ತೆರಿಗೆಮುಕ್ತ ಗ್ರಾಚ್ಯುಯಿಟಿಯ ಮಿತಿ ದ್ವಿಗುಣ, 20 ಲ.ರೂ.ಗೆ ಏರಿಕೆ

Update: 2018-03-22 15:29 GMT

ಹೊಸದಿಲ್ಲಿ,ಮಾ.22: ಗ್ರಾಚ್ಯುಯಿಟಿ ಪಾವತಿ(ತಿದ್ದುಪಡಿ) ಮಸೂದೆಯನ್ನು ರಾಜ್ಯಸಭೆಯು ಗುರುವಾರ ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಿದ್ದು, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳ ಲಕ್ಷಾಂತರ ಉದ್ಯೋಗಿಗಳು ಈಗ 20 ಲ.ರೂ.ವರೆಗಿನ ಗ್ರಾಚ್ಯುಯಿಟಿ ಮೊತ್ತದ ಮೇಲೆ ಆದಾಯ ತೆರಿಗೆ ವಿನಾಯಿತಿ ಯನ್ನು ಪಡೆಯಲಿದ್ದಾರೆ. ಸದ್ಯ 10 ಲ.ರೂ.ವರೆಗಿನ ಗ್ರಾಚ್ಯುಯಿಟಿ ಮೊತ್ತಕ್ಕೆ ತೆರಿಗೆ ವಿನಾಯಿತಿಯಿದೆ. ಗ್ರಾಚ್ಯುಯಿಟಿ ಪಾವತಿ ಕಾಯ್ದೆಯು ಈಗ ಮಿತಿಯನ್ನು ಹೆಚ್ಚಿಸಲು ಮತ್ತು ಹೆರಿಗೆ ರಜೆಯ ಅವಧಿಯನ್ನು ನಿಗದಿಗೊಳಿಸಲು ಸರಕಾರಕ್ಕೆ ಅವಕಾಶವನ್ನ್ನು ಕಲ್ಪಿಸಲಿದೆ.

ಲೋಕಸಭೆಯು ಕಳೆದ ವಾರವೇ ಗ್ರಾಚ್ಯುಯಿಟಿ ಪಾವತಿ(ತಿದ್ದುಪಡಿಗಳು) ಮಸೂದೆಯನ್ನು ಅಂಗೀಕರಿಸಿತ್ತು. ರಾಷ್ಟ್ರಪತಿಗಳು ಅಂಕಿತ ಹಾಕಿದ ಬಳಿಕ ಅದು ಶಾಸನವಾಗಲಿದೆ.

ಉದ್ಯೋಗಿಗಳು ಕಂಪನಿಯ ಕೆಲಸವನ್ನು ತೊರೆಯುವ ಮುನ್ನ ಕನಿಷ್ಠ ಐದು ವರ್ಷಗಳ ಕಾಲ ಅಲ್ಲಿ ಕರ್ತವ್ಯ ನಿರ್ವಹಿಸಿದ್ದರೆ, ಗ್ರಾಚ್ಯುಯಿಟಿಯನ್ನು ಪಾವತಿಸಲಾಗುತ್ತದೆ. ಕೊನೆಯ ವೇತನದ ಮೂಲವೇತನ ಮತ್ತು ಸಂಸ್ಥೆಯಲ್ಲಿ ದುಡಿದ ವರ್ಷಗಳ ಸಂಖ್ಯೆ ಈ ಎರಡು ಅಂಶಗಳನ್ನು ಗ್ರಾಚ್ಯುಯಿಟಿ ಮೊತ್ತವು ಅವಲಂಬಿಸಿರುತ್ತದೆ.

10 ಮತ್ತು ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಿಗೆ ಸದ್ಯದ ಗ್ರಾಚ್ಯುಯಿಟಿ ಪಾವತಿ ನಿಯಮಾ ವಳಿಗಳು ಅನ್ವಯಿಸುತ್ತವೆ.

ಮಹಿಳಾ ಉದ್ಯೋಗಿಗಳಿಗೆ ನಿರಂತರ ಸೇವೆಗೆ ಅರ್ಹ ರನ್ನಾಗಿಸಲು ತೆೆರಿಗೆ ರಜೆಯ ಅವಧಿಯನ್ನು ಅಧಿಸೂಚಿಸಲು ಮತ್ತು ಅವರಿಗೆ ಗ್ರಾಚ್ಯುಯಿಟಿ ಮೊತ್ತವನ್ನು ನಿಗದಿಗೊಳಿಸಲು ಉದ್ದೇಶಿತ ಕಾನೂನು ಸರಕಾರಕ್ಕೆ ಅಧಿಕಾರ ನೀಡಲಿದೆ.

 ಗರಿಷ್ಠ ಹೆರಿಗೆ ರಜೆಯ ಅವಧಿಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಲು 1961ರ ಕಾನೂನಿಗೆ ತಿದ್ದುಪಡಿಯನ್ನು ತರಲಾಗಿತ್ತು. ನೂತನ ಕಾನೂನು 12 ವಾರಗಳ ಮಿತಿಯನ್ನು ತೆಗೆದುಹಾಕುವ ಜೊತೆಗೆ ಗರಿಷ್ಠ ಹೆರಿಗೆ ರಜೆಯ ಅವಧಿಯನ್ನು ನಿರ್ಧರಿಸುವುದನ್ನು ಸರಕಾರಕ್ಕೆ ಸಾಧ್ಯವಾಗಿಸಲಿದೆ.

ಸದ್ಯದ ಕಾನೂನು ಗರಿಷ್ಠ ಗ್ರಾಚ್ಯುಯಿಟಿ ಮೊತ್ತವನ್ನು 10 ಲ.ರೂ.ಗಳಿಗೆ ನಿಗದಿಗೊಳಿಸಿದ್ದು, ಗುರುವಾರ ಸಂಸತ್ತು ಅಂಗೀಕರಿಸಿರುವ ನೂತನ ಕಾನೂನು ಈ ಮಿತಿಯನ್ನು ತೆಗೆದುಹಾಕಲಿದೆ.

ಸರಕಾರವು ಈಗಾಗಲೇ ಏಳನೇ ವೇತನ ಆಯೋಗದ ಶಿಫಾರಸುಗಳ ಬಳಿಕ 2016ರಿಂದ ಗ್ರಾಚ್ಯುಯಿಟಿಯ ಮೇಲಿನ ತೆರಿಗೆ ವಿನಾಯಿತಿಯನ್ನು 20 ಲ.ರೂ.ಗೆ ಹೆಚ್ಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News