ಪರಿವಾರ, ತಳವಾರ ಪರಿಶಿಷ್ಟರ ವರ್ಗಕ್ಕೆ ಸೇರಿಸಲು 2014 ರಲ್ಲಿಯೇ ಶಿಫಾರಸ್ಸು ಮಾಡಿತ್ತು: ಸಚಿವ ಮಹದೇವಪ್ಪ

Update: 2018-03-23 11:58 GMT

ಮೈಸೂರು,ಮಾ.23: ಪರಿವಾರ ತಳವಾರ ಸಮುದಾಯವನ್ನು ಪರಿಶಿಷ್ಠ ವರ್ಗಕ್ಕೆ ಸೇರಿಸಬೇಕು ಎಂದು 2014 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು ಎಂದು ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ಸರಕಾರಿ ಅತಿಥಿಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲೇ ದಿವಂಗತ ಬಿ.ರಾಚಯ್ಯ, ಸಿದ್ದರಾಮಯ್ಯ ಅವರು ಪರಿವಾರ ತಳವಾರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಎಂದು ಕೇಂದ್ರಕ್ಕೆ  ಶಿಫಾರಸ್ಸು ಮಾಡಲಾಗಿತ್ತು. ಆದರೆ ನಾಯಕ, ನಾಯ್ಕ ಎಂಬ ಗೊಂದಲ ದಿಂದ ಅದು ಈಡೇರಿರಲಿಲ್ಲ. ಈ ಸಮುದಾಯಗಳ ಆರ್ಥಿಕ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಅದನ್ನು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿ ಪರಿಶಿಷ್ಟ ವರ್ಗಕ್ಕೆ ಸೇರಿಸಿದೆ. ಹಾಗಾಗಿ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸುವೆ ಎಂದು ಹೇಳಿದರು.

ಟಿ.ನರಸೀಪುರದಲ್ಲಿ ಅಪ್ಪ ಮಕ್ಕಳ ಪೈಪೋಟಿ ಇದೆ ಅನ್ನುವ ಪ್ರಶ್ನೆ ಇಲ್ಲ. ಕೋಮುವಾದಿ ಶಕ್ತಿಗಳನ್ನು ಸೋಲಿಸುವುದು ನಮ್ಮ ಗುರಿ ಎಂದು ಸಚಿವ ಮಹದೇವಪ್ಪ ಹೇಳಿದರು.

ಸಕಲೇಶಪುರಕ್ಕೂ ನನ್ನ ಕರೆಯುತ್ತಿದ್ದಾರೆ, ಪ್ರೀತಿಯಿಂದ ಕರೆಯುತ್ತಾರೆ ಅಷ್ಟೇ ಎಂದರು. ಚುನಾವಣೆಗೆ ಸ್ಪರ್ಧಿಸದೆ ಪಕ್ಷ ಸಂಘಟನೆ ತೊಡಗಿಸಿಕೊಳ್ಳುವ ವಿಚಾರಕ್ಕೆ ಪ್ರತಿಕ್ರಿಯಿಸಿ ಸ್ಪರ್ಧೆ ಮಾಡದೆ  ಪಕ್ಷ ಸಂಘಟನೆ ಮಾಡುವುದೂ ಒಳ್ಳೆಯ ವಿಚಾರ ಎಂದ ಅವರು, ನಾನು ಸ್ಪರ್ಧೆ ಮಾಡಬೇಕೊ ಬೇಡವೋ, ಎಲ್ಲಿಂದ ಸ್ಪರ್ಧೆ ಮಾಡಬೇಕು ಎಲ್ಲವನ್ನೂ ಪಕ್ಷ ನಿರ್ಧರಿಸಲಿದೆ. ಹೈಕಮಾಂಡ್ ವಹಿಸುವ ಜವಾಬ್ದಾರಿಯನ್ನು ನಿಭಾಯಿಸುವುದಷ್ಟೇ ನನ್ನ ಕೆಲಸ. ಸಿ.ವಿ.ರಾಮನ್ ನಗರಕ್ಕೆ ಅರ್ಜಿ ಹಾಕಿಲ್ಲ ಎಂದು ಹೇಳಿದರು.

ಜೆಡಿಎಸ್ ಬಂಡಾಯ ಶಾಸಕರ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ ಬಂಡಾಯ ಅಂತಲ್ಲ, ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ. ಮೈಸೂರು ಸಮಾವೇಶದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗುವವರ ಪಟ್ಟಿಯನ್ನು ಕೆಪಿಸಿಸಿ ಸಿದ್ಧಪಡಿಸಲಿದೆ. ಅದರಲ್ಲಿ ಶಾಸಕರು, ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಯಾರು ಸೇರುತ್ತಾರೆ ಎಂಬುದನ್ನು ಕೆಪಿಸಿಸಿ ನಿರ್ಧರಿಸಲಿದೆ ಎಂದು ತಿಳಿಸಿದರು.

ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಪುಸ್ತಕ ವಿಚಾರಕ್ಕೆ ಪ್ರತಿಕ್ರಿಯಿಸಿ, ದಲಿತ ಚಳವಳಿ ಪ್ರಾರಂಭವಾದ ದಿನದಲ್ಲಿ ಸಂಘಟನೆಗಳ ಬೆನ್ನಿಗೆ ನಿಂತ ಮೊದಲ ರಾಜಕಾರಣಿ ನಾನು ಎನ್ನುವ ಮೂಲಕ ಶ್ರೀನಿವಾಸ ಪ್ರಸಾದ್ ಅವರಿಗೆ ತಿರುಗೇಟು ನೀಡಿದರು. ದಲಿತ ಚಳವಳಿಯನ್ನು ಇವರು ಬೆಳೆಸಿಯೇ ಇಲ್ಲ. ಯಾವುದೇ ದಲಿತ ನಾಯಕರನ್ನು ಬೇಕಾದರೂ ನೀವು ಕೇಳಿಕೊಳ್ಳಿ. ದಲಿತ ಸಂಘಟನೆಗಳನ್ನು ಕೇವಲ ಚುನಾವಣೆಗಾಗಿ ಮಾತ್ರ ಬಳಸಿಕೊಳ್ಳುತ್ತಿಲ್ಲ, ದಲಿತ ಚಳವಳಿಯನ್ನು ಬಲಗೊಳಿಸುವ ಸಲುವಾಗಿ ಸದಾ ಸಭೆಗಳನ್ನು ಮಾಡುತ್ತಿರುತ್ತೇನೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಮೂರ್ತಿ, ಮಾಜಿ ಮೇಯರ್ ಅಯೂಬ್ ಖಾನ್,  ಕಾಂಗ್ರೆಸ್ ಮುಖಂಡರಾದ ಮಂಜುಳ ಮಾನಸ, ಶಿವಣ್ಣ, ಭಾಸ್ಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News