ಫೋನ್ ಟ್ಯಾಪ್ ಆದರೂ ನಾನು ಕೇರ್ ಮಾಡುವುದಿಲ್ಲ: ಸಿಎಂ ಸಿದ್ಧರಾಮಯ್ಯ

Update: 2018-03-22 14:55 GMT

ಮೈಸೂರು,ಮಾ.22: ನಾನು ದೇವೇಗೌಡರ ಮಕ್ಕಳನ್ನು ಸೋಲಿಸಿ ಎಂದು ಹೇಳಿರುವುದು ನಿಜ. ನಾನು ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಜೆಡಿಎಸ್ ಸೋಲಿಸಬೇಕೆಂದು ಹೇಳಿದ್ದು, ಬಹಿರಂಗವಾಗಿಯೇ ನಾನು ಮಂಜೇಗೌಡರ ಜೊತೆ ಮಾತನಾಡಿರುವೆ. ಫೋನ್ ಟ್ಯಾಪ್ ಆದರೂ ನಾನು ಕೇರ್ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಿನ್ನೆ ಹಾಸನಕ್ಕೆ ಬಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಸ್ವಾಗತಿಸಲು ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರಿನ ತಮ್ಮ ನಿವಾಸದಲ್ಲಿಯೇ ತಂಗಿದ್ದು, ಗುರುವಾರ ಬೆಳಿಗ್ಗೆ ತಮ್ಮ ನಿವಾಸದ ಎದುರು ಮಂಜೇಗೌಡ ಜೊತೆ ಮಾತನಾಡಿದ ಸಂಭಾಷಣೆ ಕುರಿತ ವಿಚಾರಕ್ಕೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. 

ನಾನು ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಜೆಡಿಎಸ್ ಸೋಲಿಸಬೇಕೆಂದು ಹೇಳಿದ್ದೇನೆ, ಬಹಿರಂಗವಾಗಿಯೇ ನಾನು ಮಂಜೇಗೌಡರ ಜೊತೆ ಮಾತನಾಡಿರುವೆ. ಹೌದು ಮಂಜೇಗೌಡನ ಜೊತೆ ನಾನೆ ಮಾತನಾಡಿದ್ದು ಏನಿವಾಗ? ಅದು ಫೋನ್  ಟ್ಯಾಪ್ ಅಲ್ಲ. ನಾವು ತೆರೆದ ಪುಸ್ತಕ. ಯಾವುದನ್ನೂ ಕದ್ದುಮುಚ್ಚಿ ಮಾಡಿಲ್ಲ, ಮಾಡುವುದೂ ಇಲ್ಲ. ನನಗೆ ಯಾರ ಭಯವೂ ಇಲ್ಲ. ಫೋನ್ ಟ್ಯಾಪ್ ಆದರೂ ನಾನು ಕೇರ್ ಮಾಡಲ್ಲ. ಫೋನ್ ಟ್ಯಾಪ್ ಇಲ್ಲದಿದ್ದರೆ ಏನಾದರೂ ಮಾಡಿಕೊಳ್ಳಲಿ. ನಾನು ನನ್ನ ಕಾರಿನ ಬಳಿ ಹೊರಗೆ ನಿಂತು ನೂರಾರು ಮಂದಿ ಸಮ್ಮುಖದಲ್ಲಿ ಮಾತನಾಡಿರುವೆ. ನಾನೊಬ್ಬ ಕಾಂಗ್ರೆಸ್ ಮುಖಂಡ. ನನ್ನ ಪಕ್ಷವನ್ನು ಗೆಲ್ಲಿಸಿ ಅಂತಾ ತಾನೇ ಹೇಳಬೇಕು. ಹಾಗೇ ಹೇಳಿದ್ದೇನೆ ಜೆಡಿಎಸ್ ನ ಸೋಲಿಸಿ ಎಂದು ಹೇಳಿದ್ದೇನೆ. ಯಾರು ಬೇಕಾದರೂ ನಮ್ಮ ಫೋನ್ ಟ್ಯಾಪ್ ಮಾಡಿ ಕೇಳಿಸಿಕೊಳ್ಳಲಿ ಎಂದರು.

ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಮೈಸೂರಿಗೆ ಬಂದು ನನ್ನನ್ನು ಸೋಲಿಸುವಂತೆ ಅವರು ಕರೆ ಕೊಟ್ಟಿಲ್ಲವೆ. ಹಾಗಿದ್ದ ಮೇಲೆ ಆ ಸಂದರ್ಭವನ್ನು ನೀವು ಹೇಗೆ ಅರ್ಥೈಸುವಿರಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು. ಉಡುಪಿ ಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಉಡುಪಿಗೆ ಹೋಗಿಯೇ ಇಲ್ಲ. ಹಾಗಿದ್ದ ಮಾತ್ರಕ್ಕೆ ಭೇಟಿ ನೀಡುವುದು ಹೇಗೆ ಸಾಧ್ಯ? ಅವರು ಎಲ್ಲಿಗೆ ಹೋಗಬೇಕು ಎನ್ನುವುದು ಅವರ ಕಚೇರಿ ತೀರ್ಮಾನ ಮಾಡುತ್ತೆ. ಅದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಕೆಲವೊಂದು ವಿಚಾರಗಳಲ್ಲಿ ತೊಂದರೆಯಾಗುವುದರಿಂದ ಉಡುಪಿ ಮಠಕ್ಕೆ ಭೇಟಿ ನೀಡಿಲ್ಲ ಅಷ್ಟೇ. ನಿನ್ನೆಯ ಕರಾವಳಿ ಪ್ರವಾಸ ತುಂಬಾ ಯಶಸ್ವಿಯಾಗಿದೆ. ಅಂದು ಕೊಂಡದ್ದಕ್ಕಿಂತ ಹೆಚ್ಚಾಗಿ ಜನರಿಂದ ಬೆಂಬಲ ಸಿಕ್ಕಿದೆ. ಅದೇ ರೀತಿ ಮೈಸೂರಿನಲ್ಲೂ ಕೂಡ ರಾಹುಲ್ ಗಾಂಧಿಯವರ ಪ್ರವಾಸ ಯಶಸ್ವಿಯಾಗಲಿದೆ ಎಂದರು.

ಮೈಸೂರಿಗೆ ರಾಹುಲ್ ಗಾಂಧಿ ಭೇಟಿ ವಿಚಾರ ಕುರಿತಂತೆ ನಾಡ ಅಧಿದೇವತೆ ಚಾಮುಂಡಿ ದರ್ಶನ ಪಡೆಯಲಿದ್ದಾರೆ. ಸುತ್ತೂರು ಮಠಕ್ಕೆ ತೆರಳುವುದು ನನಗೆ ಗೊತ್ತಿಲ್ಲ ಎಂದರು.

ರಾಜ್ಯಕ್ಕೆ ಅಮಿತ್ ಶಾ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರೇ ಬರಲಿ, ಹೋಗಲಿ ರಾಜ್ಯದ ಜನ ನಮ್ಮ ಜೊತೆ ಇದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ನಂಜನಗೂಡಲ್ಲಿ ಗೆದ್ದೇ ಗೆಲ್ತೀವಿ ಅಂತ ಹೇಳುತ್ತಿದ್ದರು. ಜನ ಯಾರ ಕೈ ಹಿಡಿದರು, ನಿಮಗೆ ಗೊತ್ತಿಲ್ಲವೇ? ಎಂದು ಕೇಳಿದರು. ನಂಜನಗೂಡು ಬೈ ಎಲೆಕ್ಷನ್ ಅಕ್ರಮವಾಗಿ ನಡೆದಿದೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರಲ್ಲ ಎಂಬ ಪ್ರಶ್ನೆಗೆ, ಅಕ್ರಮವಾಗಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕಿತ್ತು. ಪುಸ್ತಕದಲ್ಲಿರುವುದೆಲ್ಲ ನಿಜವವಲ್ಲ, ಇದು ಕೇವಲ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಅಷ್ಟೇ. ಸೋತ ಮೇಲೆ ಏನು ಬೇಕಾದರೂ ಹೇಳ್ತಾರೆ, ಹೇಳಲಿ ಬಿಡಿ. ಈಗ ಪುಸ್ತಕ ಬರೆಯುವುದರಿಂದ ಏನೂ ಪ್ರಯೋಜನವಿಲ್ಲ. ಸುಳ್ಳು ಸುಳ್ಳು ಪುಸ್ತಕ ಬರೆಯುವುದರಿಂದ ಏನು ಲಾಭ ಎಂದು ಪ್ರಶ್ನಿಸಿದರು.

ಲಿಂಗಾಯತ ಧರ್ಮದ ವಿಚಾರದಲ್ಲಿ ಸರ್ಕಾರ ಮೂಗು ತೂರಿಸಬಾರದಿತ್ತು ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕಲಂ 2ಡಿ ಅಡಿಯಲ್ಲಿ ಸರ್ಕಾರಕ್ಕೆ ಅಧಿಕಾರವಿದೆ. ಅಷ್ಟಕ್ಕೂ ನಾವು ಜಸ್ಟೀಸ್ ನಾಗಮೋಹನ್ ದಾಸ್ ವರದಿ ಆಧರಿಸಿ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸರ್ಕಾರದ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ನಾಳೆಯಿಂದ ಎಸ್‍ಎಸ್‍ಎಲ್ ಸಿ ಪರೀಕ್ಷೆ ಆರಂಭ ಹಿನ್ನೆಲೆಯಲ್ಲಿ ಎಸ್‍ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಶುಭಕೋರಿದರು. ಈ ಸಂದರ್ಭ ಸಚಿವ ತನ್ವೀರ್ ಸೇಠ್, ಶಾಸಕ ಎಂ.ಕೆ.ಸೋಮಶೇಖರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಿಎಂ ಜೊತೆಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News