ಸಿದ್ದರಾಮಯ್ಯರಿಗೆ ಕೃತಜ್ಞತೆ ಇಲ್ಲ, ಸಹಾಯ ಮಾಡಿದವರನ್ನು ನೆನೆಯುವ ಸೌಜನ್ಯ ಕೂಡ ಇಲ್ಲ: ದೇವೇಗೌಡ

Update: 2018-03-22 15:00 GMT

ಮೈಸೂರು,ಮಾ.22: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಇಲ್ಲ, ಸಹಾಯ ಮಾಡಿದವರನ್ನು ನೆನೆಯುವ ಸೌಜನ್ಯಕೂಡ ಇಲ್ಲ. ಅಧಿಕಾರದ ಮದ, ದುರಹಾಂಕಾರ ಹೆಚ್ಚು ದಿನ ನಡೆಯುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಕೆ.ಜಿ.ಕೊಪ್ಪಲಿನ ಗರಡಿ ಮನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯನವರೇ ಬನ್ನಿ ಇಂದಿನಿಂದಲೇ ರಾಜಕೀಯ ಅಖಾಡ ಶುರುವಾಗಲಿದೆ. ದೇವೇಗೌಡರಿಗೆ 85 ವರ್ಷ ಆಗಿದೆ. ನಿಮಗೆ 65 ವರ್ಷ ಇರಬಹುದು ನಾನಗೆ ನಿಮ್ಮ ಜೊತೆ ಕುಸ್ತಿ ಆಡಲು ಸಾಧ್ಯವಿಲ್ಲ. ಆದರೆ ನಮ್ಮ ಕಾರ್ಯಕರ್ತರು ನಿಮ್ಮನ್ನು ಮಣಿಸಲಿದ್ದಾರೆ ಎಂದು ಹೇಳಿದರು. 

ಕಾರ್ಯಕರ್ತರು ಇದ್ರೆ ಮಾತ್ರ ಪಕ್ಷ. ನಾನು ಪಕ್ಷದ ಕಾರ್ಯಕರ್ತರನ್ನು ಲಘುವಾಗಿ ಕಾಣುವುದಿಲ್ಲ. ದೇವೇಗೌಡರು ರಾಜಕಾರಣಿಗಳ ಕಾರ್ಖಾನೆ ಇದ್ದಂತೆ ಎನ್ನುತ್ತಾರೆ. ಆದರೆ ನನ್ನ ಗರಡಿಯಲ್ಲಿ ಎಷ್ಟು ಜನ ಮುಂದೆ ಬಂದಿದ್ದೂ ಆಯ್ತು, ತಲೆ ಮೇಲೆ ಕುಳಿತದ್ದೂ ಆಯ್ತು ಎಂದು ಬೇಸರ ವ್ಯಕ್ತಪಡಿಸಿದರು. 

ಸಿದ್ದರಾಮಯ್ಯಗೆ ಉಪಕಾರ ಸ್ಮರಣೆ ಇಲ್ಲ. ಪ್ರಧಾನಿ ಮೋದಿ ಅವರೇ ಇಲ್ಲಿರೋದು 10 ಪರ್ಸೆಂಡ್ ಸರ್ಕಾರ ಅಂತಾ ಹೇಳಿದ್ದಾರೆ. ಸಿಎಂ ಬಗ್ಗೆ ಹೇಳಲು ತುಂಬಾ ಇದೆ. ಅವರ ದುರಾಹಂಕಾರ ಜಾಸ್ತಿಯಾಗಿದೆ. ಎರಡು ತಿಂಗಳು ಕಾಯಿರಿ ಎಂದರು. 
 
