ಸುಪ್ರೀಂ ನಿರ್ಧಾರದ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಿ: ಕೇಂದ್ರಕ್ಕೆ ಬಿಜೆಪಿಯ ದಲಿತ ಸಂಸದರ ಆಗ್ರಹ

Update: 2018-03-22 07:29 GMT

ಹೊಸದಿಲ್ಲಿ,ಮಾ.22 : ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ (ದೌರ್ಜನ್ಯ ತಡೆ) ಕಾಯಿದೆಯ ನಿಬಂಧನೆಗಳನ್ನು ಸಡಿಲಗೊಳಿಸುವ  ಸುಪ್ರೀಂ ಕೋರ್ಟ್ ನಿರ್ಧಾರ ಬಿಜೆಪಿಯ ದಲಿತ ಸಂಸದರಿಗೆ ಅಸಮಾಧಾನ ಉಂಟು ಮಾಡಿದ್ದು ಅವರು ಬುಧವಾರ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಈ ವಿಚಾರವನ್ನು ಪ್ರಧಾನಿ ಬಳಿ ಪ್ರಸ್ತಾಪಿಸುವಂತೆ ಕೇಳಿಕೊಂಡಿದ್ದಾರಲ್ಲದೆ ಈ  ಆದೇಶ ಮರು ಪರಿಶೀಲನಾ ಅಪೀಲು ಸಲ್ಲಿಸುವಂತೆಯೂ ಸರಕಾರವನ್ನು ಕೋರಿಕೊಂಡಿದ್ದಾರೆ.

ಕೇಂದ್ರದ ಬಿಜೆಪಿ ಆಡಳಿತದಡಿಯಲ್ಲಿ ದಲಿತರ ವಿರುದ್ಧದ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿರುವ ಕಾಂಗ್ರೆಸ್ ಕೂಡ ಸುಪ್ರೀಂ ನಿರ್ಧಾರದ ವಿರುದ್ಧ ಮರು ಪರಿಶೀಲನಾ ಅಪೀಲು ಸಲ್ಲಿಸಬೇಕು ಅಥವಾ ಕಾಯಿದೆಯಲ್ಲಿ ತಿದ್ದುಪಡಿ ತರಬೇಕೆಂದು ಕೋರಿದೆ. ಸುಪ್ರೀಂ ಕೋರ್ಟ್ ನಿರ್ಧಾರದಿಂದ ದಲಿತರನ್ನು ಅಭದ್ರತೆಯ ಭಾವನೆ ಕಾಡುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಆನಂದ್ ಶರ್ಮ ದೂರಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶವನ್ನು ಸರಕಾರ ಪರಿಶೀಲಿಸುವುದಾಗಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಈ ಆದೇಶ ಪರಿಶಿಷ್ಟ ಜಾತಿ, ವರ್ಗಗಳ ಜಕನರಿಗೆ ದೊಡ್ಡ ಹಿನ್ನಡೆ ಎಂದು ಸಂಸದ ಹಾಗೂ ಬಿಜೆಪಿಯ ಪರಿಶಿಷ್ಟ ಜಾತಿ ಘಟಕದ ಮುಖ್ಯಸ್ಥ ವಿನೋದ್ ಕುಮಾರ್ ಸೋಳಂಕಿ ಅಭಿಪ್ರಾಯ ಪಟ್ಟಿದ್ದಾರೆ.

ಬಹುಜನ ಸಮಾಜವಾದಿ ಪಕ್ಷ, ಆರ್‍ಜೆಡಿಯ ಸಂಸದರೂ ಇತ್ತೀಚಿಗಿನ ಬೆಳವಣಿಗೆಯ ಬಗ್ಗೆ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News