ಎಚ್‌ಐವಿ ಪ್ರಮಾಣದಲ್ಲಿ ನಾಗಾಲ್ಯಾಂಡ್‌ಗೆ ಮೂರನೆ ಸ್ಥಾನ

Update: 2018-03-22 17:45 GMT

ಕೋಹಿಮಾ, ಮಾ. 22: ನಾಗಾಲ್ಯಾಂಡ್‌ನಲ್ಲಿ ಎಚ್‌ಐವಿ (ಪಿಎಲ್‌ಎಚ್‌ಐವಿ) ಹಾಗೂ ಏಡ್ಸ್ ನೊಂದಿಗೆ ಜೀವಿಸುವ ಜನರ ಸಂಖ್ಯೆ 22,878 ಇದ್ದು, ದೇಶದಲ್ಲಿ ಮೂರನೇ ಸ್ಥಾನ ಹೊಂದಿದೆ. ಇಲ್ಲಿನ ಶೇ. 0.76 ವಯಸ್ಕರು ಎಚ್‌ಐವಿ ಹಾಗೂ ಏಡ್ಸ್ ಪೀಡಿತರಾಗಿದ್ದಾರೆ ಎಂದು ನಾಗಾಲ್ಯಾಂಡ್ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ (ಎನ್‌ಎಸ್‌ಎಸಿಎಸ್) ಅಧಿಕಾರಿ ಹೇಳಿದ್ದಾರೆ.

1999 ಹಾಗೂ 2018ರ ನಡುವೆ ನಡೆಸಲಾದ ಅಧ್ಯಯನದ ಪ್ರಕಾರ ವಯಸ್ಕರಲ್ಲಿ ಎಚ್‌ಐವಿ ಪ್ರಮಾಣ ಶೇ. 1.06 ಇರುವ ಮಣಿಪುರ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಅನಂತರ ಸ್ಥಾನವನ್ನು ಸೇ. 0.79 ಇರುವ ಮಿರೆರಾಂ ಪಡೆದುಕೊಂಡಿದೆ ಎಂದು ಎನ್‌ಎಸ್‌ಎಸಿಎಸ್‌ನ ಉಪ ನಿರ್ದೇಶಕ ವೆಜೊಖೋಲು ಥಿಯೋ ಅವರು ಬುಧವಾರ ಸುದ್ದಿಗಾರರಿಗೆ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಆದರೆ, ಕಳೆದ ಕೆಲವು ವರ್ಷಗಳಿಂದ ಈ ರಾಜ್ಯಗಳಲ್ಲಿ ಎಚ್‌ಐವಿ ಪ್ರಮಾಣ ಇಳಿಕೆಯಾಗುತ್ತಿರುವ ಉತ್ತಮ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಒಟ್ಟಾಗಿ 21,1 ಲಕ್ಷ ಪಿಎಲ್‌ಎಚ್‌ಐವಿ ಪ್ರಕರಣಗಳಿವೆ. ಇವುಗಳಲ್ಲಿ ಶೇ. 82ರಷ್ಟು ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಉತ್ತರಪ್ರದೇಶ, ಬಿಹಾರ್, ತಮಿಳುನಾಡು, ಪಶ್ಚಿಮಬಂಗಾಳ ಹಾಗೂ ರಾಜಸ್ಥಾನದಲ್ಲಿ ಇದೆ ಎಂದು ಅವರು ತಿಳಿಸಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಸುಮಾರು 20 ಲಕ್ಷ ಜನಸಂಖ್ಯೆ ಇದೆ. 1999-2018ರ ನಡುವೆ 10,16,700 ಜನರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ 22,878 ಜನರ ರಕ್ತದಲ್ಲಿ ಎಚ್‌ಐವಿ ಪೊಸಿಟಿವ್ ಪತ್ತೆಯಾಗಿದೆ. ನಾಗಾಲ್ಯಾಂಡ್‌ನ ಶೇ. 91 ಪ್ರಕರಣಗಳಲ್ಲಿ ಮುಖ್ಯವಾಗಿ 25ರಿಂದ 34 ವರ್ಷದ ಒಳಗಿನವರು ಅಸರಕ್ಷಿತ ಲೈಂಗಿಕ ಸಂಪರ್ಕದಿಂದ ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಎಚ್‌ಐವಿ ಪ್ರಮಾಣ 14 ವರ್ಷದ ಮಕ್ಕಳಲ್ಲಿ ಶೇ. 6, 15 ಹಾಗೂ 24ರ ನಡುವಿನ ಪ್ರಾಯದ ಗುಂಪಿನಲ್ಲಿ ಶೇ. 15 ಇದೆ. ನಾಗಾಲ್ಯಾಂಡ್‌ನಲ್ಲಿ 22,878 ಜನರಲ್ಲಿ ಎಚ್‌ಐವಿ ಪೊಸಿಟಿವ್ ಕಂಡು ಬಂದಿದ್ದು, 16,713 ಎಆರ್‌ಟಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News