಯತ್ನವನ್ನು ಸರಕಾರ ಮಾಡುತ್ತಿದೆ. ತನ್ನ ಆಡಳಿತದ ವೈಫಲ್ಯದಿಂದ ಕುಗ್ಗಿ ಹೋಗಿರುವ ಮೋದಿ ನೇತೃತ್ವದ ಸರಕಾರಕ್ಕೆ ಮಾಹಿತಿ ಹಕ್ಕು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದುದರಿಂದಲೇ ಜನರಿಗೆ ಸರಿಯಾದ ಸಂದರ್ಭದಲ್ಲಿ, ಸರಿಯಾದ ಮಾಹಿತಿಗಳು ದೊರಕದಂತೆ ಮಾಡಲು ಹವಣಿಸುತ್ತಿದೆ.

ಇಂದು ದೇಶಾದ್ಯಂತ ಶೇ. 25ರಷ್ಟು ಮಾಹಿತಿ ಕಮಿಶನರ್‌ಗಳ ಹುದ್ದೆಗಳು ಖಾಲಿ ಇವೆ. ಹಾಗೆಯೇ ಸರಕಾರದ ನಿರ್ಲಕ್ಷದಿಂದ ಸಿಬ್ಬಂದಿಯ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಪರಿಣಾಮವಾಗಿ ಇತ್ಯರ್ಥವಾಗದ ಪ್ರಕರಣಗಳು ರಾಶಿ ಬಿದ್ದಿವೆ. ಅಧ್ಯಯನ ವರದಿಯ ಪ್ರಕಾರ ಖಾಲಿ ಹುದ್ದೆಗಳ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಏರಿದೆ ಮತ್ತು ಕಳೆದ ನಾಲ್ಕು ವರ್ಷಗಳಲ್ಲಿ ಇದು ಏರುತ್ತಲೇ ಹೋಗಿದೆ. ಇವೆಲ್ಲವನ್ನು ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್(ಸಿಎಚ್‌ಆರ್‌ಐ) ತನ್ನ ‘ಸ್ಟೇಟ್ ಆಫ್ ದಿ ಇನ್‌ಫಾರ್ಮೇಶನ್ ಕಮಿಶನ್ಸ್ ಆ್ಯಂಡ್ ದಿ ಯೂಸ್ ಆಫ್ ಆರ್‌ಟಿಐ ಅಕ್ರಾಸ್ ಇಂಡಿಯಾ’ ಕುರಿತಾದ ‘ರ್ಯಾಪಿಡ್ ರಿವ್ಯೆ 4.0’ ಎಂಬ ಅಧ್ಯಯನ ಬೆಳಕಿಗೆ ತಂದಿದೆ. ಮುಖ್ಯ ಮಾಹಿತಿ ಕಮಿಶನರ್‌ಗಳ ಹಲವಾರು ಹುದ್ದೆಗಳು ಖಾಲಿ ಬಿದ್ದಿವೆ ಮತ್ತು ಆ ಹುದ್ದೆಗಳಿಗೆ ಸೂಕ್ತ ವ್ಯಕ್ತಿಗಳ ನೇಮಕಾತಿ ನಡೆದಿಲ್ಲ ಎಂದು ಈ ಅಧ್ಯಯನ ಹೇಳಿದೆ. ಗುಜರಾತಿನಲ್ಲಿ ರಾಜ್ಯದ ಮುಖ್ಯ ಮಾಹಿತಿ ಕಮಿಶನರ್ ಇಲ್ಲ. ಮಹಾರಾಷ್ಟ್ರದಲ್ಲಿ 2017ರ ಜೂನ್ ತಿಂಗಳಿನಿಂದ ಓರ್ವ ಪ್ರಭಾರ ಕಮಿಶನರ್‌ನ್ನು ನೇಮಕಗೊಳಿಸಲಾಗಿದೆ. ಆಂಧ್ರ ಪ್ರದೇಶದಲ್ಲಿ ಮಾಹಿತಿ ಆಯೋಗವೇ ಇಲ್ಲ. ಇದರ ನೇರ ಪರಿಣಾಮ ಪ್ರಕರಣಗಳ ಮೇಲೆ ಬಿದ್ದಿದೆ. ದೇಶದಲ್ಲಿರುವ ಆರು ಅತ್ಯಂತ ದೊಡ್ಡ ಕಮಿಶನ್‌ಗಳು ಶೇ. 