ಹಾವೇರಿ: ಹೃದಯಾಘಾತದಿಂದ ಪರೀಕ್ಷಾ ಕೊಠಡಿಯಲ್ಲಿಯೇ ಮೃತಪಟ್ಟ ಶಿಕ್ಷಕ

Update: 2018-03-23 13:30 GMT

ಬೆಂಗಳೂರು, ಮಾ.23: ಎಸೆಸೆಲ್ಸಿ ಪರೀಕ್ಷಾ ಕೇಂದ್ರದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಶಿಕ್ಷಕರೊಬ್ಬರು ಪರೀಕ್ಷಾ ಕೊಠಡಿಯಲ್ಲಿಯೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಗುತ್ತಲದ ಆರ್.ಆರ್.ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಡೆದಿದೆ.

ಪರೀಕ್ಷಾ ಕಾರ್ಯದಲ್ಲಿ ನಿರತರಾಗಿದ್ದ ಎಸ್.ಆರ್.ಕೊರವರ(57) ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವ ಶಿಕ್ಷಕ. ಇವರು ಹಾವೇರಿಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ಇದ್ದ ಕಾರಣ ಇವರನ್ನು ಹಾವೇರಿಯ ಆರ್.ಆರ್.ಇಂಗ್ಲಿಷ್ ಮೀಡಿಯಂ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಉಸ್ತುವಾರಿಯಾಗಿ ನೇಮಿಸಲಾಗಿತ್ತು.

ಶಿಕ್ಷಕ ಎಸ್.ಆರ್.ಕೊರವರರಿಗೆ ಹೃದಯಘಾತವಾದ ಕೂಡಲೆ ವಿದ್ಯಾರ್ಥಿಗಳು ಅಲ್ಲಿಯೆ ಇದ್ದ ಭದ್ರತಾ ಸಿಬ್ಬಂದಿ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟರಲ್ಲಾಗಲೆ ಶಿಕ್ಷಕ ಕೊರವರ ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಈ ಅವಘಡ ಸಂಭವಿಸಿದರೂ ಗುತ್ತಲದ ಆರ್.ಆರ್.ಇಂಗ್ಲಿಷ್ ಮೀಡಿಯಂ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಸ್ಥಗಿತಗೊಳಿಸದೆ ಮುಂದುವರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News