ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ಕೇಸ್

Update: 2018-03-22 06:50 GMT

ಜೋಧ್‌ಪುರ, ಮಾ.22: ಡಾ.ಭೀಮ ರಾವ್ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿರುವ ಭಾರತದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ವಿಶೇಷ ಎಸ್‌ಸಿ/ಎಸ್‌ಟಿ ನ್ಯಾಯಾಲಯ ಬುಧವಾರ ರಾಜಸ್ಥಾನ ಪೊಲೀಸರಿಗೆ ಆದೇಶ ನೀಡಿದೆ.

2017ರ ಡಿ.26 ರಂದು ಪಾಂಡ್ಯ ತನ್ನ ಟ್ವಿಟರ್ ಖಾತೆಯಲ್ಲಿ ಅಂಬೇಡ್ಕರ್‌ಗೆ ಅವಮಾನಿಸಿದ್ದಲ್ಲದೆ, ಅಂಬೇಡ್ಕರ್ ಸಮುದಾಯದ ಜನರ ಭಾವನೆಗೆ ನೋವುಂಟು ಮಾಡಿದ್ದಾರೆ ಎಂದು ಅರ್ಜಿದಾರ ಡಿ.ಆರ್. ಮೇಘ್‌ವಾಲ್ ಆರೋಪಿಸಿದ್ದಾರೆ.

‘‘ಅಂಬೇಡ್ಕರ್ ಯಾರು? ಇದೇ ವ್ಯಕ್ತಿ ಸಂವಿಧಾನವನ್ನು ರಚಿಸಿದರು ಅಥವಾ ದೇಶದಲ್ಲಿ ಮೀಸಲಾತಿ ರೋಗವನ್ನು ಹರಡಿದರು’’ ಎಂದು ಪಾಂಡ್ಯ ಉದ್ದೇಶಪೂರ್ವಕವಾಗಿ ತನ್ನ ಟ್ವಿಟರ್ ಟೈಮ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದರು.

ರಾಜಸ್ಥಾನದ ಜಾಲೋರ್ ಜಿಲ್ಲೆಯ ರಾಷ್ಟ್ರೀಯ ಭೀಮ ಸೇನಾ ಸದಸ್ಯರು ಹಾಗೂ ವೃತ್ತಿಯಲ್ಲಿ ವಕೀಲರಾಗಿರುವ ಮೇಘವಾಲ್ ಕ್ರಿಕೆಟಿಗನ ವಿರುದ್ಧ ಮಂಗಳವಾರ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

‘‘ಜನಪ್ರಿಯ ಕ್ರಿಕೆಟಿಗ ಪಾಂಡ್ಯ ಸಂವಿಧಾನವನ್ನು ಹಾಗೂ ಸಂವಿಧಾನ ಶಿಲ್ಪಿಯನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿ, ಕಡೆಗಣಿಸಲು ಯತ್ನಿಸಿದ್ದಲ್ಲದೆ, ಅಂಬೇಡ್ಕರ್ ಸಮುದಾಯದ ಜನರ ಭಾವನೆಯನ್ನು ಘಾಸಿಗೊಳಿಸಿದ್ದಾರೆ. ದ್ವೇಷವನ್ನು ಹಬ್ಬಿಸಿ ಸಮಾಜವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ. ಜನವರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪಾಂಡ್ಯ ಹೇಳಿಕೆಯನ್ನು ನಾನು ಗಮನಿಸಿದ್ದೆ. ವಿವಾದಾತ್ಮಕ ಟ್ವೀಟ್ ಮಾಡಿರುವ ಪಾಂಡ್ಯಗೆ ಸೂಕ್ತ ಶಿಕ್ಷೆ ವಿಧಿಸಬೇಕಾಗಿದೆ’’ ಎಂದು ಮೇಘ್‌ವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News