ಮಹಾಡ್‌ನ ಧರ್ಮಯುದ್ಧ ಹಾಗೂ ದಲಿತರ ಜವಾಬ್ದಾರಿ

Update: 2018-03-22 18:33 GMT

ಭಾಗ-2

ನಮ್ಮ ಅನಿಸಿಕೆಯ ಪ್ರಕಾರ ಮೇಲ್ಜಾತಿಯವರ ನಡವಳಿಕೆಯಲ್ಲಿ ಬದಲಾವಣೆ ತರಲು ಮೊದಲು ಅವರಲ್ಲಿಯ ಬದ್ಧಿಹೀನ ಜನರು ಯೋಚಿಸುವಂತೆ ಮಾಡಬೇಕು.

ಆದರೆ ವಿಚಾರಗಳು ಜ್ವಾಲಮುಖಿಯಂತೆ ತನ್ನಿಂದ ತಾನೇ ಸ್ಫೋಟಗೊಳ್ಳುವುದಿಲ್ಲ. ಕೆಲವು ಕಾರಣದಿಂದಲೇ ಅವು ಹೊತ್ತಿಕೊಳ್ಳುತ್ತವೆ. ಯಾರಲ್ಲಿ ವಿಚಾರಗಳ ಜಾಗೃತಿಯನ್ನು ತರಬಯಸುತ್ತೀರೋ ಅವರು ವಿಚಾರ ಮಾಡುವಂತಾಗಲು ಕಾರಣಗಳನ್ನು ಸೃಷ್ಟಿಸಬೇಕು ಅನ್ನುವುದನ್ನು ನಮ್ಮ ದಲಿತ ಬಂಧುಗಳು ಮರೆಯಬಾರದು. ಒಂದೇ ಸಮ ಏರುಪೇರಿಲ್ಲದ ದಾರಿಯ ಮೇಲೆ ನಡೆಯುವವನು ಆ ದಾರಿ ಸೀದಾ ಇರುವವರೆಗೆ ಕಣ್ಣುಮುಚ್ಚಿ ಹಾಗೇ ನಡೆಯುತ್ತ ಹೋಗುತ್ತಾನೆ. ಆ ದಾರಿಯ ಬಗ್ಗೆ ಅವನಿಗೆ ಯಾರಲ್ಲೂ ವಿಚಾರಿಸುವ ಅಗತ್ಯ ಕಾಣುವುದಿಲ್ಲ, ಆದರೆ ಅದೇ ರಸ್ತೆಗೆ ತಿರುವು ಬಂದ ದಿನ ಆತ ಸ್ತಬ್ಧವಾಗುತ್ತಾನೆ, ಗೊಂದಲಕ್ಕೀಡಾಗುತ್ತಾನೆ. ಹಾಗೂ ಈ ಎರಡರಲ್ಲಿ ತನ್ನನ್ನು ಗುರಿ ತಲುಪಿಸುವ ದಾರಿ ಯಾವುದು? ಅನ್ನುವ ಬಗ್ಗೆ ಯೋಚಿಸಲಾರಂಭಿಸುತ್ತಾನೆ. ಹಾಗಾಗಿ ಅಭ್ಯಾಸವಿರುವ ದಾರಿಯಲ್ಲಿ ಯಾವುದೇ ಅಡಚಣೆ ಬರುವ ತನಕ ಯಾರೂ ತಲೆತಲಾಂತರಗಳ ರೂಢಿ ಪರಂಪರೆಗಳು ಒಳ್ಳೆಯದೋ ಕೆಟ್ಟದ್ದೋ ಅನ್ನುವುದರ ಬಗ್ಗೆ ಯೋಚಿಸುವುದಿಲ್ಲ. ಇದೇ ತತ್ವವನ್ನು ಮೇಲ್ಜಾತಿಯ ಬುದ್ಧಿಹೀನ ಜನರಿಗೆ ಅಳವಡಿಸಿದರೆ ಅಸ್ಪಶ್ಯತೆಯ ರೂಢಿಗಳು ಮುಂದುವರಿಯುವುದಕ್ಕೆ ಕಾರಣ ಅಸ್ಪಶ್ಯ ಜನ ಈ ರೂಢಿಯನ್ನು ಯಾವತ್ತೂ ವಿರೋಧಿಸಲಿಲ್ಲ ಅನ್ನುವುದು ಗೊತ್ತಾಗುತ್ತದೆ. ಇವರೇನಾದರೂ ವಿರೋಧಿಸಿದ್ದರೆ ಮೇಲ್ಜಾತಿಯವರಿಗೆ ಅಸ್ಪಶ್ಯತೆ ಬಗ್ಗೆಯ ಕಲ್ಪನೆಗಳನ್ನು ಎಂದೋ ಬದಲಾಯಿಸಬೇಕಾಗುತ್ತಿತ್ತು. ಕೆಟದು ಯಾವುದು ಅನ್ನುವುದು ಅದರಿಂದ ಅನುಭವಿಸಲ್ಪಡುವ ಪರಿಣಾಮದಿಂದ ಕಡೆಗೆ ಎಲ್ಲರ ಗಮನಕ್ಕೆ ಬರುತ್ತದೆ. ಆದ್ದರಿಂದಲೇ ತಪ್ಪು ಗ್ರಹಿಕೆಗಳು ಹಾಗೂ ತಪ್ಪು ತಿಳುವಳಿಕೆಗಳು ವ್ಯವಹಾರದಲ್ಲಿ ಹೆಚ್ಚು ದಿನ ಬಾಳಲಾರವು. ಆದರೆ ಕೆಲವೆಡೆ ಕೃತ್ಯ ಹಾಗೂ ಅದರ ಪರಿಣಾಮದ ಸಂಬಂಧ ಎಷ್ಟು ದೂರದ್ದಾಗಿರುತ್ತದೆಯೆಂದರೆ ನಾವು ಮಾಡುವ ಕೃತ್ಯದ ಪರಿಣಾಮವೇನು ಅನ್ನುವುದು ಮೊದಲು ತಿಳಿಯುವುದಿಲ್ಲ ಹಾಗೂ ಅದರಿಂದ ತನ್ನ ಕೃತ್ಯದ ಒಳ್ಳೆಯ /ಕೆಟ್ಟತನದ ಬಗ್ಗೆ ಯೋಚಿಸುವ ಅಗತ್ಯವೂ ಕೃತ್ಯ ಮಾಡುವವನಿಗೆ ಕಂಡುಬರುವುದಿಲ್ಲ. ಜಾತಿಭೇದ ಹಾಗೂ ಅಸ್ಪಶ್ಯತೆಯ ಬಗ್ಗೆಯೂ ಹೀಗೇ ಇದೆ. ಈ ರೂಢಿಯ ಪರಿಣಾಮಗಳು ಕೆಟ್ಟದ್ದಿವೆ ಅನ್ನುವುದರ ಪ್ರತ್ಯಕ್ಷ ಅನುಭವ ಮೇಲ್ಜಾತಿಯ ಜನರಿಗೆಂದೂ ಆಗಿಯೇ ಇಲ್ಲವಾದ್ದರಿಂದ ಆ ರೂಢಿಗಳಿನ್ನೂ ಮುಂದುವರಿದೇ ಇವೆ. ಬೆಂಕಿಗೆ ಬೆಲೆ ಕೊಡದೆ ಅದನ್ನು ತನ್ನ ನಾಲಿಗೆಯ ಮೇಲಿಡುವವನಿಗದು ಬೊಕ್ಕೆ ಕೊಟ್ಟು ತನ್ನ ಇರುವಿಕೆಯನ್ನು, ತನ್ನ ಬೆಲೆಯನ್ನು ತೋರಿಸಿಕೊಡುವಂತೆ ದಲಿತರು ತಮ್ಮನ್ನು ಅಸ್ಪಶ್ಯರೆನ್ನುವವರ ನಾಲಿಗೆಯನ್ನೇ ಕತ್ತರಿಸಿದರೆ ಅವರನ್ನು ಯಾರೂ ಅಸ್ಪಶ್ಯರೆನ್ನಲಾರರು. ನಮ್ಮ ಅನಿಸಿಕೆಯ ಪ್ರಕಾರ ಮಹಾಡ್ ಪರಿಷತ್ತಿನ ಮಹತ್ವ ಕೂಡ ಇದರಲ್ಲೇ ಇದೆ. ಆ ಪರಿಷತ್ತು ಮೇಲ್ಜಾತಿಯವರಿಗೆ ಅಸ್ಪಶ್ಯತೆಯ ರೂಢಿಯ ಒಂದು ಕಹಿ ಅನುಭವ ವನ್ನು ಕೊಟ್ಟಿದೆ. ಆದ್ದರಿಂದ ಮೇಲ್ಜಾತಿಯವರೀಗ ಅಸ್ಪಶ್ಯತೆಯನ್ನು ಕಾಪಾಡುವುದು ತಮ್ಮ ಧರ್ಮವಾಗಿದ್ದರೂ ಈಗ ಅದಷ್ಟು ಸುಲಭವಲ್ಲ ಅನ್ನುವುದರ ಬಗ್ಗೆ ಯೋಚಿಸಲು ಆರಂಭಿಸಿಯಾರು. ಇಂದಿನವರೆಗೆ ಅಸ್ಪಶ್ಯತೆಯನ್ನು ಸುಲಭವಾಗಿ ಕಾಯ್ದುಕೊಳ್ಳಬಹುದಾಗಿತ್ತು, ಅದಕ್ಕೇನೂ ಕಷ್ಟಪಡಬೇಕಿರಲಿಲ್ಲ. ಆದರೆ ಇನ್ನು ಮುಂದೆ ಅದನ್ನು ಕಾಯ್ದುಕೊಳ್ಳಲು ತಮ್ಮ ಕೆಲವು ಜನರ ಪ್ರಾಣದ ಆಹುತಿ ಕೊಡಬೇಕಾದೀತು ಅನ್ನುವುದು ಮೇಲ್ಜಾತಿ ಜನರ ಗಮನಕ್ಕೆ ಬಂದಿರಬಹುದು. ಏಕೆಂದರೆ ಮಹಾಡ್‌ನಲ್ಲಿ ದಲಿತರು ಮೇಲ್ಜಾತಿಯವರ ಮೇಲೆ ಕೈ ಮಾಡಿರದಿದ್ದರೂ ಇನ್ನು ಮುಂದೆ ಎದುರಾಗ ಬಹುದಾದ ಪ್ರಸಂಗಗಳಲ್ಲಿ ದಲಿತರು ಯಾವುದೇ ಪ್ರತೀಕಾರ ತೋರಿಸದೆ ಏಟು ತಿಂದು ಸುಮ್ಮನಿದ್ದಾರು ಎಂದು ಯೋಚಿಸುವುದು ತಪ್ಪು. ಹಾಗಾಗಿ ಮಹಾಡ್‌ನಲ್ಲಿ ಅವರು ಮಾಡಿರುವ ಕೆಲಸಗಳನ್ನೇ ಉಳಿದೆಡೆಯಲ್ಲೂ ಆರಂಭಿಸಲಿ ಅನ್ನುವುದೇ ನಮ್ಮ ದಲಿತ ಬಾಂಧವರಿಗೆ ಸಲಹೆ. ಇಂತಹ ಪ್ರತೀಕಾರ ಚಳವಳಿ ಇಲ್ಲದೆ ನಡೆಯುವುದು ಸಾಧ್ಯವಿಲ್ಲ.

ಇಲ್ಲದಿದ್ದರೆ ಮೇಲ್ಜಾತಿಯ ಬದ್ಧಿಹೀನರು ಅಸ್ಪಶ್ಯತೆ ರೂಢಿಯ ಒಳ್ಳೆಯ/ಕೆಟ್ಟ ಪರಿಣಾಮಗಳ ಬಗ್ಗೆ ಯೋಚಿಸದೆ ಹಾಗೇ ಕುಳಿತಾರು ಹಾಗೂ ಸಾವಿರಾರು ವರ್ಷಗಳ ಹಳೆಯ ಅಸ್ಪಶ್ಯತೆ ಇನ್ನೂ ಸಾವಿರಾರು ವರ್ಷ ಮುಂದುವರಿದೀತು.

