13 ಹತ್ಯೆ ಪ್ರಕರಣ ಸಹಿತ 131 ಕೇಸ್ ಹಿಂಪಡೆಯಲು ಉತ್ತರಪ್ರದೇಶ ಸರಕಾರ ಸಿದ್ಧತೆ

Update: 2018-03-22 06:35 GMT

ಲಕ್ನೋ, ಮಾ.22: ಉತ್ತರಪ್ರದೇಶದ ಬಿಜೆಪಿ ಸರಕಾರ ಮುಝಫರ್ ನಗರ ಹಾಗೂ ಶಾಮ್ಲಿ ಜಿಲ್ಲೆಯಲ್ಲಿ 2013ರಲ್ಲಿ ನಡೆದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿ 13 ಹತ್ಯೆ ಹಾಗೂ 11 ಹತ್ಯೆ ಯತ್ನ ಸಹಿತ ಒಟ್ಟು 131 ಕೇಸ್‌ಗಳನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದೆ.

ಆದಿತ್ಯನಾಥ್ ಸರಕಾರ ಹಿಂಪಡೆಯಲು ನಿರ್ಧರಿಸಿರುವ ಪ್ರಕರಣದಲ್ಲಿ ‘ಘೋರ ಅಪರಾಧ’ದಲ್ಲಿ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆಗೆ ಒಳಪಡುವ ಐಪಿಸಿ ಸೆಕ್ಷನ್ ಅಡಿ ದಾಖಲಾದ ಪ್ರಕರಣಗಳೂ ಸೇರಿವೆ. ಇದಲ್ಲದೆ ಧರ್ಮದ ಆಧಾರದಲ್ಲಿ ದ್ವೇಷ ಹರಡಿದ ಆರೋಪದಲ್ಲಿ ಸೆಕ್ಷನ್ 153 ‘ಎ’ ಅಡಿ ದಾಖಲಿಸಿರುವ 16 ಪ್ರಕರಣಗಳು ಹಾಗೂ ಧರ್ಮ ಹಾಗೂ ಧಾರ್ಮಿಕ ನಂಬಿಕೆಗಳನ್ನು ದುರುದ್ದೇಶ ಚಟುವಟಿಕೆಗಳ ಮೂಲಕ ಅವಮಾನಿಸಿದ ಆರೋಪದಲ್ಲಿ ಸೆಕ್ಷನ್ 295 ಎ ಅಡಿ ದಾಖಲಿಸಿರುವ ಪ್ರಕರಣಗಳು ಸೇರಿವೆ.

2013ರ ಸೆಪ್ಟಂಬರ್‌ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಕನಿಷ್ಠ 62 ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ಮನೆ-ಮಠ ಕಳೆದುಕೊಂಡಿದ್ದರು. ಸಮಾಜವಾದಿ ಪಕ್ಷ ಸರಕಾರ ಕೋಮು ಗಲಭೆಗೆ ಸಂಬಂಧಿಸಿ ಸುಮಾರು 1,455 ಜನರ ವಿರುದ್ಧ ಮುಝಫರ್‌ನಗರ ಹಾಗೂ ಶಾಮ್ಲಿ ಪೊಲೀಸ್ ಠಾಣೆಗಳಲ್ಲಿ ಒಟ್ಟು 503 ಪ್ರಕರಣಗಳನ್ನು ದಾಖಲಿಸಿತ್ತು.

ಬಿಜೆಪಿ ಸಂಸದ ಸಂಜೀವ್ ಬಾಲ್ಯನ್ ಹಾಗೂ ಪಕ್ಷದ ಬುದ್ವಾನ್ ಶಾಸಕ ಉಮೇಶ್ ಮಲಿಕ್ ಅವರಿದ್ದ ನಿಯೋಗ ಫೆ.5 ರಂದು ಮುಖ್ಯಮಂತ್ರಿ ಆದಿತ್ಯನಾಥ್‌ರನ್ನು ಭೇಟಿಯಾಗಿ 179 ಪ್ರಕರಣಗಳ ಪಟ್ಟಿಯನ್ನು ನೀಡಿದ್ದರು. ಆಯೋಗದ ಭೇಟಿಯ ಬಳಿಕ ಯೋಗಿ ಆದಿತ್ಯನಾಥ್ ಸರಕಾರ ಕೇಸ್ ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದೆ.

 ಫೆ.23 ರಂದು ವಿಶೇಷ ಕಾರ್ಯದರ್ಶಿ ರಾಜೇಶ್ ಸಿಂಗ್ ಸಹಿ ಹಾಕಿರುವ ಪತ್ರವನ್ನು ಉತ್ತರಪ್ರದೇಶದ ಕಾನೂನು ಇಲಾಖೆಯು ಮುಝಫರ್‌ನಗರ ಹಾಗೂ ಶಾಮ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಕಳುಹಿಸಿಕೊಟ್ಟಿತ್ತು. 131 ಪ್ರಕರಣದ ಬಗ್ಗೆ ವಿವರ ನೀಡುವಂತೆ ತಿಳಿಸಿತ್ತು.

   ‘‘ಮುಖ್ಯಮಂತ್ರಿಗೆ ಸಲ್ಲಿಸಿರುವ ಪಟ್ಟಿಯಲ್ಲಿರುವ ಸುಮಾರು 850ಕ್ಕೂ ಅಧಿಕ ಮಂದಿ ಆರೋಪಿಗಳು ಹಿಂದೂಗಳಾಗಿರುವ ಕಾರಣ ಪ್ರಕರಣ ಹಿಂಪಡೆಯುವಂತೆ ಮನವಿ ಸಲ್ಲಿಸಲಾಗಿದೆ’’ ಎಂದು ಸಂಸದ ಸಂಜಯ್ ಬಲ್ಯಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News