72ರಷ್ಟು ದೂರುಗಳನ್ನು ಇತ್ಯರ್ಥ ಪಡಿಸಲು ಅಸಾಧ್ಯವಾಗಿ ಕೂತಿವೆ. ಹಾಗೆ ಮಾಹಿತಿ ಹಕ್ಕು ಕಮಿಶನ್‌ಗಳಾಗಿ ಮಹಿಳೆಯರನ್ನು ನೇಮಕ ಮಾಡುವಲ್ಲೂ ಪೂರ್ವಾಗ್ರಹಗಳಿವೆ. ಈಗ ಸೇವೆ ಸಲ್ಲಿಸುತ್ತಿರುವ ಒಟ್ಟು ಮಾಹಿತಿ ಕಮಿಶನರ್‌ಗಳಲ್ಲಿ ಶೇ. 25ರಷ್ಟು ಮಾತ್ರ ಮಹಿಳೆಯರು ಎನ್ನುವುದೂ ಸಮೀಕ್ಷೆಯಿಂದ ಹೊರಬಿದ್ದಿದೆ. ಇನ್ನೊಂದು ಆತಂಕಕಾರಿ ಅಂಶಗಳೂ ಇದರ ಜೊತೆ ಜೊತೆಗೇ ಬಯಲಾಗಿದೆ. ಅದೇನೆಂದರೆ, ವರ್ಷದಿಂದ ವರ್ಷಕ್ಕೆ ಮಾಹಿತಿ ಹಕ್ಕುಗಳ ಅರ್ಜಿಗಳ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ. ಸಂಸ್ಥೆಯ ಅಧ್ಯಯನದ ಪ್ರಕಾರ ಇಷ್ಟರವರೆಗೆ ದೇಶದ ಜನಸಂಖ್ಯೆಯ 0.5 ಶೇಕಡಕ್ಕಿಂತಲೂ ಕಡಿಮೆ ಜನರು ಮಾಹಿತಿ ಹಕ್ಕನ್ನು ಬಳಸಿದ್ದಾರೆ. 2005 ಮತ್ತು 2017ರ ನಡುವೆ ದೇಶಾದ್ಯಂತ ಒಟ್ಟು 2.14 ಕೋಟಿ ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅತ್ಯಧಿಕ ಅರ್ಜಿಗಳು ಕೇಂದ್ರ ಸರಕಾರಕ್ಕೆ ಸಲ್ಲಿಕೆಯಾಗಿದ್ದರೆ, ಕರ್ನಾಟಕದಲ್ಲಿ 20.73 ಲಕ್ಷ ಮನವಿಗಳು ಸಲ್ಲಿಕೆಯಾಗಿದ್ದವು. ಅಂದರೆ ಮಾಹಿತಿ ಹಕ್ಕು ಪಡೆಯುವ ವಾತಾವರಣ ಕರ್ನಾಟಕದಲ್ಲಿ ಇನ್ನೂ ತುಸು ಜೀವ ಉಳಿಸಿಕೊಂಡಿದೆ. ಅತ್ಯಂತ ಕಡಿಮೆ ಮಾಹಿತಿ ಮನವಿಗಳು ಸಲ್ಲಿಸಿದ ರಾಜ್ಯ ಮಣಿಪುರ. ಹಾಗೆಯೇ ಬೇರೆ ಬೇರೆ ರಾಜ್ಯಗಳಲ್ಲಿ ಮಾಹಿತಿ ಹಕ್ಕು ಅರ್ಜಿಗಳು ಗಣನೀಯವಾಗಿ ಇಳಿಕೆಯಾಗಿವೆ. ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವುದು ಪ್ರಜಾಸತ್ತೆಯ ಉಳಿವಿನ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

ಒಂದೆಡೆ ಬಹಿರಂಗವಾಗಿ ಜೀವಬೆದರಿಕೆಗಳಿರುವುದರಿಂದ ಮಾಹಿತಿ ಹಕ್ಕು ಹೋರಾಟಗಾರರು ಇದರ ಹಿಂದೆ ಹೋಗಲು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ. ಉತ್ತರ ಭಾರತದಲ್ಲಿ ಇಂತಹ ಆತಂಕದ ವಾತಾವರಣ ಹೆಚ್ಚಿದೆ. ಜೊತೆಗೆ ಸಿಬ್ಬಂದಿಯ ಕೊರತೆಯಿಂದ ದೂರುಗಳೆಲ್ಲ ರಾಶಿ ರಾಶಿಯಾಗಿ ಫೈಲುಗಳ ನಡುವೆ ಸಿಕ್ಕು ಒದ್ದಾಡುತ್ತಿರುವುದರಿಂದ ಹೋರಾಟಗಾರರು ನಿರಾಶರಾಗಿದ್ದಾರೆ. ಹಾಗೆಯೇ ಅರ್ಜಿದಾರರನ್ನು ಉದ್ದೇಶಪೂರ್ವಕವಾಗಿ ಅಧಿಕಾರಿಗಳು ಸತಾಯಿಸುವುದು ಕೇಳಿ ಬರುತ್ತಿದೆ. ಇವೆಲ್ಲವನ್ನೂ ಸರಿಪಡಿಸುವುದು ಸರಕಾರಕ್ಕೂ ಬೇಕಾಗಿಲ್ಲ. ಅಥವಾ ಅದರ ಉದ್ದೇಶವೇ ಮಾಹಿತಿ ಹಕ್ಕು ಕಾನೂನನ್ನು ಈ ಮೂಲಕ ದುರ್ಬಲಗೊಳಿಸುವುದು. ಇಂದು ಸರಕಾರವನ್ನು ಪ್ರಶ್ನಿಸಲೇ ಬಾರದು ಎನ್ನುವಂತವಹ ವಾತಾವರಣ ಇದೆ. ಇಂತಹ ಸಂದರ್ಭದಲ್ಲಿ ಅವರಿಗೆ ಮಾಹಿತಿ ಹಕ್ಕು ಒಂದು ದೇಶವಿರೋಧಿ ಕಾನೂನಿನಂತೆ ಕಂಡರೆ ಅಚ್ಚರಿಯಿಲ್ಲ. ನೋಟು ನಿಷೇಧದ ಬಳಿಕ, ತಮ್ಮ ದೌರ್ಬಲ್ಯಗಳನ್ನು, ಸೋಲನ್ನು ಮುಚ್ಚಿ ಹಾಕಲು, ಮಾಹಿತಿ ಹಕ್ಕನ್ನೇ ನಿರಾಕರಿಸಿದ ನೂರಾರು ಪ್ರಕರಣಗಳು ನಮ್ಮ ಮುಂದಿವೆೆ. ಹೀಗೆ ಆದಲ್ಲಿ ಒಂದು ದಿನ ಅಧಿಕೃತವಾಗಿ ಈ ಕಾನೂನನ್ನು ಕೇಂದ್ರ ಸರಕಾರ ಕಿತ್ತು ಬಿಸಾಡಲಿದೆ. ನೂರಾರು ಅಕ್ರಮಗಳನ್ನು ಬಯಲಿಗೆಳೆದಿರುವ ಮಾಹಿತಿ ಹಕ್ಕು ಕಾಯ್ದೆ ಮತದಾರರ ಕೈಯಲ್ಲಿರುವ ಏಕಮಾತ್ರ ಅಸ್ತ್ರ. ಅದನ್ನು ಕಿತ್ತುಕೊಳ್ಳಲು ನಾವು ಯಾವ ಕಾರಣಕ್ಕೂ ಅವಕಾಶ ನೀಡಬಾರದು. ಹಲವು ಹೋರಾಟಗಳಿಗೆ ಕಾರಣವಾಗಿದೆ ಮಾಹಿತಿ ಹಕ್ಕು ಕಾನೂನು. ಇದೀಗ ಈ ಮಾಹಿತಿ ಹಕ್ಕಿನ ಉಳಿವಿಗಾಗಿಯೇ ಒಂದು ಹೋರಾಟ ನಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News