 ಬುದ್ಧಿವಂತ ಜಾಣರನ್ನು ನುಡಿದಂತೆ ನಡೆಯುವಂತೆ ಮಾಡಬೇಕು ಅನ್ನುವುದು ಅಸ್ಪಶ್ಯತೆ ನಿವಾರಣೆಯ ಕಾರ್ಯಕ್ರಮದ ಎರಡನೆಯ ಮಹತ್ವದ ಭಾಗ. ನುಡಿದಂತೆ ನಡೆಯದವರಿಗೆ ಪಾಠ ಕಲಿಸುವ ಉಪಾಯ ಬುದ್ಧಿಯಿಲ್ಲದ ಜನರನ್ನು ಯೋಚಿಸುವಂತೆ ಮಾಡುವ ಉಪಾಯಕ್ಕಿಂತ ಯಾವತ್ತೂ ಭಿನ್ನವಾಗಿಯೇ ಇರುತ್ತದೆ. ಜನಮತವನ್ನು ತಿರುಗಿಸುವುದು ಹಾಗೂ ವ್ಯವಹಾರದಲ್ಲಿ ಆಡಳಿತದಲ್ಲಿರುವ ಜನರ ವರ್ತನೆಯಲ್ಲಿ ಬದಲಾವಣೆ ತರುವುದು ಇವೆರಡರಲ್ಲೂ ಸಾಕಷ್ಟು ವ್ಯತ್ಯಾಸವಿದೆ. ಎಲ್ಲಿ ಮನುಷ್ಯನ ಮತಕ್ಕೂ ಹಾಗೂ ಅವನ ಸ್ವಾರ್ಥಕ್ಕೂ ಸಂಬಂಧವಿರುವುದಿಲ್ಲವೋ ಅಲ್ಲಿ ಅವನ ಮತ ಬದಲಾಯಿಸಲು ವಾದವಿವಾದಗಳು, ಚರ್ಚೆಗಳು ಊಹಾಪೋಹಗಳು, ಸಾಮೋಪಚಾರದ ಉಪಾಯಗಳು ಸಾಕಾಗುತ್ತವೆ. ಆದರೆ ಎಲ್ಲಿ ಮನುಷ್ಯನ ಮತಕ್ಕೂ ಆತನ ಸ್ವಾರ್ಥಕ್ಕೂ ಸಂಬಂಧವಿರುತ್ತದೆಯೋ ಅಲ್ಲಿ ಸ್ವಾರ್ಥಕ್ಕೆ ಬರೆ ಕೊಡದೆ ಕೇವಲ ಸಾಮದಾನದಿಂದ ಆತನ ವರ್ತನೆ ಬದಲಾಗುವುದಿಲ್ಲ ಅನ್ನುವುದು ವ್ಯವಹಾರದಲ್ಲಿಯ ಸಾಮಾನ್ಯ ನಿಯಮ ಅನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಈ ನ್ಯಾಯವನ್ನು ಮೇಲ್ಜಾತಿ ಬುದ್ಧಿವಂತ ಜನರಿಗೆ ಅನ್ವಯಿಸದೆ ಅವರು ನುಡಿದಂತೆ ನಡೆಯಲಾರರು ಅನ್ನುವ ದೆಸೆಯಿಂದ ನೋಡಿದಾಗ ಮೇಲ್ಜಾತಿಯವರ ಹಿತಕ್ಕೆ ಬರೆ ಎಳೆಯುವಂತಹದನ್ನೇನಾದರೂ ಮಾಡಲು ಸಾಧ್ಯವೇ? ಅನ್ನುವುದನ್ನು ದಲಿತರು ಮೊದಲು ಕಂಡುಹಿಡಿಯ ಬೇಕು. ಮೇಲ್ಜಾತಿಯವರು ಹಣವಂತರು, ದಲಿತರು ಬಡವರು. ಮೇಲ್ಜಾತಿಯವರು ಬಹುಸಂಖ್ಯಾ ತರು, ದಲಿತರು ಅಲ್ಪಸಂಖ್ಯಾತರು, ಮೇಲ್ಜಾತಿಯವರ ಕೈಯಲ್ಲಿ ಆಡಳಿತವಿದೆ, ದಲಿತರ ಕೈಯಲ್ಲಿ ಆಡಳಿತವಿಲ್ಲ. ಇದೆಲ್ಲವನ್ನು ನೋಡಿ ಸಾಮಾನ್ಯರಿಗೆ ದಲಿತರಿಲ್ಲದೆ ಮೇಲ್ಜಾತಿಯವರು ಬದುಕಬಹುದು. ಆದರೆ ಮೇಲ್ಜಾತಿಯರಿಲ್ಲದೆ ದಲಿತರು ಬದುಕಲಾರರು ಎಂದೇ ಅನಿಸುತ್ತದೆ. ಹೀಗಿರುವಾಗ ಮೇಲ್ಜಾತಿಯವರ ಹಿತಕ್ಕೆ ಬರೆ ಎಳೆದರೆ ಏನು ಸಾಧಿಸಿದಂತಾಗುತ್ತದೆ ಅನ್ನುವ ಭ್ರಮೆಯಲ್ಲೇನಾದರೂ ದಲಿತರು ಕುಳಿತರೆ ನಗೆಪಾಟಲಿಗೀಡಾದಾರು, ಅಷ್ಟೇಯಲ್ಲ ದಲಿತರು ಕೈಲಾಗದ ಜನ ಎಂದು ಅವರನ್ನು ಚೇಷ್ಟೆ ಮಾಡುವವರಿಗಷ್ಟೇಯಲ್ಲ ದಲಿತರಿಗೂ ಅನಿಸಬಹುದು. ಆದರೆ ಮೇಲ್ಜಾತಿ ಹಾಗೂ ದಲಿತರ ನಡುವಿನ ಬಲಾಬಲ ಪರೀಕ್ಷೆ ಕೇವಲ ತೋರಿಕೆ ಅನ್ನುವುದನ್ನು ನಮ್ಮ ದಲಿತ ಬಂಧುಗಳು ನೆನಪಿಡಬೇಕು. ಸಾಂಸಾರಿಕ ದೃಷ್ಟಿಯಿಂದ ನೋಡುವವರಿಗೆ ದಲಿತ ಸಮಾಜದ ನಿಜವಾದ ಸಾಮರ್ಥ್ಯ ಯಾವತ್ತೂ ಅರ್ಥವಾಗಲಾರದು. ಆದ್ದರಿಂದ ನಮ್ಮ ದಲಿತರಿಗೂ ಹಾಗೂ ಬ್ರಾಹ್ಮಣರಿಗೂ ನಾವು ಸೂಚಿಸು ವುದಿಷ್ಟೆ. ದಲಿತರು ಕೆಲವು ವಿಷಯಗಳಲ್ಲಿ ಬಲಹೀನರಾಗಿರುವುದು ನಿಜವಾದರೂ ಎಲ್ಲದರಲ್ಲೂ ದುರ್ಬಲರಾಗಿದ್ದಾರೆ ಎಂದು ಯಾರೂ ತಪ್ಪು ತಿಳಿಯಬಾರದು. ಇಂದು ದಲಿತರು ಹಿಂದೂ ಧರ್ಮವನ್ನು ಬಹಿಷ್ಕರಿಸಿ ಮುಸಲ್ಮಾನ ಧರ್ಮವನ್ನು ಸ್ವೀಕರಿಸಿದರೆ ಹಿಂದೂ ಸಮಾಜದ ಪಾಡೇನು? ಅನ್ನುವುದನ್ನು ಮೇಲ್ಜಾತಿಯ ಹಿಂದೂಗಳು ಯೋಚಿಸಲಿ.

ದಲಿತರು ಧರ್ಮಾಂತರಗೊಂಡರೆ ತಪ್ಪೇನು? ಸ್ವಚ್ಛ ಸಂಪೂರ್ಣ ಸ್ವಾತಂತ್ರ ಸಿಗುವುದರ ಬದಲು ಹೆಚ್ಚೆಚ್ಚು ಅಂದರೆ ವಸಾಹತುಗಳ ಸ್ವಾತಂತ್ರ ಸಿಕ್ಕೀತು ಅನ್ನುವುದು ಅನೇಕ ಸನಾತನ ಧರ್ಮದವರ ಅನಿಸಿಕೆಯಿದೆ ಅನ್ನುವುದನ್ನು ನಾವು ಬಲ್ಲೆವು. ಆದರೆ ಹೀಗನ್ನುವವರು ಈ ಪ್ರಶ್ನೆಯ ಬಗ್ಗೆ ಆಳವಾಗಿ ಚಿಂತಿಸಿದ್ದಾರೆ ಎಂದು ನಮಗನಿಸುತ್ತಿಲ್ಲ. ಸದ್ಯ ಆರಂಭವಾಗಿರುವ ವಾದವಿವಾದ ಸ್ವಾತಂತ್ರದ್ದಾಗಿರದೆ ಹಿಂದೂ ಮುಸಲ್ಮಾನರ ಸಂಸ್ಕೃತಿಯ ಸಂಗ್ರಾಮವಾಗಿದೆ. ಅದರಲ್ಲಿ ದಲಿತರ ಕುಮ್ಮಕ್ಕು ಅವರ ಸಂಖ್ಯೆಗಿಂತ ಮಹತ್ವದ್ದಾಗಿದೆ. ಇಂದು ದಲಿತರು ಹಿಂದೂಗಳಾಗಿ ಉಳಿದರೆ ಮಾತ್ರ ಆರ್ಯ ಧರ್ಮದ ಸಂಸ್ಕೃತಿ ಈ ದೇಶದಲ್ಲುಳಿಯಲು ಸಾಧ್ಯ. ಅವರೇ ನಾದರೂ ಹಿಂದೂಗಳಿಂದ ಮುಸಲ್ಮಾನರಾದರೆ ಆರ್ಯ ಸಂಸ್ಕೃತಿಯ ನಾಶವಾಗಿ ಮುಸ್ಲಿಂ ಸಂಸ್ಕೃತಿಯ ಪ್ರಾಬಲ್ಯ ಹೆಚ್ಚಲಿದೆ. ಈ ಎಲ್ಲ ಸ್ಥಿತ್ಯಂತರಗಳು ಕೇವಲ ದಲಿತರ ಸಾಮರ್ಥ್ಯದಿಂದಾಗಬಹುದಾಗಿವೆ. ಬೇರೆ ಯಾರಿಂದಲು ಅಲ್ಲ ಅನ್ನುವುದರಲ್ಲಿ ಅನುಮಾನವಿಲ್ಲ. ತಾವಿಲ್ಲದೆ ಮುಸಲ್ಮಾನರಿಗೆ ಜಯವಿಲ್ಲ ಹಾಗೂ ಹಿಂದೂಗಳಿಗೆ ತಾವಿಲ್ಲದೆ ಗತಿಯಿಲ್ಲ ಅನ್ನುವುದನ್ನಷ್ಟೆ ನಮ್ಮ ದಲಿತ ಬಾಂಧವರು ಗಮನದಲ್ಲಿಟ್ಟರೆ ಅವರಲ್ಲಿ ಎಷ್ಟೊಂದು ಸಾಮರ್ಥ್ಯವಿದೆ ಅನ್ನುವುದು ಅವರಿಗೆ ಗೊತ್ತಾಗಲಿದೆ ಹಾಗೂ ಈ ಸಾಮರ್ಥ್ಯವನ್ನವರು ಇಂತಹ ಆಪತ್ಕಾಲದಲ್ಲಿ ಉಪಯೋಗಿಸಿ ಅವರನ್ನು ಬಹಿಷ್ಕರಿಸಿದ ಮೇಲ್ಜಾತಿ ಹಿಂದೂಗಳನ್ನವರು ಬಹಿಷ್ಕರಿಸಿದರೆ ದಲಿತರು ಯಾರಿಗೂ ಬಾಗದ ಈ ಮೇಲ್ಜಾತಿ ಜನರಿಗೆ ಸರಿಯಾದ ಬುದ್ಧಿ ಕಲಿಸಬಹುದು. ಇದು ಅಲ್ಪಸ್ವಲ್ಪ ಶಕ್ತಿಯಲ್ಲ. ಈ ಶಕ್ತಿಯನ್ನು ಮನಗಂಡು ಅದನ್ನು ಈ ರೀತಿ ಉಪಯೋಗಿಸಿದರೆ ಮೇಲ್ಜಾತಿಯ ಜನ ಸರಿದಾರಿಗೆ ಬರಲು ಹೆಚ್ಚು ಸಮಯ ಕಾಯಬೇಕಿಲ್ಲ ಎನ್ನುವುದು ನಮ್ಮ ನಂಬಿಕೆ. ಹಾಗಾಗಿ ದಲಿತರು ತಮ್ಮ ಶಕ್ತಿಯನ್ನು ಸುತ್ತಿಡದೆ ಬಹಿಷ್ಕಾರ ಚಳವಳಿಯನ್ನು ಜಾರಿಗೆ ತರಬೇಕು ಎಂದೇ ನಾವವರಿಗೆ ಸೂಚಿಸು ತ್ತೇವೆ. ಈ ವಿಷಯದಲ್ಲಿ ಅವರು ಹಿಂದು ಮುಂದು ನೋಡಬಾರದು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News