ಲೋಕಪಾಲ್ ಜಾರಿಗೆ ಇಂದಿನಿಂದ ಅಣ್ಣಾ ಹಝಾರೆ ಉಪವಾಸ ಮುಷ್ಕರ

Update: 2018-03-23 06:42 GMT

ಹೊಸದಿಲ್ಲಿ, ಮಾ.23: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಕೇಂದ್ರ ಸರಕಾರದ ವಿರುದ್ಧ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಹಝಾರೆ ಹೋರಾಟವನ್ನು ಹತ್ತಿಕ್ಕಲು ರೈತರು ಆಗಮಿಸುತ್ತಿರುವ ರೈಲುಗಳನ್ನು ರದ್ದುಮಾಡಿರುವ ಸರಕಾರ ವಿಲಕ್ಷಣ ವರ್ತನೆ ತೋರಿದೆ.

ಸುಮಾರು ಏಳು ವರ್ಷಗಳ ಹಿಂದೆ ಹಝಾರೆ ನಡೆಸಿದ ಭ್ರಷ್ಟಾಚಾರ ವಿರೋಧಿ ಆಂದೋಲನ ಭಾರತದ ಕೋಟ್ಯಂತರ ಜನರ ಗಮನ ಸೆಳೆದಿತ್ತು. ಈ ಚಳುವಳಿಯ ಪ್ರಭಾವದಿಂದ ಯುಪಿಎ ಸರಕಾರ ಅಧಿಕಾರ ಕಳೆದುಕೊಂಡಿತ್ತು.

ಲೋಕಪಾಲ್‌ನ್ನು ರಚಿಸಿ ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ನಡೆಸಬೇಕೆಂದು 2011ರಲ್ಲಿ ಹೋರಾಟ ನಡೆಸಿರುವ ರಾಮಲೀಲಾ ಮೈದಾನದಲ್ಲೇ ಹಝಾರೆ ಉಪವಾಸ ಧರಣಿ ಕುಳಿತುಕೊಳ್ಳಲಿದ್ದಾರೆ.

ಈ ಬಾರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಹಝಾರೆ ಅವರ ನೇರ ಗುರಿಯಾಗುವ ಸಾಧ್ಯತೆಯಿದೆ. ಬೃಹತ್ ಸಂಖ್ಯೆಯಲ್ಲಿ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

   ಸರಕಾರದ ಧೋರಣೆಯನ್ನು ಖಂಡಿಸಿರುವ ಹಝಾರೆ,‘‘ರೈತರು ಆಗಮಿಸುತ್ತಿರುವ ರೈಲುಗಳನ್ನು ರದ್ದುಪಡಿಸುವ ಮೂಲಕ ಸರಕಾರ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ’’ ಎಂದು ಕಿಡಿಕಾರಿದರು.

‘‘ನನಗೆ ಸರಕಾರ ಪೊಲೀಸ್ ಭದ್ರತೆ ನೀಡಿದೆ. ಈ ಹಿಂದೆಯೂ ಪೊಲೀಸ್ ಭದ್ರತೆ ಬೇಡ ಎಂದಿದ್ದೆ. ನಿಮ್ಮ ಭದ್ರತೆ ನನ್ನನ್ನು ಉಳಿಸುವುದಿಲ್ಲ. ಪ್ರತಿಭಟನೆಗೆ ಆಗಮಿಸುತ್ತಿರುವ ರೈತರನ್ನು ತಡೆದು ನಿಮ್ಮ ಕಪಟ ಮನಸ್ಥಿತಿ ತೋರಿಸಿದ್ದೀರಿ. ಇದು ಸರಿಯಲ್ಲ’’ ಎಂದು ಹಝಾರೆ ಟ್ವೀಟರ್‌ನಲ್ಲಿ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕೇಂದ್ರ ಸರಕಾರ ಲೋಕಪಾಲ್‌ನ್ನು ಜಾರಿಗೆ ತರಬೇಕು ಹಾಗೂ ಎಲ್ಲ ರಾಜ್ಯ ಸರಕಾರಗಳು ಲೋಕಾಯುಕ್ತವನ್ನು ಸ್ಥಾಪಿಸಬೇಕು. ಮಾತ್ರವಲ್ಲ ರೈತರ ಯಾತನೆ ಬಗೆಹರಿಸುವ ವಿಧಾನ ಸೂಚಿಸಿರುವ ಸ್ವಾಮಿನಾಥನ್ ಆಯೋಗ ವರದಿಯನ್ನು ಅನುಷ್ಠಾನಕ್ಕೆ ತರಬೇಕೆನ್ನುವುದು ಹಝಾರೆ ಅವರ ಪ್ರಮುಖ ಬೇಡಿಕೆಯಾಗಿದೆ.

   ಅಣ್ಣಾ ಮೊದಲಿಗೆ ರಾಜ್‌ಘಾಟ್‌ಗೆ ಭೇಟಿ ನೀಡಲಿದ್ದು, ಆ ನಂತರ ರಾಮ್ ಲೀಲಾ ಮೈದಾನಕ್ಕೆ ತೆರಳಲಿದ್ದಾರೆ. ಅಲ್ಲಿ ಅವರು ಅನಿರ್ದಿಷ್ಟಾವಧಿ ಉಪವಾಸ ನಡೆಸಲಿದ್ದಾರೆ ಎಂದು ಹಝಾರೆ ಅನುಯಾಯಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News