ಮೈಸೂರಲ್ಲಿ ಜೆಡಿಎಸ್ ಹೇಗೆ ಗೆಲ್ಲುತ್ತದೆ ನೋಡುತ್ತೇನೆ ಎಂದು ಸಿಎಂ ಲಘುವಾಗಿ ಮಾತನಾಡಿದ್ದಾರೆ. ಮೈಸೂರು ಜಿಲ್ಲೆಯ ನೇತೃತ್ವವನ್ನು ನಾನು ವಹಿಸಿಕೊಂಡಿದ್ದೇನೆ. ನನ್ನ ಶಕ್ತಿ ಏನು ಎಂಬುದನ್ನು ತೋರಿಸುತ್ತೇನೆ. ಸಿಎಂ ಅಧಿಕಾರದ ಮದ, ದುರಾಹಂಕಾರ ಬಿಡಬೇಕು. ನಾನು ಕಡುಬು ತಿನ್ನುತ್ತಾ ಕುಳಿತಿಲ್ಲ. ರೇವಣ್ಣರನ್ನು ಸೋಲಿಸಲು ಸಾಧ್ಯವಿಲ್ಲ. ಕುಮಾರಸ್ವಾಮಿ ಸಿಎಂ ಆಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ದೇವೇಗೌಡ ಹೇಳಿದರು.

ರಾಹುಲ್ ಗಾಂಧಿ ಅವರನ್ನ ಓಲೈಸಲು ಸಿಎಂ ಮಾತನಾಡುತ್ತಿದ್ದಾರೆ. ಬಿಜೆಪಿ ಎ ಟೀಂ, ಜೆಡಿಎಸ್ ಬಿ ಟೀಂ ಎಂದು ಮಾತನಾಡುತ್ತಿದ್ದಾರೆ. ನಾನು ಸೋನಿಯಾ ಗಾಂಧಿ ಅವರ ಶಕ್ತಿಯನ್ನು ನೋಡಿದ್ದೇನೆ. ಈಗ ಸಿದ್ದರಾಮಯ್ಯನವರ ಶಕ್ತಿಯ ಮುಂದೆ ಅವರ ಶಕ್ತಿ ಕಡಿಮೆಯಾಗಿದೆ. ಸಿದ್ದರಾಮಯ್ಯನವರ ಶಕ್ತಿ ಕಂಡು ಹೆದರಿದ್ದಾರೆ ಎಂದು ವ್ಯಂಗ್ಯವಾಡಿದರು. 

ಹಾಸನ ಜಿಲ್ಲೆಯಲ್ಲಿ 20 ಸಾವಿರ ಜನ ಸೇರಿಸಿದರು. ಮುಂದಿನ ತಿಂಗಳು 2 ರಂದು ಹಾಸನದಲ್ಲಿ ಸಮಾವೇಶ ನಡೆಸುತ್ತೇನೆ. 2 ಲಕ್ಷ ಜನ ಸೇರಿಸುತ್ತೇನೆ. ನನ್ನ ಜಿಲ್ಲೆಯಲ್ಲಿ ನನ್ನ ಶಕ್ತಿ ಏನು ಎಂಬುದನ್ನ ತೋರಿಸುತ್ತೇನೆ. 15 ರಿಂದ 20 ಸಾವಿರ ಜನರನ್ನ ಸೇರಿಸಿ ದುರಾಹಂಕಾರದಿಂದ ಮಾತನಾಡಿದ್ದೀರಿ. ಅಖಾಡಕ್ಕೆ ಬನ್ನಿ ಸಿದ್ದರಾಮಯ್ಯನವರೇ ಎಂದ ಅವರು, ನನ್ನ ಮೇಲೆ ಸವಾರಿ ಮಾಡಲು ಶ್ರೀನಿವಾಸ ಪ್ರಸಾದ್ ಅವರನ್ನು ಕರೆದುಕೊಂಡು ಬಂದರು. ಪ್ರಸಾದ್ ಯೋಗ್ಯವಾದ ವ್ಯಕ್ತಿ. ಪ್ರಸಾದ್ ಅವರನ್ನ ನಾನೇ ಪಕ್ಷಕ್ಕೆ ಕರೆದೆ. ಆದರೆ ಅವರು ಬರಲಿಲ್ಲ ಎಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಜೆಡಿಎಸ್ ಮುಖಡಂರಾದ ಪ್ರೊ.ಕೆ.ಎಸ್.ರಂಗಪ್ಪ, ಅಬ್ದುಲ್ಲಾ, ನರಸಿಂಹಸ್ವಾಮಿ, ಎಸ್.ಬಿ.ಎಂ.ಮಂಜು, ಚಲುವೇಗೌಡ, ಕೆ.ವಿ.ಮಲ್ಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News